ಬಿರುಗಾಳಿ ಮಳೆಗೆ ಹಾರಿದ ಪ್ರೌಢಶಾಲೆ ಕಟ್ಟಡದ ಶೀಟ್‌ಗಳು

| Published : May 12 2024, 01:23 AM IST

ಸಾರಾಂಶ

ಹಲವು ಮನೆಗಳು ಜಖಂ, ಯುವಕ ನಿತಿನ್ ಸೇರಿ ಮಹಿಳೆಗೆ ಗಾಯ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ ಚಿತ್ರದುರ್ಗದಲ್ಲಿ ಶುಕ್ರವಾರ ರಾತ್ರಿ ಬೀಸಿದ ಬಿರುಗಾಳಿ ಹಾಗೂ ಮಳೆಗೆ ನಗರದ ಹೊರವಲಯದಲ್ಲಿರುವ ಮಲ್ಲಾಪುರ ಗ್ರಾಮದ ಬಾಪೂಜಿ ಹಿರಿಯ ಪ್ರಾಥಮಿಕ ಶಾಲೆ, ಕನ್ನಡ ಮತ್ತು ಆಂಗ್ಲ ಮಾಧ್ಯಮ ಹಾಗೂ ಬಾಪೂಜಿ ಸಮನ್ವಯ ಪ್ರೌಢಶಾಲೆ ಕಟ್ಟಡದ ಮೇಲಿನ ಶೀಟ್‍ಗಳು ಕಬ್ಬಿಣದ ಹ್ಯಾಂಗರ್ ಗಳ ಸಮೇತ ಹಾರಿ ಬಿದ್ದಿರುವುದರಿಂದ ಸುಮಾರು ಏಳೆಂಟು ಮನೆಗಳು ಜಖಂಗೊಂಡಿವೆ. ಗ್ರಾಮದಿಂದ ಶಾಲೆ ಸ್ವಲ್ಪ ದೂರದಲ್ಲಿದ್ದರೂ ಹ್ಯಾಂಗರ್ ಗಳು ಹಾರಿ ಹೋಗಿ ಮತ್ತೊಂದು ಮನೆ ಮೇಲೆ ಬಿದ್ದಿರುವುದು ಅಚ್ಚರಿಯಾಗಿದೆ. ಶೀಟ್ ಹಾಗೂ ಹ್ಯಾಂಗರ್ ಹಾರಿ ಹೋಗಿದ್ದರಂದ ಗ್ರಾಮದ ನಿತಿನ್ ಹಾಗೂ ಕೃಷ್ಣಮ್ಮಳ ತಲೆಗೂ ಪೆಟ್ಟಾಗಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಇಬ್ಬರಿಗೂ ತಲೆಯಲ್ಲಿ ಹೊಲಿಗೆ ಹಾಕಲಾಗಿದೆ. ಸದಾನಂದಮೂರ್ತಿ ಎಂಬುವರ ಮನೆ ಮೇಲೆ ಶೀಟ್ ಬಿದ್ದಿದ್ದು, ಅಡುಗೆ ಮನೆ ಸೇರಿದಂತೆ ಇತರೆ ಕಡೆ ಹಾನಿಯಾಗಿದೆ. ಲೋಕೇಶ್ವರಯ್ಯ, ಲಲಿತಮ್ಮ, ನಾಗರಾಜಯ್ಯ, ಮೈಲಾರಪ್ಪ ಇವರ ಮನೆಗಳಿಗೂ ಹಾನಿಯಾಗಿದೆ. ದೊಡ್ಡ ಶೀಟ್‍ವೊಂದು ಖಾಲಿ ಜಾಗದಲ್ಲಿ ಬಿದ್ದಿರುವುದರಿಂದ ಯಾವುದೇ ಜೀವ ಹಾನಿಯಾಗಿಲ್ಲ. ರಾತ್ರಿ ವೇಳೆಯಾಗಿದ್ದರಿಂದ ಮಲಗಿದ್ದವರು ಶೀಟ್‍ಗಳು ಬಿದ್ದ ಶಬ್ದಕ್ಕೆ ಹೆದರಿ ಹೊರಗೆ ಓಡಿ ಹೋಗಿದ್ದಾರೆ. ಸ್ಥಳಕ್ಕೆ ತಹಸೀಲ್ದಾರ್ ಡಾ.ನಾಗವೇಣಿ, ಶಾಸಕ ವೀರೇಂದ್ರ ಪಪ್ಪಿ ಅವರ ಸಹೋದರ ನಾಗರಾಜ್ ಹಾಗೂ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ನಿರಾಶ್ರಿತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದಾರೆ.

ಮಾಡದಕೆರೆಯಲ್ಲಿ 42 ಮಿಮೀ ಮಳೆ

ಶುಕ್ರವಾರ ರಾತ್ರಿ ಸುರಿದ ಮಳೆಯ ವಿವರದನ್ವಯ ಜಿಲ್ಲೆಯ ಹೊಸದುರ್ಗ ತಾಲೂಕಿನ ಮಾಡದಕೆರೆಯಲ್ಲಿ 42 ಮಿಮೀ ಮಳೆಯಾಗಿದ್ದು, ಇದು ಜಿಲ್ಲೆಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆಯಾಗಿದೆ. ಹೊಸದುರ್ಗದಲ್ಲಿ 1.6 ಮಿಮೀ, ಬಾಗೂರು 5.3 ಮಿಮೀ, ಮತ್ತೋಡು 3 ಮಿಮೀ ಹಾಗೂ ಶ್ರೀರಾಂಪುರದಲ್ಲಿ 40.2 ಮಿಮೀ ಮಳೆಯಾಗಿದೆ. ಹಿರಿಯೂರಿನಲ್ಲಿ 5.2ಮಿಮೀ, ಇಕ್ಕನೂರು 1 ಮಿಮೀ, ಬಬ್ಬೂರು 11.6 ಮಿಮೀ ಮಳೆಯಾಗಿದೆ. ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಯಲ್ಲಿ 1.2 ಮಿಮೀ ಮಳೆಯಾಗಿದೆ. ಹೊಳಲ್ಕೆರೆ ತಾಲೂಕಿನ ರಾಮಗಿರಿಯಲ್ಲಿ 11.4 ಮಿಮೀ, ತಾಳ್ಯದಲ್ಲಿ 16.2 ಮಿಮೀ ಮಳೆಯಾಗಿದೆ. ಚಿತ್ರದುರ್ಗ ತಾಲೂಕಿನ ಲಕ್ಷ್ಮಿಸಾಗರ 13.2 ಮಿ.ಮೀ, ತುರುವನೂರು 9.6 ಮಿಮೀ, ಸಿರಿಗೆರೆ 11.8 ಮಿ.ಮೀ ಹಾಗೂ ಐನಹಳ್ಳಿ 9.2 ಮಿಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ತಿಳಿಸಿದೆ.

ಶಾಸಕರ ಬದಲಿಗೆ ಸಹೋದರ ನಾಗರಾಜ್‌ ಮಳೆ ಹಾನಿ ಪರಿಶೀಲನೆ

ಚಿತ್ರದುರ್ಗ: ಶಾಸಕ ವೀರೇಂದ್ರ ಪಪ್ಪಿ ಚಿತ್ರದುರ್ಗ ಕ್ಷೇತ್ರದ ಜನರಿಗೆ ಅಲಭ್ಯತೆ ಸಂದರ್ಭಗಳು ಮತ್ತೆ ಮುಂದುವರಿದಿದ್ದು ಅವರ ಸಹೋದರ ಕೆ.ಸಿ.ನಾಗರಾಜ್ ದರ್ಬಾರು ಎಂದಿನಂತೆ ಸಾಗಿದೆ. ಬಿರುಗಾಳಿ ಮಳೆಗೆ ಚಿತ್ರದುರ್ಗ ಹೊರವಲಯ ಮಲ್ಲಾಪುರ ಗ್ರಾಮದಲ್ಲಿ ಹಾನಿಯಾಗಿದ್ದು, ತಹಸೀಲ್ದಾರ ನಾಗವೇಣಿ ಶನಿವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಶಾಸಕ ವೀರೇಂದ್ರ ಪಪ್ಪಿ ಈ ವೇಳೆ ಖುದ್ದು ಹಾಜರಾಗಿ ತಮ್ಮ ಕ್ಷೇತ್ರದ ವ್ಯಾಪ್ತಿಯ ಜನರ ಅಹವಾಲು ಆಲಿಸಬೇಕಾಗಿತ್ತು. ವೀರೇಂದ್ರ ಪಪ್ಪಿ ಅನುಯಾಯಿಗಳು ಮೇಡಂ, ಎರಡು ನಿಮಿಷ ತಾಳಿ. ಇನ್ನೇನು ನಮ್ ನಾಗಣ್ಣ ಬರ್ತಾರೆ. ಅವರೊಟ್ಟಿಗೆ ಗ್ರಾಮಕ್ಕೆ ಹೋಗುವಿರಂತೆ ಎಂಬ ಮನವಿಯ ತಹಸೀಲ್ದಾರ್ ಸಮ್ಮುಖದಲ್ಲಿ ಹರವಿದರು.

ನಾಗಣ್ಣ ಅಂದಾಕ್ಷಣ ಅಧಿಕಾರಿಗಳ ಮನಸ್ಸ ತುಸು ಜಾಗೃತವಾಗುತ್ತದೆ. ಅಷ್ಟರ ಮಟ್ಟಿಗೆ ವೀರೇಂದ್ರ ಪಪ್ಪಿ ಅವರ ಸಹೋದರ ಕೆ.ಸಿ.ನಾಗರಾಜ್ ಎಲ್ಲವನ್ನು ನಿರ್ವಹಿಸುತ್ತಾರೆ. ಅಧಿಕಾರಿಗಳು ಕೂಡಾ ಶಾಸಕರಿಗೆ ಕೊಟ್ಟಷ್ಟೇ ಗೌರವವ ನಾಗರಾಜ್ ಗೆ ನೀಡುತ್ತಾರೆ. ಶನಿವಾರ ಮಲ್ಲಾಪುರ ಗ್ರಾಮದಲ್ಲಿ ನಡೆದ ಮಳೆ ಅನಾಹುತಗಳ ವೀಕ್ಷಿಸಲು ಶಾಸಕ ವೀರೇಂದ್ರ ಪಪ್ಪಿ ಅವರ ಪರವಾಗಿ ಸಹೋದರ ನಾಗರಾಜ್ ಭೇಟಿ ನೀಡಿದ್ದರು. ಅವರೊಟ್ಟಿಗೆ ತಹಸೀಲ್ದಾರ ನಾಗವೇಣಿ ಹೆಜ್ಜೆ ಹಾಕಿದ್ದು ವಿಶೇಷವಾಗಿ ಕಂಡಿತು.