ಸಾರಾಂಶ
- ಮೂರು ಸದಸ್ಯರನ್ನು ಹೊಂದಿದ ಜೆಡಿಎಸ್ ಗೆ ಒಲಿದ ಭಾಗ್ಯ । ಕಣಕ್ಕಿಳಿಯದ ಕಾಂಗ್ರೆಸ್,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸುಜಾತಾ ಶಿವಕುಮಾರ್ ರಾಜಿನಾಮೆಯಿಂದ ತೆರವಾಗಿದ್ದ ನಗರಸಭಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಜೆಡಿಎಸ್‌ನ ಶೀಲಾ ದಿನೇಶ್ ಅವಿರೋಧ ಆಯ್ಕೆಯಾಗಿದ್ದಾರೆ.
ನಗರ ಸಭಾಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿತ್ತು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಶೀಲಾ ದಿನೇಶ್ ನಾಮಪತ್ರ ಸಲ್ಲಿಕೆ ಮಾಡಿದ್ದರು. ಕಾಂಗ್ರೆಸ್ ನಿಂದ ಯಾರು ನಾಮಪತ್ರ ಸಲ್ಲಿಕೆ ಮಾಡಲಿಲ್ಲ. ಈ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆ ಮಾಡಿ ಅದು ಸಿಂಧುವಾದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯೂ ಆಗಿದ್ದ ಉಪ ವಿಭಾಗಾಧಿಕಾರಿ ಸುದರ್ಶನ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು.ಒಟ್ಟು 35 ಸದಸ್ಯ ಬಲದ ನಗರಸಭೆಯಲ್ಲಿ ಬಿಜೆಪಿ 18 ಸದಸ್ಯರಿದ್ದಾರೆ. ಜೆಡಿಎಸ್ ನ ಇಬ್ಬರು ಹಾಗೂ ಓರ್ವ ಜೆಡಿಎಸ್ ಬೆಂಬಲಿತ ಸದಸ್ಯೆ, 12 ಕಾಂಗ್ರೆಸ್ ಸದಸ್ಯರು, ಓರ್ವ ಎಸ್‌ಡಿಪಿಐ, ಓರ್ವ ಪಕ್ಷೇತರ ಸದಸ್ಯರು ನಗರಸಭೆಗೆ ಆಯ್ಕೆ ಯಾಗಿದ್ದರು.
ನಗರಸಭೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಹೊಂದಿದ್ದರೂ ಈ ಹಿಂದೆ ಜೆಡಿಎಸ್ ಪಕ್ಷದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಜೆಡಿಎಸ್ ಬೆಂಬಲಿತ ಸದಸ್ಯೆ ಶೀಲಾ ದಿನೇಶ್ ಅವರನ್ನು ತಮ್ಮ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು. ಹೀಗಾಗಿ ಕೇವಲ ಮೂರು ಸ್ಥಾನ ಪಡೆದಿದ್ದ ಜೆಡಿಎಸ್ ನಗರಸಭೆ ಅಧಿಕಾರದ ಚುಕ್ಕಾಣಿ ಹಿಡಿದಿದೆ.ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶೀಲಾ ದಿನೇಶ್ ಅವರ ಅವಿರೋಧ ಆಯ್ಕೆಗೆ ಸಹಕರಿಸಿದ ಬಿಜೆಪಿ ಮುಖಂಡರು ಅದರಲ್ಲಿಯೂ ಸಿ.ಟಿ.ರವಿ ಅವರಿಗೆ ಅಭಿನಂದನೆ ಸಲ್ಲಿಸು ತ್ತೇನೆ. ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಸಹಕಾರ ನೀಡಿದ ಶಾಸಕ ಎಚ್.ಡಿ. ತಮ್ಮಯ್ಯ ಅವರ ಸಹಕಾರವನ್ನು ಮರೆಯುವಂತಿಲ್ಲ ಎಂದರು.
ಅವಿರೋಧ ಆಯ್ಕೆ ಮುಳ್ಳಿನ ಹಾಸಿಗೆ ಇದ್ದಂತೆ. ನೂತನ ಅಧ್ಯಕ್ಷರು ಎಲ್ಲರನ್ನೂ ಒಮ್ಮತದಿಂದ ತೆಗೆದುಕೊಂಡು ಹೋಗಿ ನಗರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಸಿ.ಟಿ.ರವಿ ತಾವು ಕೊಟ್ಟ ಮಾತಿನಂತೆ ನಗರಸಭೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದರು.ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ನಗರಸಭಾ ವ್ಯಾಪ್ತಿಯ ಅಭಿವೃದ್ಧಿ ದೃಷ್ಟಿಯಿಂದ ನೂತನ ಅಧ್ಯಕ್ಷರ ಅವಿರೋಧ ಆಯ್ಕೆ ಮಾಡಲಾಗಿದೆ. ಶೀಲಾ ದಿನೇಶ್ ಅವರು ಪಕ್ಷೇತರರಾಗಿ ಗೆದ್ದಿದ್ದರಿಂದ ನಗರಸಭೆ ಅಧ್ಯಕ್ಷ ಚುನಾವಣೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸಲಿಲ್ಲ. ನೂತನ ಅಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಲು ಶ್ರಮಿಸಿದ 40 ಜನ ಸದಸ್ಯರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಕೋಟೆ ರಂಗನಾಥ್ ಅವರ ಮುಂದಾಳತ್ವದಲ್ಲಿ ಕಳೆದ 10 ತಿಂಗಳ ಹಿಂದೆಯೇ ನಗರಸಭೆ ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಸಭೆ ನಡೆದಿತ್ತು. ಹೀಗಾಗಿಯೇ ಜೆಡಿಎಸ್ ನ ಶೀಲಾ ದಿನೇಶ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದೆವು. ಕಾಂಗ್ರೆಸ್ ಸಹ ಯಾವುದೇ ಪ್ರತಿರೋಧ ಒಡ್ಡದೆ ಅವಿರೋಧ ಆಯ್ಕೆಗೆ ಸಹಕಾರ ನೀಡಿದೆ. ನೂತನ ಅಧ್ಯಕ್ಷರು ನಗರದ ಅಭಿವೃದ್ಧಿ ಮಾಡುವ ಜೊತೆಗೆ ಜನಾನುರಾಗಿಯು ತಮ್ಮ ಹೆಜ್ಜೆ ಗುರುತು ಮೂಡಿಸುವಂತಾಗಲಿ ಎಂದು ಆಶಿಸಿದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನು ಮಧುಕರ್, ಸದಸ್ಯರಾದ ಟಿ.ರಾಜಶೇಖರ್, ಎ.ಸಿ.ಕುಮಾರ್ ಗೌಡ, ಮಧುಕುಮಾರ್ ರಾಜ್ ಅರಸ್, ಸಿ.ಎನ್.ಅಕ್ಮಲ್, ಶಾದಬ್ ಇದ್ದರು.ಪೋಟೋ ಫೈಲ್ ನೇಮ್ 5 ಕೆಸಿಕೆಎಂ 2ಚಿಕ್ಕಮಗಳೂರು ನಗರಸಭೆಯ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಶೀಲಾ ದಿನೇಶ್ ಅವರಿಗೆ ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್. ಭೋಜೇಗೌಡ, ಸಿ.ಟಿ. ರವಿ ಅವರು ಅಭಿನಂದನೆ ಸಲ್ಲಿಸಿದರು.