ಸಾರಾಂಶ
ಕುರುಗೋಡು: ಪಟ್ಟಣದ ಚರಂಡಿ ನಿರ್ಮಾಣ, ರಸ್ತೆ ವಿಸ್ತರಣೆ, ಆಶ್ರಯ ಮನೆ, ನಿವೇಶನ, ಜಮೀನುಗಳಿಗೆ ರಸ್ತೆ, ಸಾರಿಗೆ ಸೌಲಭ್ಯ, ಆರೋಗ್ಯ ಸೇವೆ, ಸೇರಿದಂತೆ ಮೂಲಸೌಕರ್ಯಗಳ ಕುರಿತು ಸಾರ್ವಜನಿಕರಿಂದ ೨೯೮ ಅರ್ಜಿಗಳು ಪಟ್ಟಣದಲ್ಲಿ ಗುರುವಾರ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಲ್ಲಿಕೆಯಾದವು.ಅವುಗಳಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳ ಸಂಖ್ಯೆ ಹೆಚ್ಚಿದ್ದವು. ಸಾರ್ವಜನಿಕರಿಗೆ ಉಪಯುಕ್ತವಾಗುವ ಸಮಸ್ಯೆಗಳಿಗಿಂತ ವೈಯಕ್ತಿಕ ಸಮಸ್ಯೆಗಳ ಸಂಖ್ಯೆಯೇ ಅಧಿಕವಿತ್ತು.
ಶಾಸಕ ಜೆ.ಎನ್. ಗಣೇಶ ಕಾರ್ಯಕ್ರಮ ಉದ್ಘಾಟಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.ವಿದ್ಯಾರ್ಥಿಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರವನ್ನು ಶಾಲೆಯಲ್ಲೇ ವಿತರಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಂಪ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಯೋಜನೆ ರೂಪಿಸಿ ಕ್ರಮ ಕೈಗೊಳ್ಳಲಾಗಿದೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಸದಾ ಕಾಲ ಮಿಡಿಯುವೆ ಎಂದರು.
ಜಿಲ್ಲಾಧಿಕಾರಿ ಪ್ರಶಾಂತಕುಮಾರ್ ಮಿಶ್ರಾ ಮಾತನಾಡಿ, ಸಾರ್ವಜನಿಕರು ನೀಡಿರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸುವಂತೆ ಸಂಬಂಧಿಸಿದ ಇಲಾಖೆಗೆ ಕಳುಹಿಸಿ, ಪರಿಶೀಲನೆ ನಡೆಸುತ್ತೇವೆ. ಶೀಘ್ರದಲ್ಲಿ ಎಲ್ಲ ಸಮಸ್ಯೆಗಳ ಅರ್ಜಿಗಳಿಗೆ ಸ್ಪಂದಿಸಿ ಸೂಕ್ತ ಪರಿಹಾರ ಕಲ್ಪಿಸುತ್ತೇವೆ ಎಂದರು.ತಾಲೂಕಿನ ಸಾರ್ವಜನಿಕರಿಂದ ೨೯೮ ಅರ್ಜಿಗಳು ಸ್ವೀಕೃತಗೊಂಡಿವೆ. ಅದರಲ್ಲಿ ಕಂದಾಯ ಇಲಾಖೆಗೆ ೧೦೮ ಅರ್ಜಿ, ಭೂದಾಖಲೆಗಳ ಇಲಾಖೆಗೆ-೯, ತಾಪಂ-೨೭, ಗ್ರಾಮೀಣ ಕುಡಿಯುವ ನೀರು, ಒಳಚರಂಡಿ ಇಲಾಖೆ-೧, ಗ್ರಾಮೀಣಾಅಭಿವೃದ್ಧಿ ಮತ್ತು ಪಂಚಾಯತ್ ರಾಜ್- ೪೧, ಆಹಾರ ಮತ್ತು ನಾಗರಿಕ ಸರಬರಾಜು-೧೧, ನೀರಾವರಿ ಇಲಾಖೆ-೭, ಪುರಸಭೆ-೬೪, ಲೋಕೋಪಯೋಗಿ ಇಲಾಖೆ-೪, ಆರೋಗ್ಯ ಇಲಾಖೆ-೨ ಸೇರಿದಂತೆ ಇನ್ನುಳಿದ ಅರ್ಜಿಗಳು ಇತರೆ ಇಲಾಖೆಗೆ ಸಂಬಂಧಿಸಿದ್ದವು. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ್, ತೋರಣಕಲ್ಲು ಉಪವಿಭಾಗದ ಡಿವೈಎಸ್ಪಿ ಪ್ರಸಾದ್ ಗೋಖಲೆ, ತಹಶೀಲ್ದಾರ್ ಕೆ.ರಾಘವೇಂದ್ರ ಇದ್ದರು. ಪುರಸಭೆ ಮುಖ್ಯಾಧಿಕಾರಿ ದುರುಗಣ್ಣ, ತಾಪಂ ಇಒ ಕೆ.ವಿ. ನಿರ್ಮಲಾ ಇದ್ದರು.12ಕುರುಗೋಡು1
ಕುರುಗೋಡು ಪಟ್ಟಣದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯಿತು.