ಹಾವೇರಿ ನಗರದ ನಾಗೇಂದ್ರಮಟ್ಟಿಯ ಶಾಂತಿನಗರದಲ್ಲಿ ನಿರ್ಮಾಣ ಮಾಡುತ್ತಿರುವ ಜಿ 1 ಮಾದರಿಯ ಆಶ್ರಯ ಮನೆಗಳ ಕಾಮಗಾರಿಗಳನ್ನು ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಾವೇರಿ: ನಗರದ ನಾಗೇಂದ್ರಮಟ್ಟಿಯ ಶಾಂತಿನಗರದಲ್ಲಿ ನಿರ್ಮಾಣ ಮಾಡುತ್ತಿರುವ ಜಿ+1 ಮಾದರಿಯ ಆಶ್ರಯ ಮನೆಗಳ ಕಾಮಗಾರಿಗಳನ್ನು ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಆಶ್ರಯ ಮನೆಗಳ ಕಾಮಗಾರಿ ನಿಧಾನ ಗತಿಯಿಂದ ಸಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಉಪ ಸಭಾಧ್ಯಕ್ಷರು, ಎರಡು ತಿಂಗಳು ಒಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸುವಂತೆ ಸೂಚಿಸಿದರು.ಉಪಸಭಾಧ್ಯಕ್ಷರಾದ ರುದ್ರಪ್ಪ ಮಾನಪ್ಪ ಲಮಾಣಿ ಅವರು ಆಶ್ರಯ ಮನೆಗಳ ಪರಿಶೀಲನೆಯ ವಿಷಯ ಗೊತ್ತಾಗುತ್ತೆದಂತೆ ಸ್ಥಳಕ್ಕೆ ಆಗಮಿಸಿದ ಅಲೆಮಾರಿ ಸಮಾಜದ ಫಲಾನುಭವಿಗಳು, `ನಮಗೆ ಮಳೆಗಾಲದಲ್ಲಿ ಮನೆ ಇಲ್ಲದೆ ಇರುವುದರಿಂದ ತುಂಬಾ ತೊಂದರೆಯಾಗುತ್ತಿದ್ದು, ಮಕ್ಕಳೊಂದಿಗೆ ಜೀವನ ಸಾಗಿಸುವುದು ಕಷ್ಟವಾಗುತ್ತಿದೆ. ನಾವು ಅಲೆಮಾರಿ ಸಮಾಜದವರಾಗಿದ್ದು ಪ್ರತಿದಿನ ದುಡಿದರಷ್ಟೇ ಹೊಟ್ಟೆ ತುಂಬುತ್ತದೆ. ಆದ ಕಾರಣ ನಮಗೆ ನಮ್ಮ ಕುಟುಂಬದ ಮತ್ತು ಮಕ್ಕಳ ರಕ್ಷಣೆಗಾಗಿ ಆದಷ್ಟು ಬೇಗನೆ ಮನೆಗಳನ್ನು ನೀಡಬೇಕು'''''''' ಎಂದು ಶಾಸಕರಿಗೆ ಮನವಿ ಮಾಡಿದರು.

ನಂತರ ರುದ್ರಪ್ಪ ಲಮಾಣಿ ಮಾತನಾಡಿ, ಅಲೆಮಾರಿ ಸಮಾಜ ಮತ್ತು ಎಲ್ಲಾ ಬಡ ಫಲಾನುಭವಿಗಳಿಗೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ ಆದಷ್ಟು ಬೇಗ ಮನೆಗಳನ್ನು ಹಸ್ತಾಂತರಿಸುವ ಕೆಲಸ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಆಸರೆ ಸಮಿತಿ ಸದಸ್ಯರಾದ ಕುಮಾರ್ ಇನಾಮ್ದಾರ್, ಮಲ್ಲೇಶಪ್ಪ ಪಟ್ಟಣಶೆಟ್ಟಿ, ದಾಸಪ್ಪ ಕರ್ಜಗಿ, ನಾಗರಾಜ ಬಡಮ್ಮನವರ್ ಇತರರಿದ್ದರು.