ಕುರಿಗಾಹಿಗಳ ಹಿತರಕ್ಷಣಾ ಸಮಿತಿ ಪ್ರತಿಭಟನೆ

| Published : Jul 02 2025, 11:53 PM IST

ಕುರಿಗಾಹಿಗಳ ಹಿತರಕ್ಷಣಾ ಸಮಿತಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಅರಣ್ಯ ಇಲಾಖೆ ಸೇರಿದಂತೆ ಇತರೆ ಜಾಗೆಗಳಲ್ಲಿ ಕುರಿಗಾಹಿಗಳನ್ನು ತಡೆದು ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ. ಪಾರಂಪರಿಕ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗದಿದ್ದಲ್ಲಿ ರಾಜ್ಯಾದ್ಯಂತ ಸಮಾಜದ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಧುರೀಣ ಭರಮು ತುಂಗಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಅರಣ್ಯ ಇಲಾಖೆ ಸೇರಿದಂತೆ ಇತರೆ ಜಾಗೆಗಳಲ್ಲಿ ಕುರಿಗಾಹಿಗಳನ್ನು ತಡೆದು ಅಧಿಕಾರಿಗಳು ದರ್ಪ ಮೆರೆಯುತ್ತಿದ್ದಾರೆ. ಪಾರಂಪರಿಕ ಕುರಿಗಾಹಿಗಳ ಹಿತರಕ್ಷಣೆಗೆ ಸರ್ಕಾರ ಮುಂದಾಗದಿದ್ದಲ್ಲಿ ರಾಜ್ಯಾದ್ಯಂತ ಸಮಾಜದ ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಧುರೀಣ ಭರಮು ತುಂಗಳ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ತಾಲೂಕು ಕುರಿಗಾಹಿಗಳ ಹಿತರಕ್ಷಣಾ ಸಮಿತಿಯಿಂದ ಸೋಮವಾರ ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ರಾಜ್ಯದಲ್ಲಿರುವ ಶೋಷಿತ ಸಮುದಾಯಗಳು ಮತ್ತು ದುರ್ಬಲ ವರ್ಗದ ಜನತೆಯ ಮೂಲ ಕಸುಬಾದ ಕುರಿಗಾರಿಕೆ, ಆಶ್ರಿತ ಕುರಿಗಾಹಿಗಳ ಹಿತರಕ್ಷಣಾ ಕಾಯ್ದೆ ರೂಪಿಸಿ ಅದನ್ನು ತಕ್ಷಣ ಅನುಷ್ಠಾನಗೊಳಿಸುವ ಮೂಲಕ ಸರ್ಕಾರಗಳು ಕುರಿಗಾಹಿಗಳ ಕುಟುಂಬಗಳಿಗೆ ಭದ್ರತೆ ಒದಗಿಸಬೇಕು ಎಂದರು.

ಬನಹಟ್ಟಿಯ ಶ್ರೀಈಶ್ವರಲಿಂಗ ಮೈದಾನದಿಂದ ಕುರಿಗಳೊಂದಿಗೆ ಪ್ರತಿಭಟನಾ ಮೆರವಣಿಗೆ ಪ್ರಮುಖ ಮಾರ್ಗದ ಮೂಲಕ ತಹಸೀಲ್ದಾರ್‌ ಕಚೇರಿಗೆ ತಲುಪಿತು. ತಾಲೂಕು ಕಚೇರಿ ಆವರಣ ಪ್ರವೇಶಿಸಕ್ಕೆ ಪೊಲೀಸರು ನಿರಾಕರಿಸಿ ಒಂದು ಗಂಟೆಗೂ ಹೆಚ್ಚು ಸಮಯ ತಡೆದರು. ಯಲ್ಲಪ್ಪ ಕಟಗಿ, ಮಲ್ಲಪ್ಪ ಸಿಂಗಾಡಿ, ಯಲ್ಲಪ್ಪ ಹ್ಯಾಗಾಡಿ ಮೊದಲಾದ ಧುರೀಣರು ತಹಸೀಲ್ದಾರ ಆವರಣಕ್ಕೆ ಕುರಿಮಂದೆ ಬಿಡಲು ಈಗ ನೀವೇ ನಿರಾಕರಿಸುತ್ತಿರುವಾಗ ಅರಣ್ಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳ ಮುಂದೆ ನಮ್ಮ ಗತಿ ಏನಾಗಬೇಡ? ಎಂದು ಪ್ರಶ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಡಿವೈಎಸ್ಪಿ ರೋಷನ್ ಜಮೀರ್‌ ಸ್ಥಳಕ್ಕಾಗಮಿಸಿ ತಹಸೀಲ್ದಾರ್‌ ಗಿರೀಶ ಸ್ವಾದಿಯವರ ಜೊತೆ ಮಾತುಕತೆ ನಡೆಸಿದ ಬಳಿಕ ಅನುಮತಿಸಲಾಯಿತು. ಸಭೆಯಲ್ಲಿ ಧುರೀಣರಾದ ರಂಗನಗೌಡ ಪಾಟೀಲ, ಅರ್ಜುನ ಜಿಡ್ಡಿಮನಿ, ಯಲ್ಲಪ್ಪ ಹ್ಯಾಗಾಡಿ, ಹೊನ್ನಪ್ಪ ಬಿರಡಿ, ಶಿವಗೊಂಡ ಸನದಿ ಮಾತನಾಡಿ, ಪಾರಂಪರಿಕ ಕುರಿಗಾಹಿಗಳ ರಕ್ಷಣೆಗೆ ಕಾನೂನು ರಚಿಸಿ ತಕ್ಷಣ ಜಾರಿಗೊಳಿಸುವ ಮೂಲಕ ಕುರಿಗಾಹಿಗಳ ಹಿತ ಕಾಯಲು ಆಗ್ರಹಿಸಿದರು.ತಾಲೂಕು ಪಶು ವೈದ್ಯಾಧಿಕಾರಿ ಬಸವರಾಜ ಗೌಡರ ಉಪಸ್ಥಿತಿಯಲ್ಲಿ ತಹಸೀಲ್ದಾರ್‌ ಗಿರೀಶ ಸ್ವಾದಿ ಪ್ರತಿಭಟನಾಕಾರರಿಗೆ ಕುರಿಗಾಹಿಗಳ ಹಿತಕ್ಕಾಗಿ ಮುಂದಿನ ವಾರ ಮುಖಂಡರ ಸಭೆ ನಡೆಸಿ, ಸ್ಥಳೀಯ ಅರಣ್ಯ ಇಲಾಖೆ, ಪಶು ಇಲಾಖೆ ಸಿಬ್ಬಂದಿ ಜೊತೆಗೆ ಚರ್ಚಿಸಿ ಸ್ಥಳೀಯವಾಗಿ ಪರಿಹಾರ ಮಾರ್ಗ ಕಾಣಲು ಮತ್ತು ಸರ್ಕಾರಕ್ಕೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿ ಗಮನ ಸೆಳೆಯುವ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪ್ರಭು ಪೂಜಾರಿ, ಸಂಜು ಹಾಡಕರ, ಪ್ರಕಾಶ ಮುಧೋಳ, ಮಾಳು ಹಿಪ್ಪರಗಿ, ಮಲ್ಲಿಕಾರ್ಜುನ ವಂದಾಲ, ಪರಪ್ಪ ಆಲಕನೂರ, ಭೀಮಶಿ ಹಿರೇಕುರುಬರ, ಶಂಕರ ಆಲಕನೂರ ಸೇರಿದಂತೆ ನೂರಾರು ಸಂಖ್ಯೆಯ ಕುರುಬ ಸಮಾಜದ ಧುರೀಣರು ನೇತೃತ್ವ ವಹಿಸಿದ್ದರು.ಮಹಾಲಿಂಗಪುರ ಪಿಎಸ್ಸೈ ಕಿರಣ್‌, ಎಲ್‌.ಮಧು, ತೇರದಾಳ ಪಿಎಸ್ಸೈ ಶಿವಾನಂದ ಸಿಂಗನ್ನವರ ಸಿಬ್ಬಂದಿ ಬಂದೋಬಸ್ತ ವಹಿಸಿದ್ದರು.