30- 35 ವರ್ಷದಿಂದ ಹುಬ್ಬಳ್ಳಿ-ಧಾರವಾಡದ ರಾಜಕಾರಣದಿಂದ ದೂರವಾಗಿ ಮಾಜಿ ಸಿಎಂ ಶೆಟ್ಟರ್ ಇದೀಗ ಬೀಗರ ಊರಲ್ಲಿ ಕಮಾಲ್‌ ಮಾಡಲು ಹೊರಟಿದ್ದಾರೆ.

ಶಿವಾನಂದ ಗೊಂಬಿ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಬೆಳಗಾವಿ ಲೋಕಸಭೆ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌ ಹೆಸರನ್ನು ಬಿಜೆಪಿ ಅಖೈರುಗೊಳಿಸಿ ಘೋಷಿಸಿದೆ. ಇದರಿಂದಾಗಿ ವಿಧಾನಸಭೆಯಲ್ಲಿ ಸೋತಿದ್ದ ಶೆಟ್ಟರ್‌ ಇದೀಗ ಲೋಕಸಭೆ ಚುನಾವಣೆ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಇದರೊಂದಿಗೆ 30- 35 ವರ್ಷದಿಂದ ಹುಬ್ಬಳ್ಳಿ-ಧಾರವಾಡದ ರಾಜಕಾರಣದಿಂದ ದೂರವಾಗಿ ಬೀಗರ ಊರಲ್ಲಿ ಕಮಾಲ್‌ ಮಾಡಲು ಹೊರಟಿದ್ದಾರೆ.

1990ರಿಂದ ಸಕ್ರಿಯ ರಾಜಕಾರಣದಲ್ಲಿರುವ ಶೆಟ್ಟರ್‌, ಒಂದು ಹಂತದಲ್ಲಿ ಅದೃಷ್ಟದ ರಾಜಕಾರಣಿ ಎಂದೇ ಹೆಸರು ಪಡೆದವರು. ಸರಳ, ಸಜ್ಜನಿಕೆಗೆ ಹೆಸರಾದವರು. ಕುಟುಂಬದಲ್ಲೇ ಜನಸಂಘದ ರಕ್ತ ಹೊಂದಿರುವ ಶೆಟ್ಟರ್‌, ಉತ್ತರ ಕರ್ನಾಟಕದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಪ್ರಮುಖರಲ್ಲಿ ಒಬ್ಬರು. ಈದ್ಗಾ ಮೈದಾನ ಹೋರಾಟದಲ್ಲಿ ಪಾಲ್ಗೊಂಡಿದ್ದ ಶೆಟ್ಟರ್‌ 1994ರಲ್ಲಿ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. ಅಲ್ಲಿಂದ ರಾಜಕಾರಣದಲ್ಲಿ ಹಿಂದಿರುಗಿ ನೋಡಿದವರೇ ಅಲ್ಲ. ಬರೋಬ್ಬರಿ 6 ಸಲ ಶಾಸಕರಾಗಿ ಆಯ್ಕೆಯಾಗಿ ಜನಪ್ರಿಯತೆಯನ್ನು ಗಳಿಸಿದವರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ, ವಿರೋಧ ಪಕ್ಷದ ನಾಯಕ, ಮುಖ್ಯಮಂತ್ರಿ, ಸ್ಪೀಕರ್‌, ಸಚಿವಗಿರಿ ಹೀಗೆ ಹಲವು ಹುದ್ದೆಗಳು ಅವರನ್ನು ಅರಸಿಕೊಂಡು ಬಂದಿದ್ದವು.

ಆದರೆ 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್‌ ನಿರಾಕರಿಸಿತು. ಇದರಿಂದ ಮುನಿಸಿಕೊಂಡು ಕಾಂಗ್ರೆಸ್‌ಗೆ ಜಿಗಿದರು. ಆದರೆ ಮೊದಲ ಬಾರಿಗೆ ಅದೃಷ್ಟ ಕೈಕೊಟ್ಟಿತು. ಚುನಾವಣೆಯಲ್ಲಿ ತಮ್ಮ ಶಿಷ್ಯನ ಎದುರಿಗೆ ಸೋಲನ್ನು ಅನುಭವಿಸಿದರು. ಆದರೆ ಸುತ್ತಮುತ್ತಲಿನ ಕ್ಷೇತ್ರಗಳಲ್ಲಿ ಶೆಟ್ಟರ್‌ ಪಕ್ಷ ಬಿಟ್ಟಿದ್ದರ ಪರಿಣಾಮವನ್ನು ಬಿಜೆಪಿ ಎದುರಿಸುವಂತಾಗಿದ್ದು ಸುಳ್ಳಲ್ಲ. ಕೆಲವೆಡೆ ಪಕ್ಷದ ಅಭ್ಯರ್ಥಿಗಳು ಸೋತಿದ್ದುಂಟು. ಇವರಿಂದ ಪಕ್ಷಕ್ಕೆ ಆದ ಲಾಭದಿಂದಾಗಿ ಕಾಂಗ್ರೆಸ್‌ ವಿಧಾನ ಪರಿಷತ್‌ ಸದಸ್ಯನನ್ನಾಗಿ ಮಾಡಿತ್ತು. ಮರಳಿ ಮತ್ತೆ ಬಿಜೆಪಿಗೆ ತೆರಳಿದರು.

ಕೊನೆಗೆ ಬೆಳಗಾವಿ ಫಿಕ್ಸ್‌:

ಬಿಜೆಪಿಗೆ ಮರಳಿದ ಶೆಟ್ಟರ್‌ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಗುಸುಗುಸು ಕೂಡ ಪ್ರಾರಂಭವಾಗಿತ್ತು. ಆರಂಭದಲ್ಲಿ ಧಾರವಾಡ, ಹಾವೇರಿ- ಗದಗ ಕ್ಷೇತ್ರಗಳಲ್ಲೂ ಶೆಟ್ಟರ್‌ ಹೆಸರು ಕೇಳಿ ಬಂದಿತ್ತು. ಆದರೆ ಹೈಕಮಾಂಡ್‌ ಈ ಎರಡು ಕ್ಷೇತ್ರಗಳನ್ನು ಬಿಟ್ಟು ಇದೀಗ ಬೆಳಗಾವಿಗೆ ಇವರ ಹೆಸರನ್ನು ಫಿಕ್ಸ್‌ ಮಾಡಿದೆ. ಬೆಳಗಾವಿ ಕ್ಷೇತ್ರಕ್ಕೆ ಶೆಟ್ಟರ್‌ಗೆ ಟಿಕೆಟ್‌ ಕೊಡುವುದಕ್ಕೆ ಅಲ್ಲಿನ ಸ್ಥಳೀಯರಿಂದ ವಿರೋಧ ಕೂಡ ವ್ಯಕ್ತವಾಗಿತ್ತು. ಅದನ್ನೆಲ್ಲ ಮ್ಯಾನೇಜ್‌ ಮಾಡಿ ಶೆಟ್ಟರ್‌ ಅವರಿಗೆ ಟಿಕೆಟ್‌ ಕೊಟ್ಟಿದೆ ಎಂದು ಹೇಳಲಾಗುತ್ತಿದೆ.

ಬೆಳಗಾವಿಗೆ ಏಕೆ ಕೊಟ್ಟಿದ್ದು ಎಂಬ ಪ್ರಶ್ನೆ ಕೂಡ ಬೆಂಬಲಿಗರಲ್ಲಿ ಮೂಡಿರುವುದುಂಟು. ಬೆಳಗಾವಿ ಶೆಟ್ಟರ್‌ ಬೀಗರ ಕ್ಷೇತ್ರ. ಕೇಂದ್ರದ ಮಾಜಿ ಸಚಿವ ಸುರೇಶ ಅಂಗಡಿ ನಿಧನರಾದ ಬಳಿಕ ಎದುರಾದ ಉಪಚುನಾವಣೆಯಲ್ಲಿ ತಂತ್ರ ಪ್ರತಿತಂತ್ರ ಮಾಡಿ ಮಂಗಲಾ ಅಂಗಡಿ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದು ಇದೇ ಶೆಟ್ಟರ್‌. ಮುಖ್ಯಮಂತ್ರಿ, ವಿಪಕ್ಷ ನಾಯಕ ಹೀಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಶೆಟ್ಟರ್‌ ಅವರಿಗೆ ಬೆಳಗಾವಿಯಲ್ಲಿ ಹಿಡಿತವೂ ಉಂಟು. ಹೀಗಾಗಿ ಅಲ್ಲಿ ಗೆದ್ದು ಬರಬಹುದು. ಅಲ್ಲಿ ಎದುರಾಗಿರುವ ವಿರೋಧವನ್ನು ಹಿರಿಯರಾದ ಶೆಟ್ಟರ್‌ ಸಮರ್ಥವಾಗಿ ನಿಭಾಯಿಸಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬಲ್ಲಿ ಸಾಮರ್ಥ್ಯ ಹೊಂದಿದ್ದಾರೆ ಎಂಬ ನಂಬುಗೆ, ಲೆಕ್ಕಾಚಾರ ಪಕ್ಷದ್ದು.

35 ವರ್ಷದ ನಂಟು:

ಹುಬ್ಬಳ್ಳಿ-ಧಾರವಾಡದ ರಾಜಕಾರಣದೊಂದಿಗೆ ಶೆಟ್ಟರ್‌ ನಂಟು 35 ವರ್ಷಕ್ಕೂ ಅಧಿಕ ಕಾಲದ್ದು. 1994ರಲ್ಲಿ ಶೆಟ್ಟರ್‌ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರು. ಹಾಗೆ ನೋಡಿದರೆ ಅದಕ್ಕಿಂತ ಮುಂಚೆ ಅಂದರೆ 1990ರಿಂದಲೇ ಸಾರ್ವಜನಿಕ ಜೀವನದಲ್ಲಿ ತೊಡಗಿಸಿಕೊಂಡವರು. ಅಲ್ಲಿಂದ ಈ ವರೆಗೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡವರು. ಒಂದು ಹಂತದಲ್ಲಿ ಬಿಜೆಪಿಯಲ್ಲಿ ಜಿಲ್ಲೆಯ ಮಟ್ಟಿಗೆ ಹೈಕಮಾಂಡ್‌ ಎಂಬಂತೆ ಇದ್ದವರು ಶೆಟ್ಟರ್‌ ಹಾಗೂ ಪ್ರಹ್ಲಾದ ಜೋಶಿ. ಇದೀಗ ತಮ್ಮ 30-35 ವರ್ಷದ ಇಲ್ಲಿನ ರಾಜಕಾರಣ ಬಿಟ್ಟು ಶೆಟ್ಟರ್‌ ಬೆಳಗಾವಿ ರಾಜಕಾರಣಕ್ಕೆ ಶಿಫ್ಟ್‌ ಆಗುತ್ತಿದ್ದಾರೆ. ಇದು ಅವರ ಅಭಿಮಾನಿಗಳಲ್ಲಿ ಬೇಸರವನ್ನುಂಟು ಮಾಡುತ್ತಿರುವುದು ಸಹಜ.

ಅದೃಷ್ಟದ ರಾಜಕಾರಣಿ ಎಂದೇ ಹೇಳುವ ಶೆಟ್ಟರ್‌ ಇದೀಗ ಲೋಕಸಭೆ ಚುನಾವಣೆ ಮೂಲಕ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಜ್ಜಾಗಿದ್ದಾರೆ. ಬೀಗರ ಊರಲ್ಲಿ ಮಾಡುತ್ತಾರೆಯೇ ಕಮಾಲ್‌ ಎಂಬ ಕುತೂಹಲ ಮನೆ ಮಾಡಿರುವುದಂತೂ ಸುಳ್ಳಲ್ಲ. ಏನಾಗುತ್ತದೆಯೆಂಬುದನ್ನು ಕಾಯ್ದು ನೋಡಬೇಕಷ್ಟೇ!ಶೆಟ್ಟರ್‌ ರಾಜಕೀಯ ಜೀವನದ ಟೈಂ ಲೈನ್‌

1990- ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಬಿಜೆಪಿ ಅಧ್ಯಕ್ಷ

1994- ಬಿಜೆಪಿ ಜಿಲ್ಲಾಧ್ಯಕ್ಷ ಸ್ಥಾನ

1994- ಪ್ರಥಮ ಬಾರಿಗೆ ಚುನಾವಣೆ ಎದುರಿಸಿ ಶಾಸಕರಾದರು.

1999- ಪ್ರತಿಪಕ್ಷದ ನಾಯಕ

2006- ಬಿಜೆಪಿ- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಕಂದಾಯ ಸಚಿವ

2008- ಸ್ಪೀಕರ್‌

2009- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ

2013- ಮುಖ್ಯಮಂತ್ರಿ

2019- ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ

2005ರಲ್ಲಿ ರಾಜ್ಯಾಧ್ಯಕ್ಷರು

2023ರಲ್ಲಿ ಕಾಂಗ್ರೆಸ್‌ಗೆ ವಲಸೆ, ವಿಧಾನ ಪರಿಷತ್‌ ಸದಸ್ಯತ್ವ

2024ರ ಜನವರಿಯಲ್ಲಿ ಮರಳಿ ಬಿಜೆಪಿಗೆ