ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ನೌಕರರಿಗೆ ಕಿರುಕುಳ ನೀಡಿ, ಒಬ್ಬ ಸಿಬ್ಬಂದಿಯ ಆತ್ಮಹತ್ಯೆಗೆ ಕಾರಣೀಭೂತರಾಗಿ ಆರೋಪಿ ಸ್ಥಾನದಲ್ಲಿರುವ ಬೆಳಗಾವಿ ತಹಸೀಲ್ದಾರ್‌ರಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಬಸವರಾಜ ನಾಗರಾಳ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ನಿಯೋಜಿಸಲು ರಾಜ್ಯ ಸರ್ಕಾರ ಮುಂದಾಗಿರುವ ಕ್ರಮಕ್ಕೆ ಸಂಸದ, ಮಾಜಿ ಸಿಎಂ ಜಗದೀಶ ಶೆಟ್ಟರ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.ಎಸ್‍ಡಿಸಿ ರುದ್ರಣ್ಣ ಅವರ ಆತ್ಮಹತ್ಯೆಗೆ ಬಸವರಾಜ ನಾಗರಾಳ ಅವರೇ ಕಾರಣ ಎಂಬ ಆರೋಪ ಎದುರಿಸುತ್ತಿರುವ ತಹಸೀಲ್ದಾರ್ ಅವರನ್ನು ಬೆಳಗಾವಿ ಕಚೇರಿಗೆ ಪುನರ್ ನೇಮಕ ಮಾಡುವುದರ ಹಿಂದಿನ ಮರ್ಮವೇನು? ಬೆಳಗಾವಿಯಲ್ಲಿ ಕೆಲಸ ಮಾಡಲು ಸಮರ್ಥವಾದ ಬೇರೆ ತಹಶೀಲ್ದಾರರು ಸರ್ಕಾರದಲ್ಲಿ ಯಾರು ಇಲ್ಲವೇ ಎಂದು ಅವರು ಪ್ರಶ್ನಿಸಿದರು.ಪ್ರಕರಣ ಇತ್ಯರ್ಥವಾಗುವವರೆಗೆ ಯಾವುದೇ ಕಾರಣಕ್ಕೂ ಅದೇ ಹುದ್ದೆಗೆ ಹಿಂದಿನ ತಹಸೀಲ್ದಾರರನ್ನು ನೇಮಿಸಬಾರದು ಎಂದು ಮುಖ್ಯಮಂತ್ರಿಗೆ, ಕಂದಾಯ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದಾರೆ. ಮತ್ತೆ ಇಂತಹ ಅಧಿಕಾರಿಗಳನ್ನು ನೇಮಕ ಮಾಡುತ್ತಿರುವುದರಿಂದ ನೌಕರರಿಗೆ ಕಿರುಕುಳ ನೀಡುವ ಅಧಿಕಾರಿಗಳಿಗೆ ಮಣೆ ಹಾಕಿದಂತಾಗುವುದು. ಇದರಿಂದ ಇನ್ನುಳಿದ ನೌಕರರಿಗೂ ತಪ್ಪು ಸಂದೇಶ ಹೋಗುತ್ತದೆ. ಅಲ್ಲದೆ ಈ ತಹಸೀಲ್ದಾರರ ಕಾರ್ಯವೈಖರಿಯನ್ನು ಖಂಡಿಸಿ ಅನೇಕ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.ಭ್ರಷ್ಟ ಅಧಿಕಾರಿಗಳಿಗೆ ಮಣೆ ಹಾಕುವುದನ್ನು ಬಿಟ್ಟು ಜನಾನುರಾಗಿ, ಪ್ರಾಮಾಣಿಕ ಅಧಿಕಾರಿಯನ್ನು ಬೆಳಗಾವಿ ತಹಸೀಲ್ದಾರ್ ಹುದ್ದೆಗೆ ನೇಮಕ ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡಿರುವ ದ್ವಿತೀಯ ದರ್ಜೆ ಸಹಾಯಕ ರುದ್ರಣ್ಣನ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗುವವರೆಗೆ ಸರ್ಕಾರ ಯಾವುದೇ ಕಾರಣಕ್ಕೂ ಬೆಳಗಾವಿಗೆ ಮತ್ತೆ ಬಸವರಾಜ ನಾಗರಾಳ ಅವರನ್ನು ನೇಮಿಸಬಾರದೆಂದು ಒತ್ತಾಯಿಸಿದರು.ತಹಸೀಲ್ದಾರ್ ನಾಗರಾಳ ಕರ್ತವ್ಯಕ್ಕೆ ಹಾಜರು
ಬೆಳಗಾವಿ ತಹಸೀಲ್ದಾರ್ ಕಚೇರಿಯ ಎಸ್‌ಡಿಸಿ ರುದ್ರಣ್ಣ ಯಡವನ್ನವರ ಆತ್ಮಹತ್ಯೆ ಪ್ರಕರಣದ ಪ್ರಮುಖ ಆರೋಪಿ ಆಗಿದ್ದ ತಹಸೀಲ್ದಾರ್ ಬಸವರಾಜ ನಾಗರಾಳ ಎರಡು ತಿಂಗಳ ಸುದೀರ್ಘ ರಜೆ ಬಳಿಕ ಬುಧವಾರ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಮೇಲಧಿಕಾರಿಗಳ ಕಿರುಕುಳದಿಂದ ಬೇಸತ್ತು ಕಳೆದ ನವೆಂಬರ್ 5 ರಂದು ರುದ್ರಣ್ಣ ತಹಸೀಲ್ದಾರ್ ಕಚೇರಿಯ ತಹಸೀಲ್ದಾರ್ ಕೊಠಡಿಯಲ್ಲೇ ನೇಣಿಗೆ ಶರಣಾಗಿದ್ದ.