ಸಾರಾಂಶ
ಮುಸ್ಲಿಂರ ಹಿತರಕ್ಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ವಿಷಯವನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಸಮರ್ಥಿಸಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮುಸ್ಲಿಂರ ಹಿತರಕ್ಷಣೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಆ ವಿಷಯವನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪ ಸದಸ್ಯ ಜಗದೀಶ ಶೆಟ್ಟರ ಸಮರ್ಥಿಸಿಕೊಂಡಿದ್ದಾರೆ.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಅರ್ಥವೇ ಆಗುತ್ತಿಲ್ಲ, ಮುಖ್ಯಮಂತ್ರಿಗಳು ನೀಡಿದ ಹೇಳಿಕೆ ನಾನು ನೋಡಿದ್ದೇನೆ. ಮುಸ್ಲಿಂ ಹಿತರಕ್ಷಣೆ ಮಾಡುತ್ತೇವೆ ಎಂದಿದ್ದಾರೆ. ಬೇರೆ ಬೇರೆ ಸಮಾಜದ ಕಾರ್ಯಕ್ರಮಕ್ಕೆ ಹೋದಾಗ ಅವರವರ ಹಿತರಕ್ಷಣೆ ಮಾಡುತ್ತೇನೆ ಎಂದು ಹೇಳುವುದು ಸಹಜ. ನಿಮ್ಮ ಹಿತರಕ್ಷಣೆ ಮಾಡುವುದಿಲ್ಲ ಎಂದು ಹೇಳಲು ಆಗುತ್ತದೆಯೇ? ಅದನ್ನು ದೊಡ್ಡದು ಮಾಡುವ ಅವಶ್ಯಕತೆ ಇಲ್ಲ. ಅದನ್ನು ಬಿಟ್ಟು ಬಿಡಿ. ಇದಕ್ಕೆಲ್ಲ ಸಿದ್ದರಾಮಯ್ಯ ಅವರೇ ಸಮರ್ಥರಿದ್ದಾರೆ. ಅವರೇ ಅದಕ್ಕೆ ಸಮರ್ಪಕ ಉತ್ತರ ನೀಡಲಿದ್ದಾರೆ ಎಂದರು.
ಉತ್ತರ ಕರ್ನಾಟಕ ಅಭಿವೃದ್ಧಿ ವಿಚಾರವಾಗಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆ ಆಗಲೇಬೇಕು. ವಿರೋಧ ಪಕ್ಷದವರ ಮೇಲೆ ಕೂಡ ಸಾಕಷ್ಟು ಜವಾಬ್ದಾರಿ ಇದೆ. ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದವರು ಧ್ವನಿ ಎತ್ತಿದರೆ ಖಂಡಿತವಾಗಿ ಚರ್ಚೆ ಆಗುತ್ತದೆ ಎಂದರು.ರಾಜ್ಯಾಧ್ಯಕ್ಷ ನೇಮಕ ನಂತರ ಬಸನಗೌಡ ಪಾಟೀಲ ಯತ್ನಾಳ್ ಅಸಮಾಧಾನ ವಿಚಾರವಾಗಿ ಮಾತನಾಡಿ, ಅವರವರೇ ಅದರ ಬಗ್ಗೆ ಮಾತನಾಡಬೇಕು. ನಾನು ಅದರ ಬಗ್ಗೆ ಏನು ಮಾತನಾಡಲಿ? ನಾನು ಹಿಂದೇನೂ ಸಾಕಷ್ಟು ಬಾರಿ ಹೇಳಿದ್ದೇನೆ. ಪದೇ ಪದೇ ಹೇಳುವುದರಲ್ಲಿ ಅರ್ಥವಿಲ್ಲ ಎಂದರು.