ಸಾರಾಂಶ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿವಿಧ ಮುಖಂಡರು ಹಾಗೂ ಕಾರ್ಯಕರ್ತರು, ಬುಧವಾರ ಬಿಜೆಪಿಗೆ ಮರುಸೇರ್ಪಡೆಯಾದರು.ಇಲ್ಲಿನ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ, ಸತೀಶ ಮಾಡಳ್ಳಿ, ವಿರೂಪಾಕ್ಷಿ ರಾಯನಗೌಡರ, ಸದಾಶಿವ ಚೌಶೆಟ್ಟಿ, ಭಾರತಿ ಟಪಾಲ ಸೇರಿದಂತೆ 109ಕ್ಕೂ ಹೆಚ್ಚು ಜನರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.
ಮಾಜಿ ಸಿಎಂ ಜಗದೀಶ ಶೆಟ್ಟರ್, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಪಕ್ಷದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಎಲ್ಲರನ್ನು ಪಕ್ಷಕ್ಕೆ ಬರಮಾಡಿಕೊಂಡರು.ಜತೆಯಾಗಿ ಹೆಜ್ಜೆ ಇಡೋಣ:
ಈ ವೇಳೆ ಮಾತನಾಡಿದ ಶೆಟ್ಟರ್, ಏನೇ ಭಿನ್ನಾಭಿಪ್ರಾಯಗಳಿದ್ದರೂ ಅವುಗಳನ್ನು ಬದಿಗೊತ್ತಿ ಪಕ್ಷವನ್ನು ಸಂಘಟಿಸೋಣ. ಎಲ್ಲರೂ ಜತೆ ಜತೆಗೆ ಹೆಜ್ಜೆ ಇಡೋಣ ಎಂದು ಕರೆನೀಡಿದರು.ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಬಿಜೆಪಿ 370 ಹಾಗೂ ಎನ್‌ಡಿಎ 400 ಸ್ಥಾನಗಳಲ್ಲಿ ಜಯ ಗಳಿಸಬೇಕು. ಇದು ಪ್ರಧಾನಿ ನರೇಂದ್ರ ಹಾಗೂ ಗೃಹಸಚಿವ ಅಮಿತ್ ಶಾ ಅವರ ಗುರಿ. ಈ ಗುರಿಯನ್ನು ಪಕ್ಷ ಮುಟ್ಟಬೇಕೆಂದು ಎಲ್ಲರೂ ಒಟ್ಟಾಗಿ ಶ್ರಮಿಸಬೇಕು. ಪಕ್ಷವನ್ನು ಇನ್ನಷ್ಟು ಸದೃಢವನ್ನಾಗಿಸಬೇಕು. ಈ ಮೂಲಕ ಮೋದಿ ಅವರನ್ನು 3ನೆಯ ಬಾರಿಗೆ ಪ್ರಧಾನಿಯನ್ನಾಗಿ ಮಾಡಬೇಕು ಎಂದರು.
ಕಳೆದ ಹತ್ತು ವರ್ಷಗಳಲ್ಲಿ ಭಾರತಕ್ಕೆ ಇಡೀ ಜಗತ್ತಿನಲ್ಲೇ ವಿಶೇಷ ಗೌರವ ಸಿಗುವಂತೆ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿ. ಅತ್ತ ಪ್ರಗತಿ ಇತ್ತ ಮೂಲಸೌಲಭ್ಯಗಳನ್ನು ಕಲ್ಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಭಾರತದಲ್ಲಿ ನಡೆದಿರುವ; ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ವಿದೇಶಗಳಲ್ಲೂ ಚರ್ಚೆ ನಡೆಯುತ್ತಿದೆ ಎಂದರು.ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ತಿಪ್ಪಣ್ಣ ಮಜ್ಜಗಿ ಮಾತನಾಡಿ, ರಾಜಕಾರಣದಲ್ಲಿ ಇಂತಹ ಘಟನೆಗಳು ಸಹಜ. ಪಕ್ಷದಿಂದ ತಾವು ದೊರವಾಗಿದ್ದರು ನಾವೆಲ್ಲರೂ ಒಂದೇ ಪಕ್ಷದವರಾಗಿದ್ದೇವು. ಪಕ್ಷ ಸಂಘಟನೆ ಹಾಗೂ ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ಮಾಡುವ ಉದ್ದೇಶದಿಂದ ಸ್ವಲ್ಪ ತಡವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ಲೋಕಸಭಾ ಚುನಾವಣಾ ಉಸ್ತವಾರಿ ಎಂ. ನಾಗರಾಜ, ವಿಧಾನಪರಿಷತ್ ಸದಸ್ಯ ಪ್ರದೀಪ ಶೆಟ್ಟರ, ವೀರಣ್ಣ ಸವಡಿ, ಉಮೇಶ ಕೌಜಗೇರಿ, ದತ್ತಮೂರ್ತಿ ಕುಲಕರ್ಣಿ, ಸಂತೋಷ ಚಹ್ವಾಣ, ಮಹೇಂದ್ರ ಕೌತಾಳ, ಭೀರಪ್ಪ ಖಂಡೇಕರ ಸೇರಿದಂತೆ ಅನೇಕರಿದ್ದರು.ಕೊನೆಗೂ ಬಂತು ಮಹೂರ್ತ:
ಕಳೆದ ವಿಧಾನಸಭೆ ಚುನಾವಣೆ ವೇಳೆ ಶೆಟ್ಟರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಅದಾದ ಬಳಿಕ ಕಳೆದ ತಿಂಗಳು ಮರಳಿ ಬಿಜೆಪಿಗೆ ಬಂದಿದ್ದರು. ಆದರೆ ಆಗ ಅವರೊಂದಿಗೆ ತೆರಳಿದ್ದ ಅವರ ಬೆಂಬಲಿಗರು ಮಾತ್ರ ಬಿಜೆಪಿ ಮರು ಸೇರ್ಪಡೆ ಆಗಿರಲಿಲ್ಲ. ಈ ಬಗ್ಗೆ ಬಹಳಷ್ಟು ಚರ್ಚೆ ನಡೆಯುತ್ತಿತ್ತು. ಈ ಬಗ್ಗೆ ಎರಡು ಬಾರಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ ಸೇರಿದಂತೆ ಹಲವು ಮುಖಂಡರು ಸಭೆ ನಡೆಸಿದ್ದುಂಟು. ಕೊನೆಗೆ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಒಪ್ಪಿಗೆ ದೊರೆತ್ತಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಪಕ್ಷಕ್ಕೆ ಸೇರ್ಪಡೆಯಾದರು. ಮಲ್ಲಿಕಾರ್ಜುನ ಸಾವಕಾರ, ನಾಗೇಶ ಕಲಬುರ್ಗಿ ಸೇರಿದಂತೆ 110ಕ್ಕೂ ಹೆಚ್ಚು ಶೆಟ್ಟರ ಬೆಂಬಲಿಗರು ಪಕ್ಷಕ್ಕೆ ಮರುಸೇರ್ಪಡೆಯಾದರು.ಪಾಕ್ ಪರ ಘೋಷಣೆ: ಶಕ್ತಿಕೇಂದ್ರದಲ್ಲಿ ಇದೇ ಮೊದಲು: ಶೆಟ್ಟರ್
ರಾಜ್ಯದ ಶಕ್ತಿಕೇಂದ್ರ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೇಳಿ ಬಂದಿರುವುದು ಇದೇ ಮೊದಲು. ಪಾಕ್ ಪರ ಘೋಷಣೆ ಕೂಗಿದವರ ವಿರುದ್ಧ ಕಟ್ಟುನಿಟ್ಟಿನ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಹೇಳಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇಶದ ಇತಿಹಾಸದಲ್ಲಿ ಶಕ್ತಿ ಸೌಧದಲ್ಲಿ ಇಂತಹ ದೇಶದ್ರೋಹದ ಕೆಲಸ ಆಗಿರಲಿಲ್ಲ. ಈ ಬಗ್ಗೆ ನಾಸಿರ್ ಹುಸೇನ್ ಅವರನ್ನು ಪತ್ರಕರ್ತರು ಪ್ರಶ್ನಸಿದರೆ, ಹಾರಿಕೆ ಉತ್ತರ ನೀಡುವ ಮೂಲಕ ಮಾಧ್ಯಮಗಳ ಮೇಲೆಯೇ ಗೂಂಡಾ ವರ್ತನೆ ತೋರಿದ ಮುಖಂಡನ ವಿರುದ್ಧವೂ ಕ್ರಮ ಕೈಗೊಳ್ಳಬೇಕು. ಇದು ಕಾಂಗ್ರೆಸ್‌ನ ಮನಸ್ಥಿತಿ ತೋರಿಸುತ್ತದೆ ಎಂದು ಟೀಕಿಸಿದರು.ಪಾಕಿಸ್ತಾನದ ಮೆಂಟಾಲಿಟಿ ಹೊಂದಿರುವ ಕಾಂಗ್ರೆಸ್ ನಾಯಕರಿಗೆ ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಅರಿವಿಲ್ಲ. ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಘನಘೋರ ಸ್ಥಿತಿ ತಲುಪಿದೆ. ಭಾರತದಂತಹ ರಾಷ್ಟ್ರ, ಮೋದಿ ಅವರಂಥ ಪ್ರಧಾನಿ ಬೇಕು ಎಂದು ಸ್ವತಃ ಪಾಕಿಸ್ತಾನದ ಪ್ರಜೆಗಳೇ ಬಹಿರಂಗವಾಗಿ ಹೇಳುತ್ತಿದ್ದಾರೆ. ಆದರೆ, ನಮ್ಮ ಅನ್ನ ಉಂಡವರೇ ದೇಶದ್ರೋಹಿ ಘೋಷಣೆ ಕೂಗುತ್ತಿರುವುದು ವಿಪರ್ಯಾಸ ಎಂದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ತುಷ್ಟೀಕರಣದ ರಾಜಕಾರಣ ಬಿಟ್ಟು ತಕ್ಷಣ ದೇಶದ್ರೋಹಿಯನ್ನು ಬಂಧಿಸಿ, ಕಾನೂನಾತ್ಮಕ ಕ್ರಮಕ್ಕೆ ಮುಂದಾಗಬೇಕು. ಇದೇ ವಿಚಾರವಾಗಿ ಮುಂದಿನ ದಿನಗಳಲ್ಲಿ ಹೆಚ್ಚು ಕಡಿಮೆ ಆದರೆ, ನೀವೆ ಹೋಣೆ ಆಗುತ್ತೀರಿ. ಈಗಾಗಲೇ ಇಡೀ ದೇಶದಲ್ಲೇ ಅಸ್ತಿತ್ವ ಕಳೆದುಕೊಂಡಿರುವ ಕಾಂಗ್ರೆಸ್, ರಾಜ್ಯದಲ್ಲೂ ನಿರ್ನಾಮ ಆಗಲಿದೆ ಎಂದು ತಿಳಿಸಿದರು.ರಾಜೀನಾಮೆ ಕೊಟ್ಟು ಹೋಗಲಿ:ರಾಜ್ಯಸಭೆ ಚುನಾವಣೆಯ ಅಡ್ಡ ಮತದಾನದ ವಿಚಾರವಾಗಿ ಮಾತನಾಡಿದ ಅವರು, ಹಲವು ತಿಂಗಳಿನಿಂದ ಎಸ್.ಟಿ. ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಮನಸ್ಥಿತಿ ಬೇರೆ ಇತ್ತು. ಅಡ್ಡ ಮತದಾನ ಮಾಡುವ ಯೋಜನೆ ಇದ್ದರೆ ಶಾಸಕ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಬೇಕಿತ್ತು. ಈ ಬಗ್ಗೆ ಬಿಜೆಪಿ ವರಿಷ್ಠರು ಕಾನೂನು ಕ್ರಮಕ್ಕೆ ಮುಂದಾಗಲಿದ್ದಾರೆ. ಅನರ್ಹತೆಯ ಪರಿಣಾಮ ಎದುರಿಸಬೇಕಾಗಿಯೂ ಬರಬಹುದು ಎಂದರು.
;Resize=(128,128))
;Resize=(128,128))
;Resize=(128,128))