ಸಾರಾಂಶ
ಕನ್ನಡಪ್ರಭ ವಾರ್ತೆ ಮೂಲ್ಕಿ
ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದಲ್ಲಿ ಏ.22ರಿಂದ 30ರ ವರೆಗೆ ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಕಾರ್ಯಕ್ರಮಗಳು ಜರುಗಲಿದೆ. 26ರಂದು ಶ್ರೀ ಉಳ್ಳಾಯ ಕೊಡಮಣಿತ್ತಾಯ ದೈವಗಳಿಗೆ ಬ್ರಹ್ಮಕುಂಭಾಭಿಷೇಕವು ಬ್ರಹ್ಮಶ್ರೀ ವೇದವ್ಯಾಸ ತಂತ್ರಿ, ಶಿಬರೂರು ಅವರ ನೇತೃತ್ವದಲ್ಲಿ ನಡೆಯಲಿದ್ದು, ಅದೇ ದಿನ ರಾತ್ರಿ ಕ್ಷೇತ್ರದ ನಾಗಮಂಡಲ ಸೇವೆ ನೆರವೇರುವುದು ಎಂದು ಶಿಬರೂರು ಶ್ರೀ ಕೊಡಮಣಿತ್ತಾಯ ಕ್ಷೇತ್ರದ ತಿಬಾರ್ ಗುತ್ತಿನಾರ್ ಶಿಬರೂರು ಗುತ್ತು ಉಮೆಶ್ ಎನ್. ಶೆಟ್ಟಿ ಹೇಳಿದರು.ಶಿಬರೂರು ಕ್ಷೇತ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 27ರಿಂದ 30ರ ತನಕ ವಿಶೇಷ ಜಾತ್ರಾ ಮಹೋತ್ಸವ ನಡೆಯಲಿದೆ. 1976ರಲ್ಲಿ ಶಿಬರೂರುಗುತ್ತು ಮುದ್ದಣ್ಣ ಶೆಟ್ಟರ ಮುತುವರ್ಜಿಯಲ್ಲಿ ಶಿಬರೂರು ಕ್ಷೇತ್ರವು ಸಂಪೂರ್ಣ ನವೀಕರಣಗೊಂಡಿದ್ದು 2010ರಲ್ಲಿ ಕೊಂಜಾಲಗುತ್ತು ಪ್ರಭಾಕರ ಶೆಟ್ಟರ ನೇತೃತ್ವದಲ್ಲಿ ಹಾಗೂ ಊರವರ ಸಹಕಾರದಿಂದ ಸುಮಾರು 9 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಂಡು ಈಗ ಮತ್ತೊಮ್ಮೆ ನೂತನ ಧ್ವಜಸ್ತಂಭ ಸಹಿತ ಸುತ್ತುಪೌಳಿ ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಈ ವರ್ಷ ಕೈಗೊಂಡಿದ್ದು ಪುನರ್ ನಿರ್ಮಾಣ ನಡೆಯುತ್ತಿದೆ. ಕ್ಷೇತ್ರವು ದೈವ ಕ್ಷೇತ್ರ ಮಾತ್ರವಲ್ಲದೆ ನಾಗ ಕ್ಷೇತ್ರವು ಆಗಿರುತ್ತದೆ. ಕ್ಷೇತ್ರದ ವಿಶೇಷವೇನೆಂದರೆ ಬ್ರಹ್ಮಕುಂಭಾಭಿಷೇಕ ನಡೆಯುವ ಸಂದರ್ಭದಲ್ಲಿ ನಾಗಮಂಡಲ ಸೇವೆಯು ನಡೆಯುತ್ತಿರುವುದು ಎಂದು ಹೇಳಿದರು.
ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಕ್ಯೆಯ್ಯೂರು ಗುತ್ತು ಮಾತನಾಡಿ ಕ್ಷೇತ್ರದಲ್ಲಿ ಸಂಪೂರ್ಣ ಅಭಿವೃದ್ಧಿ ಕಾಮಗಾರಿಗಳು ವೇಗಗತಿಯಲ್ಲಿ ನಡೆಯುತ್ತಿದೆ. ದೈವಕ್ಕೆ 2 ಕೋಟಿ ಮೌಲ್ಯದ ಸ್ವರ್ಣ ಪಲ್ಲಕ್ಕಿಯನ್ನು 19 ರಂದು ಶ್ರೀ ಕ್ಷೇತ್ರ ಕಟೀಲಿನಿಂದ ಸಂಜೆ 4 ಗಂಟೆಗೆ ಮೆರವಣಿಗೆಯಲ್ಲಿ ಶ್ರೀ ಕ್ಷೇತ್ರಕ್ಕೆ ಊರ ಪರವೂರ ಭಕ್ತರು ಸೇವೆಯ ರೂಪದಲ್ಲಿ ಸಲ್ಲಿಸಲಿದ್ದಾರೆ. ರಸ್ತೆ ಅಭಿವೃದ್ಧಿ ಮತ್ತು ನೂತನ ಗೋಪುರ ನಿರ್ಮಾಣ ಮತ್ತು ಸುತ್ತುಪೌಳಿ ಕಾಮಗಾರಿ ಪ್ರಗತಿಯಲ್ಲಿದೆ. ಬ್ರಹ್ಮಕುಂಭಾಭಿಷೇಕ, ನಾಗಮಂಡಲ ಸಂದರ್ಭದಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮ, ನಿರಂತರ ಭಜನಾ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಮಾತನಾಡಿದ ಕ್ಷೇತ್ರದ ಮೊಕ್ತೇಸರ ಮಧುಕರ ಅಮೀನ್, ಕಟೀಲು ಕ್ಷೇತ್ರಕ್ಕೂ ಕೊಡಮಣಿತ್ತಾಯ ಕ್ಷೇತ್ರಕ್ಕೂ ಅವಿನಾಭಾವ ನಂಟಿದ್ದು ಕಟೀಲು ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ದೇವಿ ಮತ್ತು ದೈವದ ಭೇಟಿ ಅಪರೂಪವಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಾನಾ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು ದೇಶ ವಿದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಭಕ್ತರು ದೈವದ ಸೇವೆಯಲ್ಲಿ ಕೈಜೋಡಿಸಲಿದ್ದಾರೆ. ಕಳೆದ 8 ತಿಂಗಳಲ್ಲಿ 3.5 ಕೋಟಿ ರುಪಾಯಿ ವೆಚ್ಚದ ಸಿವಿಲ್ ಕಾಮಗಾರಿ, 5 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಬ್ರಹ್ಮಕುಂಭಾಭಿಷೇಕ ಸಂದರ್ಭದಲ್ಲಿ ನಿತ್ಯ ಉಪಹಾರ, ಅನ್ನದಾನ ನಡೆಯಲಿದ್ದು ರಾಜ್ಯಾದ್ಯಂತ 3-4 ಲಕ್ಷ ಜನ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆಯೆಂದು ತಿಳಿಸಿದರು.
ಸಮಿತಿಯ ಅಧ್ಯಕ್ಷ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ ಮಾತನಾಡಿ ಭಕ್ತರ ಸಹಕಾರದಿಂದ ಅಭಿವೃದ್ದಿ ಕಾರ್ಯ ನಡೆಯುತ್ತಿದ್ದು ಕಾಯರ್ಕ್ರಮದ ಯಶಸ್ವಿಗೆ 22 ಸಮಿತಿಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು. ಶಿಬರೂರು- ಕಟೀಲು ಕ್ಷೇತ್ರಕ್ಕೆ ಅವಿನಾಭಾವ ನಂಟುಕೊಡಮಣಿತ್ತಾಯ ಕ್ಷೇತ್ರವು ಮಂಗಳೂರಿನಿಂದ 25 ಕಿ.ಮೀ. ದೂರದಲ್ಲಿ ಕಟೀಲು ಕ್ಷೇತ್ರದಿಂದ 2 ಕಿ.ಮೀ (ಕಿನ್ನಿಗೋಳಿಯಿಂದ 3 ಕಿ.ಮೀ) ದೂರದಲ್ಲಿ ಪ್ರಕೃತಿ ರಮಣೀಯ ಕಾರಣಿಕ ಕ್ಷೇತ್ರವಾಗಿದೆ. ನಂದಿನಿ ತಟದಲ್ಲಿ ಶ್ರೀ ಉಳ್ಳಾಯ ಕೊಡಮಣಿತ್ತಾಯ ಹಾಗೂ ಪರಿವಾರ ದೈವಗಳು ಸುಮಾರು 700 ವರ್ಷಗಳ ಹಿಂದೆ ದೈವ ಭಕ್ತರಾದ ಶಿಬರೂರು ಗುತ್ತು ತಿಮ್ಮತ್ತಿ ಕರಿವಾಳರವರ ಭಕ್ತಿಗೆ ಒಲಿದು ನೆಲೆ ನಿಂತಿವೆ. ಶ್ರೀ ಕ್ಷೇತ್ರ ಶಿಬರೂರಿಗೂ ಶ್ರೀ ಕ್ಷೇತ್ರ ಕಟೀಲಿಗೂ ಅವಿನಾಭಾವ ಸಂಬಂಧವಿದ್ದು ಕಟೀಲು ಜಾತ್ರಾ ಸಂದರ್ಭದಲ್ಲಿ ಶ್ರೀ ದೈವವು ಭೇಟಿ ನೀಡುತ್ತಿರುವುದು ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. ಶ್ರೀ ಕ್ಷೇತ್ರವು ಮುಜರಾಯಿ ಇಲಾಖೆಗೆ ಸೇರಿದ ಎ ದರ್ಜೆಯ ದೈವಸ್ಥಾನವಾಗಿದ್ದು ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಧನು ಸಂಕ್ರಮಣದಂದು ಧ್ವಜಾರೋಹಣಗೊಂಡು ಎಂಟು ದಿನಗಳ ಪರ್ಯಂತ ಜಾತ್ರಾ ಮಹೋತ್ಸವ ಜರುಗುತ್ತಿದ್ದು ಲಕ್ಷಾಂತರ ಭಕ್ತರ ಆರಾಧ್ಯ ಕೇಂದ್ರವಾಗಿದೆ. ಕ್ಷೇತ್ರದ ತೀರ್ಥವು ವಿಷವನ್ನು ಅಮೃತ ಮಾಡುವಂತಹ ಶಕ್ತಿಯನ್ನು ಹೊಂದಿದ್ದು ಲಕ್ಷಾಂತರ ಭಕ್ತರು ತೀರ್ಥವನ್ನು ಸೇವಿಸಿ ಧನ್ಯರಾಗುತ್ತಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಯಿಂದ ಬೆಳ್ಳಿಯ ಕಲಶ ಸಮರ್ಪಣೆ
ಬಾಲಿವುಡ್ ನಟಿ ಶಿಲ್ಪಾಶೆಟ್ಟಿ ಮತ್ತು ಸಹೋದರಿ ಶಮಿತಾ ಶೆಟ್ಟಿ ಮೂರು ದಿನಗಳ ಕಾಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೈವಸ್ಥಾನಕ್ಕೆ ಶಿಲ್ಪಾ ಶೆಟ್ಟಿ ಬೆಳ್ಳಿಯ ಕಲಶ ನೀಡಿದ್ದಾರೆಂದು ಸಮಿತಿಯ ತುಕರಾಮ ಶೆಟ್ಟಿ ಪರ್ಲಬ್ಯೆಲುಗುತ್ತು ತಿಳಿಸಿದರು. ಕೊಡಮಣಿತ್ತಾಯನ ಮೇಲಿನ ಭಕ್ತಿಯಿಂದ ಚಿನ್ನದ ಪಲ್ಲಕ್ಕಿಗಾಗಿ ಭಕ್ತರು ತಮ್ಮ ಒಡವೆಯನ್ನೇ ದಾನ ರೂಪವಾಗಿ ನೀಡುತ್ತಿದ್ದಾರೆಂದು ಕ್ಷೇತ್ರದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಇದ್ದರು.