ಶಿಬರೂರು ಕೊಡಮಣಿತ್ತಾಯ ಕ್ಷೇತ್ರ ಬ್ರಹ್ಮಕುಂಭಾಭಿಷೇಕ ನಾಗಮಂಡಲ

| Published : Apr 26 2024, 12:49 AM IST

ಶಿಬರೂರು ಕೊಡಮಣಿತ್ತಾಯ ಕ್ಷೇತ್ರ ಬ್ರಹ್ಮಕುಂಭಾಭಿಷೇಕ ನಾಗಮಂಡಲ
Share this Article
  • FB
  • TW
  • Linkdin
  • Email

ಸಾರಾಂಶ

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂದೀಪ್‌ ದೇವಾಡಿಗ ಪುತ್ತೂರುರವರಿಂದ ಸ್ಯಾಕ್ಸೋಫೋನ್‌ ವಾದನ ನಡೆಯಿತು

ಕನ್ನಡಪ್ರಭ ವಾರ್ತೆ ಮೂಲ್ಕಿ

ಕೆಲವರಿಗೆ ಭಗವಂತ ನಮ್ಮನ್ನು ನೋಡುತ್ತಾನೆ ಎಂಬ ಭಯ ಇರುತ್ತದೆ, ಕೆಲವರಲ್ಲಿ ಭರವಸೆ ಇರುತ್ತದೆ. ತಪ್ಪು ಕೆಲಸ ಮಾಡಿದವನಿಗೆ ಮಾತ್ರ ಭಯ ಇರೋದರಿಂದ ದ ನಾವು ಭರವಸೆ ಹೊಂದಿದವರಾಗಬೇಕು. ನಮ್ಮಲ್ಲಿನ ಒಳ್ಳೆಯ ಗುಣಗಳನ್ನು ಹುಡುಕೋಣ. ಸತ್ಯದ ಹಾದಿಯಲ್ಲಿ ಮುಂದಕ್ಕೆ ಚಲಿಸುತ್ತ ಇರೋಣವೆಂದು ಆನೆಗುಂದಿ ಮಹಾಸಂಸ್ಥಾನದ ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿ ಹೇಳಿದರು.

ಶಿಬರೂರು ಕೊಡಮಣಿತ್ತಾಯ ಕ್ಷೇತ್ರದಲ್ಲಿ ನಡೆಯಲಿರುವ ಬ್ರಹ್ಮಕುಂಭಾಭಿಷೇಕ ನಾಗಮಂಡಲ ಪ್ರಯುಕ್ತ ಗುರುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.

ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇದಮೂರ್ತಿ ಕಮಲಾದೇವಿ ಪ್ರಸಾದ ಆಸ್ರಣ್ಣ ಮಾತನಾಡಿ, ಕೊಡಮಣಿತ್ತಾಯ ಅಂದರೆ ತುಂಬಿದ ಕೊಡದಲ್ಲಿ ಸಂಪತ್ತನ್ನು ಎತ್ತಿ ಹಿಡಿದ ದೈವ. ಸಂಪತ್ತು ಅಂದರೆ ಕೇವಲ ಹಣವಲ್ಲ, ಜನರ ಭಕ್ತಿ ಭಾವ, ಸತ್ಯ ತುಂಬಿರುವ ಸಂಪತ್ತು. ಅದು ಶಿಬರೂರಿನಲ್ಲಿ ಕಾಣಸಿಗುತ್ತದೆ. ಇಂತಹ ಶ್ರದ್ಧಾಕೇಂದ್ರ ಬೇರೆಲ್ಲೂ ಕಾಣಸಿಗದು ಎಂದರು. ಶ್ರೀ ಕ್ಷೇತ್ರ ಕರಿಂಜೆ ಮುಕ್ತಾನಂದ ಸ್ವಾಮೀಜಿ ಅವರು ಮಾತನಾಡಿ, ಇಲ್ಲಿನ ಪುಣ್ಯ ಕಾರ್ಯದಲ್ಲಿ ಪಾಲ್ಗೊಳ್ಳುವ ಮೂಲಕ ನಾವು ನಮ್ಮೊಳಗಿನ ಸ್ವಾರ್ಥ, ಮದ, ಮತ್ಸರ, ಅಸೂಯೆ ಎನ್ನುವ ವಿಷವನ್ನು ಕಳೆದುಕೊಂಡು ಸಾತ್ವಿಕರಾಗೋಣ ಎಂದು ಹೇಳಿದರು.

ಉಪನ್ಯಾಸ ನೀಡಿದ ಕ್ಯಾಫ್ಸ್ ಫೌಂಡೇಶನ್ ಸಂಸ್ಥಾಪಕ ಸಿಎಫ್‌ಸಿಎ ಚಂದ್ರಶೇಖರ ಶೆಟ್ಟಿ, ನಾವು ನಮ್ಮನ್ನು ನಂಬಬೇಕು, ನಮ್ಮಲ್ಲಿ ಭಯ ಇರಬಾರದು, ಅಳುಕು ಇರಬಾರದು. ಯುವಜನತೆ ಯಾವುದನ್ನೂ ತಮ್ಮಿಂದ ಆಗುವುದಿಲ್ಲ ಎಂದುಕೊಳ್ಳಬಾರದು. ಆಗಿಯೇ ಆಗುತ್ತದೆ ಎಂಬ ಛಲ ಇದ್ದರೆ ನಾವು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ. ನಾವು ನಮ್ಮ ಫೌಂಡೇಶನ್ ಮೂಲಕ ಏಕಬಳಕೆ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಕಾರ್ಯಕ್ರಮ ನಡೆಸುತ್ತ ಬಂದಿದ್ದೇವೆ. ಪ್ಲಾಸ್ಟಿಕ್ ಭೂಮಿಗೆ ಎಸೆಯಬೇಡಿ ಇದರಿಂದ ಪ್ರಾಣಿಗಳು ಸಾಯುತ್ತವೆ. ನಾವು ಪಾಪಕರ್ಮ ಎಸಗಿದಂತಾಗುತ್ತದೆ ಎಂದರು.

ಶ್ರೀ ಕ್ಷೇತ್ರ ಪೊಳಲಿಯ ಆನುವಂಶಿಕ ಮೊಕ್ತೇಸರ ಅಡಿಗಳು ಮಾಧವ ಭಟ್ಟ, ಶ್ರೀ ಕ್ಷೇತ್ರ ಶಿಬರೂರು ಮೊಕ್ತೇಸರ ಕಾಂತಪ್ಪ ಸಾಲಿಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೋಂಜಾಲುಗುತ್ತು, ಉದ್ಯಮಿ ಕರುಣಾಕರ ಎಂ. ಶೆಟ್ಟಿ ಮಧ್ಯಗುತ್ತು, ಉದ್ಯಮಿ ದಿವಾಕರ ಎಸ್. ಶೆಟ್ಟಿ ಕೋಂಜಾಲಗುತ್ತು, ಉದ್ಯಮಿ ಭಾಸ್ಕರ ಶೆಟ್ಟಿ ಕುಡ್ತಿಮಾರುಗುತ್ತು, ಉದ್ಯಮಿ ಕಿಶೋರ್ ಎಂ. ಶೆಟ್ಟಿ ಶಿಬರೂರುಗುತ್ತು, ಕೃಷ್ಣ ಡಿ. ಶೆಟ್ಟಿ, ಸೂರ್ಯಕುಮಾರ್, ಸಿ.ಎ. ಉದಯಕುಮಾರ್ ಶೆಟ್ಟಿ, ಅಶೋಕ್ ಶೆಟ್ಟಿ, ಡಾ| ಮಂಜಯ್ಯ ಶೆಟ್ಟಿ, ರಾಮಣ್ಣ ಶೆಟ್ಟಿ, ಪೃಥ್ವಿರಾಜ್ ಆಚಾರ್ಯ, ಸಿಎ ಸುದೇಶ್ ಕುಮಾರ್, ಅಶೋಕ್ ಶೆಟ್ಟಿ, ಹರೀಶ್ ಕೇಶವ ಶೆಟ್ಟಿ, ಯದುನಾರಾಯಣ ಶೆಟ್ಟಿ, ಗೀತಾ ಎಸ್‌. ಶೆಟ್ಟಿ ಶಿಬರೂರು, ಸಮಿತಿಯ ಕಾರ್ಯಾಧ್ಯಕ್ಷ ಪ್ರದ್ಯುಮ್ನ ರಾವ್ ಮತ್ತಿತರರು ಉಪಸ್ಥಿತರಿದ್ದರು.

ಸುದರ್ಶನ್ ಎಸ್.ವಿ. ಪ್ರಾರ್ಥಿಸಿದರು. ಗಿರೀಶ್ ಶೆಟ್ಟಿ ಸ್ವಾಗತಿಸಿದರು. ಶಿವಾನಂದ ಶೆಟ್ಟಿ ಪಡುಮನೆ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ, ಸಂದೀಪ್‌ ದೇವಾಡಿಗ ಪುತ್ತೂರುರವರಿಂದ ಸ್ಯಾಕ್ಸೋಫೋನ್‌ ವಾದನ ನಡೆಯಿತು. ಮಧ್ಯಾಹ್ನ ಸಸಿಹಿತ್ಲು ಯುವಕ ಯುವತಿ ಮಂಡಲದವರಿಂದ ಜನಪದ ನೃತ್ಯ ವೈಭವ, ಸಂಜೆ ದೇಂದೊಟ್ಟುಗುತ್ತು ಸುರೇಶ್‌ ಎಲ್‌. ಶೆಟ್ಟಿ ಮತ್ತು ಬಳಗದಿಂದ ಭಕ್ತಿಗೀತೆ, ದೀನ್‌ ರಾಜ್‌ ಕಳವಾರು ಸಾರಥ್ಯದಲ್ಲಿ ಏಕಕಾಲದಲ್ಲಿ ಸಹಸ್ರ ಭಜಕರಿಂದ ಕುಣಿತ ಭಜನೆ, ರಾತ್ರಿ ಮೂಡುಬಿದಿರೆ ಆಳ್ವಾಸ್‌ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈಭವ ನಡೆಯಿತು.