ಸಾರಾಂಶ
ದಾಬಸ್‌ಪೇಟೆ: ಭೂಮಿ ಕಳೆದುಕೊಂಡಿರುವ ರೈತರು ಪರಿಹಾರ ಮತ್ತಿತರ ಜಮೀನು ವ್ಯವಹಾರಗಳಿಗೆ ಪಟ್ಟಣದಲ್ಲಿ ತೆರೆದಿದ್ದ ವಿಶೇಷ ಭೂಸ್ವಾಧೀನ ಕಚೇರಿಯನ್ನು ರೈತರಿಗೆ ಮಾಹಿತಿ ನೀಡದೆ ರಾತ್ರೋರಾತ್ರಿ ಕಚೇರಿಯಲ್ಲಿದ್ದ ಕಡತಗಳು, ಕಚೇರಿ ಉಪಕರಣಗಳನ್ನು ಸ್ಥಳಾಂತರಿವುದನ್ನು ಖಂಡಿಸಿ ರೈತರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರ 288 ಕಿ.ಮೀ. ಉದ್ದದ 17000 ಕೋಟಿ ವೆಚ್ಚದಲ್ಲಿ ಸ್ಯಾಟಲೈಟ್ ನಗರ, ರಿಂಗ್ ರಸ್ತೆ (ಎಸ್‌ಟಿಆರ್‌ಆರ್ ರಸ್ತೆ) ನಿರ್ಮಾಣಕ್ಕೆ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಸುಮಾರು 340 ಹೆಕ್ಟೇರ್ ಜಮೀನನ್ನು 2018ರಲ್ಲಿ ಭೂಸ್ವಾಧೀನಪಡಿಸಿಕೊಂಡಿದೆ.ಅ.15ರಂದು ಕಚೇರಿಯಲ್ಲಿದ್ದ ದಾಖಲೆಗಳನ್ನು ಸ್ಥಳಾಂತರಿಸಲಾಗಿದೆ. ಅ.16ರಂದು ರೈತರು ಕಚೇರಿಗೆ ಬಂದಾಗಲೇ ಸ್ಥಳಾಂತರ ಆಗಿರುವ ವಿಷಯ ತಿಳಿದಿದ್ದು, ಯಾವ ಕಾರಣಕ್ಕೆ ಸ್ಥಳಾಂತರ ಮಾಡುತ್ತಿದ್ದೀರಾ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಾಗ, ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಸ್ಥಳಾಂತರ ಮಾಡುತ್ತಿದ್ದೇವೆಂದು ತಿಳಿಸಿದ್ದಾರೆ.
ವಿಶೇಷ ಭೂಸ್ವಾಧೀನಾಧಿಕಾರಿ ವಿರುದ್ಧ ಆಕ್ರೋಶ: ಕಚೇರಿಯಿಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಮ್ಯಾನೇಜರ್ ಇದಕ್ಕೆಲ್ಲಾ ಕಾರಣ. ಅವರನ್ನು ತಕ್ಷಣ ಕೆಲಸದಿಂದ ವಜಾ ಮಾಡಬೇಕು. ಅವರು ರೈತರ ಬಳಿ ಕಮಿಷನ್ ಕೇಳುತ್ತಾರೆ. ಕೊಡದಿದ್ದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆಂದು ಆಕ್ರೋಶ ವ್ಯಕ್ತಪಡಿಸಿದರು.ಕಳೆದ ಏ.2ರಂದು ನೆಲಮಂಗಲಕ್ಕೆ ಸ್ಥಳಾಂತರಿಸುವಾಗಲೂ ಇದೇ ರೀತಿ ರೈತರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಆಗ ರೈತರು ಹಿರಿಯ ಅಧಿಕಾರಿ ಯೋಜನಾ ನಿರ್ದೇಶಕರಿಗೆ ಕರೆ ಮಾಡಿ ವಿಚಾರಿಸಿದಾಗ ಕಚೇರಿ ಸ್ಥಳಾಂತರಿಸುವುದಿಲ್ಲ ಎಂದು ಹೇಳಿದ್ದರೂ ಮತ್ತೆ ಸ್ಥಳಾಂತರ ಮಾಡಿ ರೈತರಿಗೆ ಸಮಸ್ಯೆಯುಂಂಟು ಮಾಡಿದ್ದಾರೆಂದು ರೈತರು ಹಿರಿಯ ಅಧಿಕಾರಿ ವಿರುದ್ಧ ಅಸಮಾಧಾನ ಹೊರಹಾಕಿದರು.
ರೈತರಿಗೆ ಅನ್ಯಾಯ: ಕಚೇರಿ ಸ್ಥಳಾಂತರ ಮಾಡುವ ಬಗ್ಗೆ ತಿಂಗಳಿಗೂ ಮೊದಲು ಪತ್ರಿಕೆಯಲ್ಲಿ ಪ್ರಕಟಿಸಿ ರೈತರಿಗೆ ಮಾಹಿತಿ ನೀಡಬೇಕು. ಆದರೆ ಯಾವುದೇ ಮಾಹಿತಿ ನೀಡದೇ ಏಕಾಏಕಿ ಸ್ಥಳಾಂತರ ಮಾಡಿದ್ದಾರೆ. ದಾಬಸ್‌ಪೇಟೆ ಕಚೇರಿ ಹತ್ತಿರವಿದ್ದು ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಸ್ಥಳಾಂತರ ಮಾಡಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ರೈತ ಮುಖಂಡ ನಾಗರಾಜು ಆರೋಪಿಸಿದರು.ಕರೆ ಸ್ವೀಕರಿಸುವುದಿಲ್ಲ: ಕಚೇರಿ ಸ್ಥಳಾಂತರಿಸಿದ ಬಗ್ಗೆ ಭೂಸ್ವಾಧೀನಾಧಿಕಾರಿ ಹಾಗೂ ಯೋಜನಾ ನಿರ್ದೇಶಕರ ಬಳಿ ಮಾಹಿತಿ ಪಡೆಯಲು ರೈತರು ಬಹಳಷ್ಟು ಕರೆ ಮಾಡಿ ಪ್ರಯತ್ನಿಸಿದರೂ ಸ್ವೀಕರಿಸುವುದಿಲ್ಲ ಎಂದು ರೈತರು ಆರೋಪಿಸಿದರು.
ಪೋಟೋ 5 : ದಾಬಸ್‌ಪೇಟೆಯಲ್ಲಿರುವ ಭೂ ಸ್ವಾಧೀನಾಧಿಕಾರಿ ಕಚೇರಿ ಸ್ಥಳಾಂತರ ಖಂಡಿಸಿ ರೈತರು ಪ್ರತಿಭಟಿಸುವಾಗ ಸಿಬ್ಬಂದಿ ಜತೆ ಮಾತಿನ ಚಕಮಕಿ ನಡೆಯಿತು.