ಶಿವಮೊಗ್ಗ: ಬಿಎಸ್‌ವೈ- ಬಂಗಾರಪ್ಪ ಕುಟುಂಬದ ರಾಜಕೀಯ ಕದನ

| Published : Mar 28 2024, 12:46 AM IST

ಶಿವಮೊಗ್ಗ: ಬಿಎಸ್‌ವೈ- ಬಂಗಾರಪ್ಪ ಕುಟುಂಬದ ರಾಜಕೀಯ ಕದನ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಅತ್ಯಂತ ಪ್ರಬಲ ರಾಜಕಾರಣಿಯಾಗಿದ್ದ ಬಂಗಾರಪ್ಪ ಯಾರನ್ನೇ ಬೇಕಾದರೂ ಗೆಲ್ಲಿಸಿ ಬರುವ ತಾಕತ್ತು ಹೊಂದಿದ್ದ ಅವಧಿಯದು. 1991ರ ಲೋಕಸಭಾ ಚುನಾವಣೆಯಲ್ಲಿ ಅದುವರೆಗೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಯೇ ಇಲ್ಲದ ತಮ್ಮ ಷಡ್ಡುಗರಾಗಿದ್ದ ಕೆ. ಜಿ.ಶಿವಪ್ಪರನ್ನು ಕಣಕ್ಕೆ ನಿಲ್ಲಿಸಿದ ಬಂಗಾರಪ್ಪ ಅವರನ್ನು ಗೆಲ್ಲಿಸುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಿದ್ದರು. ಆಗ ಇವರ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದು ಬಿ.ಎಸ್. ಯಡಿಯೂರಪ್ಪ.

ಗೋಪಾಲ್ ಯಡಗೆರೆ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯದಲ್ಲಿ ಅತ್ಯಂತ ಪ್ರಬಲ ರಾಜಕಾರಣಿಗಳಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ದಿ. ಎಸ್.ಬಂಗಾರಪ್ಪ ಬಹು ಪ್ರಮುಖರು. ಕೇವಲ ವೈಯುಕ್ತಿಕವಾಗಿ ಮಾತ್ರವಲ್ಲ, ಇವರ ಕುಟುಂಬ ಕೂಡ ರಾಜಕಾರಣದಲ್ಲಿ ಪ್ರಬಲವಾಗಿ ಬೆಳೆದಿದೆ. ಎರಡೂ ಕುಟುಂಬ ಶಿವಮೊಗ್ಗ ಜಿಲ್ಲೆಯವರೇ ಆಗಿದ್ದು, ಇಲ್ಲಿ ಕೂಡ ಈ ಕುಟುಂಬ ಒಂದು ಬಾರಿ ಹೊರತುಪಡಿಸಿದರೆ ಪರಸ್ಪರ ಸದಾ ಎದುರಾಳಿಯಾಗಿಯೇ ರಾಜಕಾರಣದಲ್ಲಿ ಸೆಣೆಸಿವೆ. ಇದೀಗ ಆರನೇ ಬಾರಿಗೆ ಈ ಕುಟುಂಬದ ಕುಡಿಗಳು ರಾಜಕೀಯವಾಗಿ ಎದುರು ಬದುರಾಗಿವೆ.

ಇದುವರೆಗೆ ಒಟ್ಟು 5 ಬಾರಿ ಈ ಕುಟುಂಬದವರು ಮುಖಾಮುಖಿಯಾಗಿ ಸ್ಪರ್ಧಿಸಿದ್ದು, ಅಂಕಿ ಅಂಶದ ಪ್ರಕಾರ 4-1ರಿಂದ ಯಡಿಯೂರಪ್ಪ ಕುಟುಂಬ ಮುಂದಿದೆ. ಪ್ರತಿ ಬಾರಿಯೂ ರೋಚಕವಾಗಿಯೇ ಮುಗಿಯುವ ಚುನಾವಣೆಗಳು ಈ ಬಾರಿ ಇನ್ನಷ್ಟು ರೋಚಕತೆ ಸೃಷ್ಟಿಸಲಿದೆ. ಕಾರಣ ಇವರ ನಡುವೆ ಈಶ್ವರಪ್ಪನವರ ಪ್ರವೇಶ. ಅದೇನೇ ಇದ್ದರೂ ಈ ಕುಟುಂಬದ ರಾಜಕೀಯ ಹಣಾಹಣಿ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು.

33 ವರ್ಷದ ಹಿಂದೆ ಮೊದಲ ಕಾಳಗ:

ಈ ಕುಟುಂಬದ ಮೊದಲ ಕಾಳಗ ನಡೆದಿದ್ದು 33 ವರ್ಷದ ಹಿಂದೆ. ಅಂದರೆ 1991ರ ಲೋಕಸಭಾ ಚುನಾವಣೆಯಲ್ಲಿ. ಜಿಲ್ಲೆಯಲ್ಲಿ ಅತ್ಯಂತ ಪ್ರಬಲ ರಾಜಕಾರಣಿಯಾಗಿದ್ದ ಬಂಗಾರಪ್ಪ ಯಾರನ್ನೇ ಬೇಕಾದರೂ ಗೆಲ್ಲಿಸಿ ಬರುವ ತಾಕತ್ತು ಹೊಂದಿದ್ದ ಅವಧಿಯದು. 1991ರ ಲೋಕಸಭಾ ಚುನಾವಣೆಯಲ್ಲಿ ಅದುವರೆಗೆ ಸಾರ್ವಜನಿಕ ಜೀವನದಲ್ಲಿ ಕಾಣಿಸಿಯೇ ಇಲ್ಲದ ತಮ್ಮ ಷಡ್ಡುಗರಾಗಿದ್ದ ಕೆ. ಜಿ.ಶಿವಪ್ಪರನ್ನು ಕಣಕ್ಕೆ ನಿಲ್ಲಿಸಿದ ಬಂಗಾರಪ್ಪ ಅವರನ್ನು ಗೆಲ್ಲಿಸುವ ಮೂಲಕ ತಮ್ಮ ತಾಕತ್ತು ಪ್ರದರ್ಶಿಸಿದ್ದರು. ಆಗ ಇವರ ಎದುರು ಬಿಜೆಪಿಯಿಂದ ಸ್ಪರ್ಧಿಸಿದ್ದು ಬಿ.ಎಸ್. ಯಡಿಯೂರಪ್ಪ.

ಹೆಸರಿಗೆ ಕೆ. ಜಿ. ಶಿವಪ್ಪ ಸ್ಪರ್ಧಿಸಿದ್ದರೂ ಅದು ಬಂಗಾರಪ್ಪನವರ ಚುನಾವಣೆಯೇ ಆಗಿತ್ತು. ಅವರೇ ಪ್ರಚಾರದ ಮುಂಚೂಣಿಯಲ್ಲಿದ್ದರು. ಇದನ್ನು ಗಣನೆಗೆ ತೆಗೆದುಕೊಂಡರೆ ಬಂಗಾರಪ್ಪ ಮತ್ತು ಯಡಿಯೂರಪ್ಪ ಕುಟುಂಬದ ನಡುವೆ ರಾಜಕೀಯ ಹಣಾಹಣಿ ಮೊದಲ ಬಾರಿಗೆ ಆರಂಭಗೊಂಡಿದ್ದು 1991ರಲ್ಲಿ.

ಎರಡನೇ ಮುಖಾಮುಖಿಗೆ ಸ್ವಲ್ಪ ಕಾಲ ಹಿಡಿಯಿತು. ಆಗಿನ್ನೂ ಯಡಿಯೂರಪ್ಪ ಪ್ರಭಾವಿಯಾಗಿರಲಿಲ್ಲ. 2000ನೇ ಇಸವಿ ಬಳಿಕ ಯಡಿಯೂರಪ್ಪ ವಿಪಕ್ಷ ನಾಯಕರಾಗಿ ಮಹತ್ವದ ಹೆಸರು ಮಾಡಿದ್ದರು. 2006ರಲ್ಲಿ ಉಪ ಮುಖ್ಯಮಂತ್ರಿ ಸ್ಥಾನದೊಂದಿಗೆ ಪ್ರಬಲ ನಾಯಕನಾಗಿ ಯಡಿಯೂರಪ್ಪ ಹೊರ ಹೊಮ್ಮುತ್ತಿದ್ದ ಕಾಲವದು.

ದೇಶದಲ್ಲಿಯೇ ಗಮನ ಸೆಳೆದ ಚುನಾವಣೆ:

2008ರಲ್ಲಿ ರಾಜಕೀಯವಾಗಿ ಸ್ವಲ್ಪ ಮಂಕಾಗುತ್ತಿದ್ದ ಎಸ್. ಬಂಗಾರಪ್ಪ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಯಡಿಯೂರಪ್ಪ ವಿರುದ್ಧ ಸ್ಪರ್ಧಿಸುವುದಾಗಿ ಘೋಷಿಸಿದರು. ಆಗ ಸಮಾಜವಾದಿ ಪಕ್ಷದಲ್ಲಿದ್ದ ಅವರಿಗೆ ಜೆಡಿಎಸ್ ಮತ್ತು ಕಾಂಗ್ರೆಸ್ ತಮ್ಮ ಅಭ್ಯರ್ಥಿ ಹಾಕದೆ ಬೆಂಬಲ ನೀಡಿದವು. ಈ ಸ್ಪರ್ಧೆಯನ್ನು ಸ್ವಾಗತಿಸಿ ಯಡಿಯೂರಪ್ಪ ಶಿಕಾರಿಪುರದಲ್ಲಿ ಗೆಲ್ಲುವುದು ಮಾತ್ರವಲ್ಲ, ಸೊರಬದಲ್ಲಿ ಕೂಡ ಬಂಗಾರಪ್ಪ ಪುತ್ರರ ಸೋಲಿಸುವುದಾಗಿ ಹೇಳಿದರು. ಆಗ ಸೊರಬದಲ್ಲಿ ಮಧು ಬಂಗಾರಪ್ಪ ಸಮಾಜವಾದಿ ಪಕ್ಷದಿಂದಲೂ, ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಪಕ್ಷದಿಂದಲೂ ಸ್ಪರ್ಧಿಸಿದ್ದರು. ಅಷ್ಟರಲ್ಲಾಗಲೇ ಚುನಾವಣಾ ತಂತ್ರಗಳ ಮೈಗೂಡಿಸಿಕೊಂಡಿದ್ದ ಯಡಿಯೂರಪ್ಪ ತಮ್ಮ ಘೋಷಣೆಯಂತೆ ಶಿಕಾರಿಪುರದಲ್ಲಿ ಎಸ್. ಬಂಗಾರಪ್ಪ ಅವರನ್ನೂ, ಸೊರಬದಲ್ಲಿ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪರನ್ನು ಗೆಲ್ಲಿಸಿಕೊಂಡು ಬರುವ ಮೂಲಕ ಬಂಗಾರಪ್ಪನವರ ಇಬ್ಬರು ಪುತ್ರರನ್ನೂ ಸೋಲಿಸಿದರು.

ಒಂದಾಗಿ ಎದುರಿಸಿದ್ದ ಬಂಗಾರಪ್ಪ ಕುಟುಂಬ:

ಮೂರನೇ ಬಾರಿಗೆ ಈ ಕುಟುಂಬ ಎದುರಾಗಿದ್ದು 2009 ರ ಲೋಕಸಭಾ ಚುನಾವಣೆಯಲ್ಲಿ ಎಸ್. ಬಂಗಾರಪ್ಪ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಯಡಿಯೂರಪ್ಪನವರು ತಮ್ಮ ಪುತ್ರ ಬಿ. ವೈ.ರಾಘವೇಂದ್ರರಿಗೆ ಎಲ್ಲರ ವಿರೋಧದ ನಡುವೆಯೂ ಟಿಕೆಟ್ ಕೊಡಿಸಿದ್ದರು. ಆಗ ಬಂಗಾರಪ್ಪ ಕುಟುಂಬ ಒಂದಾಗಿ ಎದುರಿಸಿತ್ತು. ಸ್ವತಃ ಕುಮಾರ್ ಬಂಗಾರಪ್ಪ ಅವರೇ ತಮ್ಮ ತಂದೆಯ ಚುನಾವಣೆಯ ನೇತೃತ್ವ ವಹಿಸಿದ್ದರು. ಆದರೆ ಅಂತಿಮವಾಗಿ ಬಿ. ವೈ. ರಾಘವೇಂದ್ರ ಗೆದ್ದರು. ಯಡಿಯೂರಪ್ಪ ಕುಟುಂಬ ಮತ್ತೊಮ್ಮೆ ಗೆಲುವಿನ ನಗೆ ಬೀರಿದರೆ, ಬಂಗಾರಪ್ಪ ಕುಟುಂಬಕ್ಕೆ ಅಘಾತಕಾರಿ ಸೋಲು ಎದುರಾಯಿತು. ಸೋಲಿಲ್ಲದ ಸರದಾರನಿಗೆ ಎರಡನೇ ಬಾರಿ ಆಘಾತಕಾರಿ ಸೋಲು ಎದುರಾಯಿತು. ಬಹುಶಃ ಇದು ಬಂಗಾರಪ್ಪ ಅವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಿತು ಎಂದರೆ ತಪ್ಪಾಗಲಾರದು. 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಎರಡನೇ ಬಾರಿಗೆ ಲೋಕಸಭಾ ಚುನಾವಣಾ ಕಣದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದರು. ಆಗ ಮೋದಿ ಹವಾ ಜೋರಾಗಿತ್ತು. ಯಡಿಯೂರಪ್ಪ ರಾಜಕೀಯವಾಗಿ ಅತ್ಯಂತ ಪ್ರಬಲವಾಗಿ ಬೆಳೆದು ನಿಂತಿದ್ದರು. ತಮ್ಮ ಎದುರು ಜೆಡಿಎಸ್ ನಿಂದ ಸ್ಪರ್ಧಿಸಿದ ಬಂಗಾರಪ್ಪ ಪುತ್ರಿ ಗೀತಾರನ್ನು ರಾಜ್ಯದಲ್ಲಿಯೇ ಅತಿ ದೊಡ್ಡ ಅಂತರ ಎಂಬ ಹೆಗ್ಗಳಿಕೆಯೊಂದಿಗೆ ಸೋಲಿಸಿ ಬೀಗಿದರು.

ಆರನೇ ಬಾರಿಗೆ ಮುಖಾಮುಖಿ: ಯಾವ ಕುಟುಂಬಕ್ಕೆ ಮತದಾರರ ಮಣೆ?

ಐದನೇ ಬಾರಿ ನಡೆದ ಲೋಕಸಭಾ ಉಪ ಚುನಾವಣೆ 2018ರಲ್ಲಿ ನಡೆಯಿತು. ಶಿಕಾರಿಪುರದಿಂದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಯಡಿಯೂರಪ್ಪ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಉಪ ಚುನಾವಣೆ ಘೋಷಣೆಯಾಯಿತು. ಕೇವಲ ಒಂದು ವರ್ಷದ ಅವಧಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಕಣಕ್ಕೆ ಇಳಿದರೆ, ಜೆಡಿಎಸ್ ನಿಂದ ದಿ. ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ಮುಖಾಮುಖಿಯಾದರು. ಈ ಚುನಾವಣೆಯಲ್ಲಿ ರಾಘವೇಂದ್ರ ನಿರೀಕ್ಷಿತ ಗೆಲುವು ಸಾಧಿಸಿದರು. ಇದೀಗ ಆರನೇ ಬಾರಿಗೆ ಎದುರಾದ ಚುನಾವಣೆಯಲ್ಲಿ ಮತ್ತೆ ಈ ಎರಡೂ ಕುಟುಂಬದ ಕುಡಿಗಳಾದ ಬಿ. ವೈ. ರಾಘವೇಂದ್ರ ಮತ್ತು ಬಂಗಾರಪ್ಪ ಪುತ್ರಿ ಗೀತಾ ಮುಖಾಮುಖಿಯಾಗಿದ್ದಾರೆ. ಆರನೇ ಬಾರಿ ಈ ಕುಟುಂಬ ಕಾಳಗದಲ್ಲಿ ಗೆಲುವು ಯಾರಿಗೆ ಎಂದು ಕಾದು ನೋಡಬೇಕಷ್ಟೇ.