ಕಾರ್ಯಕ್ರಮಗಳಿಂದ ಕಳೆಗಟ್ಟಿದ ಶಿವಮೊಗ್ಗ ದಸರಾ ಮಹೋತ್ಸವ

| Published : Oct 17 2023, 12:46 AM IST

ಸಾರಾಂಶ

ಯಾವುದೇ ಸಿನಿಮಾ ಚಿತ್ರಮಂದಿರದಲ್ಲೇ ಗೆಲ್ಲಬೇಕು: ನಿರ್ದೇಶಕ ಪನ್ನಗಾಭರಣ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ದಸರಾ ಮಹೋತ್ಸವ ಭಾಗವಾಗಿ ನಗರದಲ್ಲಿ ಆಯೋಜಿಸಿರುವ 10 ದಿನಗಳ ವಿವಿಧ ಕಾರ್ಯಕ್ರಮಗಳಿಂದ ನಗರ ಕಳೆಗಟ್ಟಿದ್ದು, ಸೋಮವಾರ ವಿವಿಧ ವಿಭಾಗಗಳ ಕಾರ್ಯಕ್ರಮಗಳು ನಡೆದವು. ನಗರದ ಮಲ್ಲಿಕಾರ್ಜುನ ಟಾಕೀಸ್‌ ಆವರಣದಲ್ಲಿ ನಡೆದ ದಸರಾ ಚಲನ ಚಿತ್ರೋತ್ಸವವನ್ನು ಚಲನಚಿತ್ರ ನಿರ್ಮಾಪಕ ಹಾಗೂ ನಿರ್ದೇಶಕ ಪನ್ನಗಾಭರಣ ಉದ್ಘಾಟಿಸಿದರು. ಈ ಸಂದರ್ಭ ಅವರು ಮಾತನಾಡಿ, ಯಾವುದೇ ಸಿನಿಮಾ ಚಿತ್ರಮಂದಿರದಲ್ಲೇ ಗೆಲ್ಲಬೇಕು. ಆದರೆ, ಇಂದಿನ ಚಿತ್ರರಂಗ ಸಾಕಷ್ಟು ಬದಲಾವಣೆ ಕಾಣುತ್ತಿದೆ. ಹಿಂದೆಲ್ಲ ಮನೆಮಂದಿಯಲ್ಲ ಸೇರಿ ಒಂದೇ ಸಿನಿಮಾವನ್ನು ವೀಕ್ಷಣೆ ಮಾಡುತ್ತಿದ್ದರು. ಹೀಗಾಗಿ ಆಗ ಕೌಟುಂಬಿಕ ಸಿನಿಮಾಗಳು ಹೆಚ್ಚುಗಳು ಬರುತ್ತಿದ್ದವು. ಈಗ ಮೊಬೈಲ್‌ನಲ್ಲಿ ಅವರವರ ಆಯ್ಕೆಗೆ ತಕ್ಕಂತೆ ಸಿನಿಮಾ ನೋಡುವ ಅಭಿರುಚಿ ಬೆಳೆಯುತ್ತಿದೆ. ಸಾಮಾಜಿಕ ಜಾಲತಾಣದ ಅಬ್ಬರದಲ್ಲಿ ಟಾಕೀಸ್‌ಗಳಿಗೆ ಬಂದು ಸಿನಿಮಾ ನೋಡುವ ಜನರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಚಲನಚಿತ್ರ ಕಲಾವಿದೆ ಸಂಧ್ಯಾ ಭಟ್ ಮಾತನಾಡಿ, ಕನ್ನಡ ಭಾಷೆ ಉಳಿಯಬೇಕು. ಕನ್ನಡ ಚಿತ್ರಗಳನ್ನು ಬೆಳೆಸಬೇಕು. ಕನ್ನಡಿಗರು ಭಾಷೆಯನ್ನು ಸುಲಲಿತವಾಗಿ ಸುಲಭವಾಗಿ ಓದಲು ಮತ್ತು ಬರೆಯಲು ಕಲಿಯಬೇಕು. ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು. ಕನ್ನಡ ಕಲಾವಿದರನ್ನು ಬೆಳೆಸಬೇಕು ಎಂದರು. ಕಿರುತೆರೆ ಕಲಾವಿದೆ ರೂಪಿಕಾ ಮಾತನಾಡಿ, ಶಿವಮೊಗ್ಗ ನನ್ನ ತವರು ಮನೆ. ಇಲ್ಲಿ ವೇದಿಕೆ ಹಂಚಿಕೊಳ್ಳುತ್ತಿರುವುದು ಸಂತೋಷದ ವಿಷಯ. ಸಿನಿಮಾ ಮಂದಿ ಕೇವಲ ಮನರಂಜನೆಗೆ ಸೀಮಿತವಾಗಬಾರದು. ಅದರಾಚೆ ಗುರುತಿಸಿಕೊಳ್ಳಬೇಕು. ಕಲಾವಿದರಿಗೆ ಸರ್ಕಾರ ಪ್ರೋತ್ಸಾಹಿಸಿ ಯೋಜನೆಗಳನ್ನು ರೂಪಿಸಬೇಕು. ಕನ್ನಡ ಚಿತ್ರರಂಗ ಬೆಳೆಯಬೇಕು ಎಂದರು. ಪಾಲಿಕೆ ಸದಸ್ಯ ಎಚ್.ಸಿ. ಯೋಗೇಶ್ ಮಾತನಾಡಿ, ಚಿತ್ರಮಂದಿರಗಳು ಇಂದು ಬಾಗಿಲು ಹಾಕಿಕೊಳ್ಳುತ್ತಿವೆ. ವಾಣಿಜ್ಯ ಕೇಂದ್ರಗಳಾಗಿ ಬೆಳೆಯತೊಡಗಿವೆ. ಸಿನಿಮಾ ವೀಕ್ಷಕರು ಈಗ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿಲ್ಲ. ಒಂದು ವಾರ ಕಾದರೆ ಮನೆಯಲ್ಲೇ ಕುಳಿತು ನೋಡಬಹುದು ಎಂಬ ಮನೋಭಾವನೆ ಹೆಚ್ಚಿದೆ. ಇದಕ್ಕೆಲ್ಲಾ ಒಂದು ವ್ಯವಸ್ಥೆ ಸರಿಪಡಿಸಬೇಕಾಗಿದೆ. ಹಾಗಾದಾಗ ಮಾತ್ರ ಕನ್ನಡ ಚಿತ್ರಗಳು ಉಳಿಯುತ್ತವೆ ಎಂದರು. ವೇದಿಕೆಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ, ಉಪ ಮೇಯರ್ ಲಕ್ಷ್ಮೀ ಶಂಕರ ನಾಯಕ್, ಪಾಲಿಕೆ ಸದಸ್ಯರಾದ ಎಸ್.ಎನ್. ಮಂಜುನಾಥ್, ಯು.ಎಚ್. ವಿಶ್ವನಾಥ್, ಸುವರ್ಣಾ ಶಂಕರ್, ಅನಿತಾ ರವಿಶಂಕರ್, ಪ್ರಭಾಕರ್, ಸುರೇಖಾ ಮುರಳೀಧರ್, ಬೆಳ್ಳಿಮಂಡಲದ ಸಂಚಾಲಕ ವೈದ್ಯನಾಥ್ ಉಪಸ್ಥಿತರಿದ್ದರು. ಮಕ್ಕಳ ದಸರಾ- ಕರಾಟೆ ಪಂದ್ಯಾವಳಿ: ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಮ್ಮೂರ ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿ ವತಿಯಿಂದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗಳಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಡಳಿತ ಪಕ್ಷದ ನಾಯಕ ಜ್ಞಾನೇಶ್ವರ್, ಮಕ್ಕಳ ದಸರಾ ಸಮಿತಿಯ ಅಧ್ಯಕ್ಷೆ ರೇಖಾ ರಂಗನಾಥ್, ಪಾಲಿಕೆ ಸದಸ್ಯರಾದ ಕೆ. ಶಂಕರ್ ಗನ್ನಿ, ಸುನೀತಾ ಅಣ್ಣಪ್ಪ, ಮಂಜುಳಾ ಶಿವಣ್ಣ, ಕಾಂಗ್ರೆಸ್ ಪಕ್ಷದ ಮುಖಂಡರಾದ ರವಿಕುಮಾರ್, ಕೆ.ರಂಗನಾಥ್, ಶಿವಕುಮಾರ್, ಸುರೇಶ್ ಶೆಟ್ಟಿ, ಕರಾಟೆ ಅಸೋಸಿಯೇಷನ್‍ನ ಅಲ್ತಾಫ್, ವಿನೋದ್‍ಕುಮಾರ್ ಹಾಗೂ 18 ಜಿಲ್ಲೆಯಿಂದ ಆಗಮಿಸಿದ ಕರಾಟೆ ತರಬೇತುದಾರರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಎಸ್‌ಪಿ ಚಾಲನೆ: ಶಿವಮೊಗ್ಗ ರವೀಂದ್ರ ನಗರದ ಶ್ರೀ ಪ್ರಸನ್ನಗಣಪತಿ ದೇವಸ್ಥಾನದಲ್ಲಿ ದಸರಾ ಸಾಂಸ್ಕೃ ತಿಕ ಕಾರ್ಯಕ್ರಮವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ. ಮಿಥುನ್‍ಕುಮಾರ್ ಉದ್ಘಾಟಿಸಿದರು. ಸಹಚೇತನ ನಾಟ್ಯಾಲಯದ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ಹಾಗೂ ಆರ್ಟ್ ಆಫ್ ಲಿವಿಂಗ್‍ನ ಸುದರ್ಶನ್ ಕುಂಜತ್ತಾಯ ಕಾರ್ಕಳ ಇವರಿಂದ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು. ವೇದಿಕೆಯಲ್ಲಿ ಸಮಿತಿ ಅಧ್ಯಕ್ಷ ಎಸ್.ಪಿ. ಶೇಷಾದ್ರಿ, ನಿರ್ದೇಶಕರಾದ ಉಮಾಪತಿ, ಅರ್ಚಕರಾದ ಶಂಕರ್ ಭಟ್, ಶಬರೀಶ್ ಕಣ್ಣನ್, ಮೈತ್ರೇಯಿ ಸೇರಿದಂತೆ ಹಲವರಿದ್ದರು. - - - ಬಾಕ್ಸ್‌-1 ಗಮನ ಸೆಳೆದ ಬಾಳೆಹಣ್ಣು ತಿನ್ನುವ ಸ್ಪರ್ಧೆ ನಾಟಹಬ್ಬ ದಸರಾಗೆ ಚಾಲನೆ ಸಿಕ್ಕಾಗಿನಿಂದಲೂ ಅರಮನೆ ನಗರಿಯಲ್ಲಿ ದಿನಕ್ಕೊಂದು ಸ್ಪರ್ಧೆಗಳು ಗಮನ ಸೆಳೆಯುತ್ತಲೇ ಇದ್ದು, ಸೋಮವಾರ ಶಿವಪ್ಪ ನಾಯಕ ವೃತ್ತದಲ್ಲಿ ಆಯೋಜಿಸಿದ್ದ ಬಾಳೆಹಣ್ಣು, ಕಡಬು ತಿನ್ನುವ ಸ್ಪರ್ಧೆ ಜನರಿಗೆ ಮನರಂಜನೆ ನೀಡಿತು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ದಸರಾ ಅಂಗವಾಗಿ ನಡೆದ ಆಹಾರ ದಸರಾ-2023ರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ 2 ನಿಮಿಷದಲ್ಲಿ ಕೊಟ್ಟ ಕಡುಬು ಅವರೇಕಾಳು ಸಾಂಬಾರ್ ತಿನ್ನುವ ಸ್ಪರ್ಧೆಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಸಾಂಕೇತಿಕ ಚಾಲನೆ ನೀಡಿದರು. ಈ ಸ್ಪರ್ಧೆ ಮಹಿಳೆ ವಿಭಾಗದಲ್ಲಿ 8 ಕೊಟ್ಟೆ ಕಡುಬು ತಿಂದ ಶಿವಮ್ಮ ಪ್ರಥಮ, ಜ್ಯೋತಿ ಶ್ರೀನಿವಾಸ ದ್ವಿತೀಯ, ಗೀತಾ ತೃತೀಯ ಬಹುಮಾನ ಪಡೆದರು. ಪುರುಷರ ವಿಭಾಗದಲ್ಲಿ 6 ಕೊಟ್ಟೆ ಕಡುಬು ತಿಂದ ವಿನೋದ್ ಪ್ರಥಮ, ರವಿಕಿರಣ್ ದ್ವಿತೀಯ, ನಾಗರಾಜ್ ತೃತೀಯ ಬಹುಮಾನ ಪಡೆದರು. ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಮಹಿಳಾ ವಿಭಾಗದಲ್ಲಿ ಕೆ.ಎನ್. ಗೀತಾ 8 ಬಾಳೆಹಣ್ಣು ತಿಂದು ಪ್ರಥಮ, ಎ.ಎನ್. ಸುಜಾತಾ ದ್ವಿತೀಯ, ತೃತೀಯ ಬಹುಮಾನ ಉಷಾ ಪಡೆದಿದ್ದಾರೆ. ಪುರುಷರ ವಿಭಾಗದಲ್ಲಿ ದೀಪಕ್ ಶೆಟ್ಟಿ 7 ಬಾಳೆಹಣ್ಣು ತಿಂದು ಪ್ರಥಮ ಸ್ಥಾನ, ಮಧು ದ್ವಿತೀಯ, ರಾಜಶೇಖರ್ ತೃತೀಯ ಬಹುಮಾನ ಪಡೆದರು. ಮೇಯರ್ ಶಿವಕುಮಾರ್, ಉಪಮೇಯರ್ ಲಕ್ಷ್ಮೀ ಶಂಕರ ನಾಯಕ, ಜ್ಞಾನೇಶ್ವರ್, ಸುನೀತಾ ಅಣ್ಣಪ್ಪ, ಯಮುನಾ ರಂಗೇಗೌಡ, ಸುವರ್ಣಾ ಶಂಕರ್, ಆಹಾರ ದಸರಾ ಸಮಿತಿ ಅಧ್ಯಕ್ಷೆ ಆಶಾ ಚಂದ್ರಪ್ಪ, ಸದಸ್ಯರಾದ ಭಾನುಮತಿ, ವಿನೋದ್‍ಕುಮಾರ್, ಆರತಿ ಆ.ಮಾ. ಪ್ರಕಾಶ್ ಮತ್ತಿತರರು ಇದ್ದರು. - - - ಬಾಕ್ಸ್‌-2 ನಾಳೆ ರೈತ ದಸರಾ: ಎತ್ತಿನಗಾಡಿ, ಟ್ರ್ಯಾಕ್ಟರಲ್ಲಿ ಆಗಮನ ಶಿವಮೊಗ್ಗ ದಸರಾ ಮಹೋತ್ಸವದಲ್ಲಿ ರೈತ ದಸರಾ ಸಮಿತಿ ವತಿಯಿಂದ ಅ.18ರಂದು ಸರಳವಾಗಿ ರೈತ ದಸರಾ ಆಚರಿಸಲಾಗುತ್ತಿದ್ದು, ಅಂದು ಬೆಳಗ್ಗೆ 9 ಗಂಟೆಗೆ ಸೈನ್ಸ್ ಮೈದಾನದಿಂದ ಕುವೆಂಪು ರಂಗಮಂದಿರದವರೆಗೆ ನಡೆಯುವ ರೈತ ಜಾಥಾದಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್, ಟಿಲ್ಲರ್ ಹಾಗೂ ರೈತರು ಭಾಗವಹಿಸಲಿದ್ದಾರೆ ಎಂದು ಸಮಿತಿ ಅಧ್ಯಕ್ಷೆ ಮೆಹಖ್ ಷರೀಫ್‍ ಹೇಳಿದರು. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರೈತರ ಜಾಥಾ ಬಳಿಕ ಬೆಳಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಚಿತ್ರದುರ್ಗ ಜಿಲ್ಲೆಯ ಪ್ರಗತಿಪರ ರೈತ ಹಾಗೂ ಉದಯೋನ್ಮುಖ ಕೃಷಿ ಪಂಡಿತರಾದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕೆ.ಆರ್. ಜ್ಞಾನೇಶ್ ಉದ್ಘಾಟಿಸಲಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಶಾಸಕಿ ಶಾರದಾ ಪೂರ್ಯಾ ನಾಯ್ಕ ಸನ್ಮಾನಿಸಲಿದ್ದಾರೆ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಶಿಮುಲ್ ಅಧ್ಯಕ್ಷ ಎಸ್.ಎನ್. ಶ್ರೀಪಾದ ರಾವ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಿ.ಸಿ. ಪೂರ್ಣಿಮಾ, ರಾಜ್ಯ ರೈತ ಸಂಘದ ಮುಖಂಡರಾದ ಎಚ್.ಆರ್. ಬಸವರಾಜ್ಪಪ, ಕೆ.ಟಿ. ಗಂಗಾಧರ್, ಆಯುಕ್ತ ಕೆ. ಮಾಯಣ್ಣ ಗೌಡ ಹಾಗೂ ಪಾಲಿಕೆ ಸದಸ್ಯರ ಭಾಗವಹಿಸಲಿದ್ದು, ಮೇಯರ್ ಎಸ್. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಕೃಷಿ ಹಾಗೂ ಕೃಷಿಗೆ ಸಂಬಂಧಪಟ್ಟ ಇತರೆ ಇಲಾಖೆಗಳು ಹಾಗೂ ಶಿಮುಲ್ ಸಹಕಾರದೊಂದಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಕೃಷಿ ವಿವಿಯ ಅಧ್ಯಾಪಕರು, ವಿದ್ಯಾರ್ಥಿಗಳು, ಶಿವಮೊಗ್ಗ ನಗರದ ಎಲ್ಲ ಕಂಪೆನಿಗಳ ಟಿಲ್ಲರ್ ಮತ್ತು ಟ್ರ್ಯಾಕ್ಟರ್ ಮಾರಾಟಗಾರರ ಮಾಲೀಕರು ಸಹಕಾರ ನೀಡುತ್ತಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಸದಸ್ಯ ಎಚ್.ಸಿ. ಯೋಗೇಶ್, ಅಧಿಕಾರಿ ನಾಗೇಂದ್ರ ಉಪಸ್ಥಿತರಿದ್ದರು. - - - -15ಎಸ್‌ಎಂಜಿಕೆಪಿ03: ಶಿವಮೊಗ್ಗ ನಗರದ ಮಲ್ಲಿಕಾರ್ಜುನ ಚಿತ್ರ ಮಂದಿರದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ದಸರಾ ಚಲನ ಚಿತ್ರೋತ್ಸವವನ್ನು ಚಲನಚಿತ್ರ ನಿರ್ಮಪಕ ಹಾಗೂ ನಿರ್ದೇಶಕ ಪನ್ನಗಾಭರಣ ಉದ್ಘಾಟಿಸಿದರು. - - - -15ಎಸ್‌ಎಂಜಿಕೆಪಿ04: ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಆಹಾರ ದಸರಾ ಸಮಿತಿಯಿಂದ ಆಯೋಜಿಸಿದ್ದ ಕೊಟ್ಟೆ ಕಡಬು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವಕರು. - - - -15ಎಸ್‌ಎಂಜಿಕೆಪಿ05: ಶಿವಮೊಗ್ಗದ ಶಿವಪ್ಪ ನಾಯಕ ವೃತ್ತದಲ್ಲಿ ಸೋಮವಾರ ಆಹಾರ ದಸರಾ ಸಮಿತಿ ವತಿಯಿಂದ ಆಯೋಜಿಸಿದ್ದ ಬಾಳೆಹಣ್ಣು ತಿನ್ನುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಹಿಳಾ ಪೊಲೀಸ್‌ ಸಿಬ್ಬಂದಿ. - - - -15ಎಸ್‌ಎಂಜಿಕೆಪಿ06: ಶಿವಮೊಗ್ಗ ದಸರಾ ಅಂಗವಾಗಿ ಮಕ್ಕಳ ದಸರಾ ಸಮಿತಿಯಿಂದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 14ರಿಂದ 17 ವರ್ಷ ವಯಸ್ಸಿನ ಮಕ್ಕಳ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿ ನಡೆಯಿತು.