ಸಾರಾಂಶ
- ಸಹಕಾರಿ ಭಾರತಿ ಆಶ್ರಯದಲ್ಲಿ ಮ್ಯಾಮ್ಕೋಸ್ ಸದಸ್ಯರ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಒಟ್ಟು 33 ಸಾವಿರ ಷೇರುದಾರರಿರುವ ಶಿವಮೊಗ್ಗದ ಮಾಮ್ಕೋಸ್ ಸಂಸ್ಥೆಯ ಹೊಸ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದು ಶಿವಮೊಗ್ಗದ ಮಾಮ್ಕೋಸ್ ಸಂಸ್ಥೆ ಉಪಾಧ್ಯಕ್ಷ ಹುಲ್ಕುಳಿ ಮಹೇಶ್ ತಿಳಿಸಿದರು.
ಬುಧವಾರ ಪಟ್ಟಣದ ಕನ್ಯಾಕುಮಾರಿ ಕಂಫರ್ಟ್ ಹಾಲ್ ನಲ್ಲಿ ಕರ್ನಾಟಕ ರಾಜ್ಯ ಸಹಕಾರ ಭಾರತಿ ಆಶ್ರಯದಲ್ಲಿ ನಡೆದ ಮಾಮ್ಕೋಸ್ ಸದಸ್ಯರ ಸಮಾಲೋಚನ ಸಭೆಯಲ್ಲಿ ಮಾತನಾಡಿ, ಹೊಸ ಮಾಮ್ಕೋಸ್ ಆ್ಯಪ್ ನಿಂದ ಷೇರುದಾರರು ಅಡಕೆ ಮೂಟೆ ತಂದು ತೂಕ ಹಾಕಿಸಿದ ಕೂಡಲೇ ಬಿ ಬಿಲ್ ಷೇರುದಾರರ ಮೊಬೈಲ್ ಗೆ ಬರಲಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರ ಪಡೆದು ಸದಾ ಷೇರುದಾರರ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಸೆಪ್ಟಂಬರ್ 23 ರಂದು ಶಿವಮೊಗ್ಗದಲ್ಲಿ ಮಾಮ್ಕೋಸ್ ಮಹಾ ಸಭೆ ನಡೆಯಲಿದ್ದು ಇದಕ್ಕೂ ಮುಂಚಿತ ವಾಗಿ ಮಾಮ್ಕೋಸ್ ಗೆ ಸಂಬಂಧ ಪಟ್ಟ 3 ಜಿಲ್ಲೆಗಳ ಎಲ್ಲಾ ತಾಲೂಕು ಕೇಂದ್ರದಲ್ಲಿ ಷೇರುದಾರರ ಸಭೆ ಕರೆದಿದ್ದೇವೆ ಎಂದರು.ಪ್ರಸ್ತುತ ಷೇರುದಾರರಿಗೆ ಕನಿಷ್ಠ ₹ 2 ಲಕ್ಷ ವರೆಗೆ ಬೆಳೆ ಸಾಲ, ಅಡಕೆ ಕೊಳೆ ಔಷಧಿಗೆ ₹ 50 ಸಾವಿರ ಸಾಲ ನೀಡುವ ವ್ಯವಸ್ಥೆ ಇದೆ. ಗರಿಷ್ಠ 10 ಲಕ್ಷದವರೆಗೆ ಬೆಳೆ ಸಾಲ ನೀಡುತ್ತೇವೆ. ಬಿ. ಬಿಲ್ ನೀಡಿದ ಕೂಡಲೇ ಹಣ ನೀಡುವ ವ್ಯವಸ್ಥೆ ಮಾಡಲಾಗಿದೆ. 2007 ರಲ್ಲಿ ವಿಶೇಷವಾಗಿ ಗುಂಪು ವಿಮಾ ಯೋಜನೆ ಜಾರಿಗೆ ತಂದಿದ್ದೆವು. ಕಳೆದ 2 ದಶಕದಲ್ಲಿ 10 ಸ್ವಂತ ಕಟ್ಟಡ ಕಟ್ಟಿದ್ದೇವೆ. ಸ್ವಂತ ಗೋದಾಮು ಸಹ ಇದೆ. ಕೋವಿಡ್ ಬಂದ ಸಂದರ್ಭದಲ್ಲಿ ಅಡಕೆ ಧಾರಣೆ ಕುಸಿಯದಂತೆ ನೋಡಿಕೊಂಡಿದ್ದೇವೆ. ಆ ಸಂದರ್ಭದಲ್ಲಿ ಗುಂಪು ಆರೋಗ್ಯ ವಿಮೆ ಜಾರಿಗೆ ತಂದಿದ್ದೆವು ಎಂದರು.
ರಾಜ್ಯ ಅಡಕೆ ಸಹಕಾರ ಸಂಘಗಳ ಮಹಾ ಮಂಡಳ ಅಧ್ಯಕ್ಷ ಯಡಗೆರೆ ಸುಬ್ರಮಣ್ಯ ಮಾತನಾಡಿ, ರಾಜ್ಯ ಅಡಕೆ ಸಹಕಾರ ಮಹಾ ಮಂಡಳ ವ್ಯಾಪ್ತಿಯಲ್ಲಿ 48 ಸಹಕಾರ ಸಂಸ್ಥೆಗಳು ಬರಲಿದೆ. ಅಡಕೆಗೆ ಸಂಕಷ್ಟ ಬಂದಾಗ ಹೋರಾಟ ಮಾಡಲು ಒಂದೇ ಸಂಸ್ಥೆಯಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಅಡಕೆ ಸಹಕಾರ ಮಹಾ ಮಂಡಳ ರಚನೆ ಮಾಡಿ ಹೋರಾಟ ಮಾಡುತ್ತಿದ್ದೇವೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ. ಅಡಕೆ ಅರಣ್ಯ ಉತ್ಪನ್ನ ಎಂದು ಗೆಜೆಟ್ ನೋಟಿಫಿಕೇಷನ್ ಆಗಿತ್ತು. ಈ ಬಗ್ಗೆ ರಾಜ್ಯ ಅಡಕೆ ಸಹಕಾರ ಮಹಾ ಮಂಡಳ ಹೋರಾಟ ಮಾಡಿ ಗೆಜೆಟ್ ನೋಟಿಫಿಕೇಷನ್ ನಿಂದ ತೆಗೆದುಹಾಕಿಸಿದ್ದೆವು. ಅಡಕೆ ಟಾಸ್ಕ್ ಪೋರ್ಸ್ ರಚನೆಯಾಗಿದ್ದು ಇದಕ್ಕೆ 200 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ನಾವು ಮನವಿ ಮಾಡಿದ್ದು ಇದಕ್ಕೆ ಸರ್ಕಾರ ಒಪ್ಪಿಕೊಂಡಿದೆ ಎಂದರು.ಮಾಮ್ಕೋಸ್ ಷೇರುದಾರರಾದ ಶೃಂಗೇಶ್ವರ, ಎಂ.ಎನ್.ಮರುಳಪ್ಪ, ಪಿ.ಕೆ.ಬಸವರಾಜಪ್ಪ, ಬಿ.ಕೆ. ನಾರಾಯಣ ಸ್ವಾಮಿ, ಶಿವಮೂರ್ತಿ ಮುಂತಾದವರು ವಿವಿಧ ವಿಷಯಗಳ ಬಗ್ಗೆ ಪ್ರಸ್ತಾಪಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಹಕಾರ ಭಾರತಿ ಜಿಲ್ಲಾಧ್ಯಕ್ಷ ನರೇಂದ್ರ ವಹಿಸಿದ್ದರು. ಸಭೆಯಲ್ಲಿ ಸಹಕಾರ ಭಾರತಿಯ ತಾಲೂಕು ಅಧ್ಯಕ್ಷ ಕೆ.ಆರ್ ಶಿವಕುಮಾರ್, ಮಾಮ್ಕೋಸ್ ನಿರ್ದೇಶಕರಾದ ಬಡಿಯಣ್ಣ, ಸುರೇಶ್ಚಂದ್ರ, ಈಶ್ವರ್, ರತ್ನಾಕರ್ ಇದ್ದರು.