ಪುನರ್ವಸು ಮಳೆಯಾರ್ಭಟ : ಶಿವಮೊಗ್ಗದಲ್ಲಿ 24 ಗಂಟೆಗಳಲ್ಲಿ 185 ಮಿ.ಮೀ. ಮಳೆ ದಾಖಲು

| Published : Jul 19 2024, 12:50 AM IST / Updated: Jul 19 2024, 01:03 PM IST

ಪುನರ್ವಸು ಮಳೆಯಾರ್ಭಟ : ಶಿವಮೊಗ್ಗದಲ್ಲಿ 24 ಗಂಟೆಗಳಲ್ಲಿ 185 ಮಿ.ಮೀ. ಮಳೆ ದಾಖಲು
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದಲ್ಲಿ ಮುಂದುವರಿದ ಪುನರ್ವಸು ಮಳೆಯಾರ್ಭಟ ಹೆಚ್ಚಿದ್ದು, ತುಂಗೆ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

  ಶಿವಮೊಗ್ಗ :  ಜಿಲ್ಲೆಯಾದ್ಯಂತ ಪುನರ್ವಸು ಮಳೆ ಅರ್ಭಟಿಸತೊಡಗಿದ್ದು, ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗದಲ್ಲಿ ಬರೋಬ್ಬರಿ 185 ಮಿ.ಮೀ. ಮಳೆ ದಾಖಲಾಗಿದೆ.

ಜಿಲ್ಲೆಯಲ್ಲಿ ಮಳೆ ಅಬ್ಬರ ಹೆಚ್ಚಾಗುತ್ತಿದ್ದಂತೆ ಇತ್ತ ಜಲಾಶಯಗಳ ಮಟ್ಟವೂ ದಿನದಿಂದ ಹೆಚ್ಚಾಗುತ್ತಿದೆ. ಈಗಾಗಲೇ ಭರ್ತಿಯಾಗಿರುವ ತುಂಗಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರತೊಡಗಿದೆ. ಗುರುವಾರ 71864 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದ್ದು, 73391 ಕ್ಯಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಡ್ಯಾಂನಿಂದ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಶಿವಮೊದಲ್ಲಿ ಹಾದಿ ಹೋಗುವ ತುಂಗಾ ನದಿ ಅಪಾಯ ಮಟ್ಟವನ್ನು ಮೀರಿ ಹರಿಯುತ್ತಿದ್ದು. ಪ್ರವಾಹದ ಭೀತಿ ಉಂಟಾಗಿದೆ.

ಮಲೆನಾಡು ಘಟ್ಟ ಪ್ರದೇಶ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲೆಡೆ ಉತ್ತಮವಾಗಿ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಶರಾವತಿ, ಮಾಲತಿ ನದಿಗಳು ತುಂಬಿ ಹರಿಯುತ್ತಿದ್ದು, ಜಿಲ್ಲೆಯ ಪ್ರಮುಖ ಜಲಾಶಯಗಳ ಒಳಹರಿವಿನಲ್ಲೂ ಸಾಕಷ್ಟು ಏರಿಕೆ ಕಂಡು ಬಂದಿದೆ.

ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ, ಮಾಸ್ತಿಕಟ್ಟೆ, ನಿಟ್ಟೂರು, ನಗರ, ಸೊರಬ, ಸಾಗರ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಮಳೆಯಾಗುತ್ತಿದೆ. ಕೆರೆ-ಕಟ್ಟೆಗಳು, ಹಳ್ಳ ಕೊಳ್ಳೆಗಳು ತುಂಬಿವೆ. ಜನ ಜೀವನ ಅಸ್ತವ್ಯಸ್ತಗೊಂಡಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, ಭದ್ರಾ ಜಲಾಶಯದ ಒಳ ಹರಿವು ಏರಿಕೆಯಾಗಿದೆ. ಗುರುವಾರ ಜಲಾಶಯಕ್ಕೆ 42,165 ಕ್ಯುಸೆಕ್‌ ನೀರು ಹರಿದು ಬಂದಿದ್ದು. ಒಂದೇ ದಿನ ಭದ್ರಾ ಜಲಾಶಯದ ನೀರಿನ ಮಟ್ಟ 4.4 ಅಡಿ ಏರಿಕೆಯಾಗಿದೆ. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 153 ಅಡಿಗೆ ತಲುಪಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಈಗ 36.74 ಟಿಎಂಸಿ ನೀರು ಸಂಗ್ರಹವಾಗಿದೆ.

ಗುರುವಾರ ಬೆಳಗ್ಗೆಯ ಮಾಹಿತಿಯಂತೆ ತುಂಗಾ ಜಲಾಶಯಕ್ಕೆ 71,484 ಕ್ಯೂಸೆಕ್ ಒಳಹರಿವಿದೆ. ಈಗಾಗಲೇ ಜಲಾಶಯ ಗರಿಷ್ಠ ಮಟ್ಟ ತಲುಪಿರುವುದರಿಂದ ಅಷ್ಟೇ ಪ್ರಮಾಣದ ನೀರನ್ನು ಹೊರ ಹರಿಸಲಾಗುತ್ತಿದೆ.

ಶರಾವತಿ ಜಲಾನಯನ ಪ್ರದೇಶದಲ್ಲೂ ವ್ಯಾಪಕ ಮಳೆಯಾಗುತ್ತಿದೆ. ಲಿಂಗನಮಕ್ಕಿ ಜಲಾಶಯಕ್ಕೆ 69,266 ಕ್ಯುಸೆಕ್ ನೀರು ಹರಿದು ಬಂದಿದ್ದು, ಗರಿಷ್ಟ 1819 ಅಡಿ ಸಾಮರ್ಥ್ಯದ ಜಲಾಶಯದ ಮಟ್ಟ ಸದ್ಯ 1787.8 ಅಡಿಗೆ ಏರಿಕೆಯಾಗಿದೆ.

ರೆಡ್ ಅಲರ್ಟ್; ಇಂದೂ ರಜೆ:

ಮಳೆ ಕುರಿತಂತೆ ಹವಾಮಾನ ಇಲಾಖೆ ವರದಿ ಬಿಡುಗಡೆ ಮಾಡಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಜು.18 ಮತ್ತು 19ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಹಿನ್ನೆಲೆ ಶಿವಮೊಗ್ಗ ಜಿಲ್ಲಾದ್ಯಂತ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.

ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 66.09 ಮಿ.ಮೀ ಮಳೆಯಾಗಿದ್ದು. ಶಿವಮೊಗ್ಗದಲ್ಲಿ 44.80 ಮಿ.ಮೀ., ಭದ್ರಾವತಿ 23.70 ಮಿ.ಮೀ., ತೀರ್ಥಹಳ್ಳಿಯಲ್ಲಿ 82.90 ಮಿ.ಮೀ., ಸಾಗರದಲ್ಲಿ 91.30 ಮಿ.ಮೀ., ಶಿಕಾರಿಪುರದಲ್ಲಿ 43 ಮಿ.ಮೀ., ಸೊರಬದಲ್ಲಿ 68.90 ಮಿ.ಮೀ., ಹೊಸನಗರದಲ್ಲಿ 108 ಮಿ.ಮೀ. ಮಳೆಯಾಗಿರುವುದು ವರದಿಯಾಗಿದೆ.

ನೆರೆ ಪರಿಸ್ಥಿತಿಗೆ ಪಾಲಿಕೆ ಸನ್ನದ್ಧ:

ನಗರದ ಮೂಲಕ ಹಾದು ಹೋಗಿರುವ ತುಂಗಾ ನದಿಯು ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಪಕ ಕಟ್ಟೆಚ್ಚರ ವಹಿಸಲಾಗಿದೆ. ಸಂಭಾವ್ಯ ಪ್ರವಾಹ ಸ್ಥಿತಿ ಎದುರಿಸಲು ಸಕಲ ಪೂರ್ವಭಾವಿ ಸಿದ್ದತೆ ಮಾಡಿಕೊಳ್ಳಲಾಗಿದೆ’ ಎಂದು ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಪ್ಪನವರ್ ತಿಳಿಸಿದ್ದಾರೆ.

ತುಂಗಾ ಜಲಾಶಯದಿಂದ ಪ್ರಸ್ತುತ 72 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಈ ಪ್ರಮಾಣ 80 ಸಾವಿರ ಕ್ಯೂಸೆಕ್ ಮೇಲ್ಪಟ್ಟರೆ ನಗರದ ನದಿಯಂಚಿನ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ. ಈಗಾಗಲೇ ನದಿ ನೀರು ನುಗ್ಗಬಹುದಾದ ಪ್ರದೇಶಗಳ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ನಿರಂತರವಾಗಿ ಮೈಕ್ ಅನೌನ್ಸ್‌ಮೆಂಟ್ ಮೂಲಕ ಮಾಹಿತಿ ನೀಡಲಾಗುತ್ತಿದೆ. ಪ್ರವಾಹ ಸ್ಥಿತಿ ನಿಭಾವಣೆಗೆ ಪಾಲಿಕೆ ಅಧಿಕಾರಿ – ಸಿಬ್ಬಂದಿಯೊಳಗೊಂಡ ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಈಗಾಗಲೇ ಸೀಗೆಹಟ್ಟಿ, ರಾಮಣ್ಣಶ್ರೇಷ್ಠಿ ಪಾರ್ಕ್ ಹಾಗೂ ಬಾಪೂಜಿ ನಗರ ಬಡಾವಣೆಯಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜಲಾವೃತವಾಗುವ ಪ್ರದೇಶಗಳ ನಾಗರೀಕರಿಗೆ ಸದರಿ ಕೇಂದ್ರಗಳಲ್ಲಿ ವಸತಿ, ಊಟೋಪಚಾರದ ವ್ಯವಸ್ಥೆ ಕಲ್ಪಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಪುರಲೆ, ವಿದ್ಯಾನಗರದಲ್ಲಿ ಮಳೆಯಿಂದ ಮನೆಗಳ ಗೋಡೆ ಕುಸಿತವಾಗಿವೆ. ಸಂತ್ರಸ್ತರಿಗೆ ಊಟೋಪಚಾರ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ತಾವು ಕೂಡ ಸ್ಥಳಗಳಿಗೆ ಭೇಟಿಯಿತ್ತು ಪರಿಶೀಲನೆ ನಡೆಸಲಾಗಿದೆ ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.

ಅಧಿಕಾರಿಗಳ ತಂಡ ಪರಿಶೀಲನೆ: ಗುರುವಾರ ಬೆಳಿಗ್ಗೆ ಆಯುಕ್ತೆ ಕವಿತಾ ಯೋಗಪ್ಪನವರ್ ಮತ್ತು ಪಾಲಿಕೆ ಅಧಿಕಾರಿಗಳ ತಂಡ ತುಂಗಾ ನದಿಯಂಚಿನ ತಗ್ಗು ಪ್ರದೇಶಗಳ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಿವಾಸಿಗಳ ಜೊತೆ ಸಮಾಲೋಚಿಸಿತು. ಮಳೆ ಮುಂದುವರಿದಿರುವುದರಿಂದ ಹಾಗೂ ನದಿಯಲ್ಲಿ ನೀರಿನ ಹರಿವು ಹೆಚ್ಚಿರುವುದರಿಂದ ಎಚ್ಚರಿಕೆಯಿಂದಿರುವಂತೆ ನಿವಾಸಿಗಳಿಗೆ ಪಾಲಿಕೆ ಆಯುಕ್ತರು ಸಲಹೆ ನೀಡಿದ್ದಾರೆ.

ಹೊಳೆಹೊನ್ನೂರಿನಲ್ಲಿ ಮಳೆಗೆ ಮನೆ ಹಾನಿ

ಹೊಳೆಹೊನ್ನೂರು: ಕಳೆದ ನಾಲ್ಕು ದಿನಗಳಿಂದ ಎಡಬಿಡದೆ ಸುರಿಯುತ್ತಿದ್ದು ಪಟ್ಟಣದ ಕರಿಯಮ್ಮನ ಬೀದಿಯಲ್ಲಿ ಗುರುವಾರ ಮುಂಜಾನೆ ಮನೆ ಗೋಡೆ ಕುಸಿದು ಬಿದ್ದು ಮನೆಯಲ್ಲಿದ್ದವರು ಪವಾಡ ಸದೃಶವಾಗಿ ಪಾರಾಗಿದ್ದಾರೆ.

ಎಚ್.ಎಸ್.ವಿಜಯಕುಮಾರ್ ಮತ್ತಿತರರ ಜಂಟಿ ಖಾತೆಯಲ್ಲಿರುವ ಮನೆಯನ್ನು ಎಲ್ಲಮ್ಮ ಅವರಿಗೆ ಬಾಡಿಗೆಗೆ ನೀಡಲಾಗಿತ್ತು. ಎಂದಿನಂತೆ ಮನೆಯಲ್ಲಿ 5 ಜನರು ಬುಧವಾರ ರಾತ್ರಿ ಊಟ ಮಾಡಿ ಮಲಗಿದ್ದಾರೆ. ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಬೆಳಗ್ಗೆ ಮನೆಯ ಗೋಡೆ ಶಿಥಿಲಗೊಂಡು ಮಣ್ಣು ಉದುರಲು ಆರಂಭಿಸಿದೆ. ಅದನ್ನು ಗಮನಿಸಿದ ಎಲ್ಲಮ್ಮ ಎಚ್ಚರಗೊಂಡು ಮನೆಯಲ್ಲಿ ಮಲಗಿದ್ದವರನ್ನು ಎಚ್ಚರಿಸಿ ಹೊರ ಕರೆತಂದಿದ್ದಾರೆ. ಕೆಲ ಹೊತ್ತಿನ ನಂತರ ಮನೆ ಗೋಡೆ ಸಂಪೂರ್ಣ ಕುಸಿದು ಬಿದ್ದಿದೆ. ಇದರಿಂದ ಮನೆಯಲ್ಲಿದ್ದ ಆಹಾರ ಸಾಮಾಗ್ರಿ ಹಾಗೂ ನಿತ್ಯ ಬಳಕೆ ವಸ್ತುಗಳು ಮಣ್ಣುಪಾಲಾಗಿವೆ. ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರೀಶೀಲನೆ ನಡೆಸಿದರು.

ಮೈದುಂಬಿದ ಅಂಬ್ಲಿಗುಳ ಜಲಾಶಯ

ಆನಂದಪುರ: ಸಮೀಪದ ಅಂಬ್ಲಿಗೊಳ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದೆ.

ಗೌತಮಪುರ ಗ್ರಾಮ ಪಂಚಾಯಿತಿಯ ಡ್ಯಾಮ್ ಹೊಸೂರ್ ಗ್ರಾಮದಲ್ಲಿರುವ ಅಂಬ್ಲಿಗೊಳ ಜಲಾಶಯದ ಕೂಡಿ ಹರಿಯುತ್ತಿರುವುದು ಈ ಭಾಗದ ಜನರಿಗೆ ಸಂತಸ ತಂದಿದೆ. ಸುತ್ತಮುತ್ತಲಿನ ಗ್ರಾಮದ ಜನರು ಅಂಬ್ಲಿಗೊಳ ಜಲಾಶಯದ ಕೋಡಿ ಹರಿಯುವುದನ್ನೆ ಕಾಯುತ್ತಿರುತ್ತಾರೆ. ಕಾರಣ ಜಲಾಶಯದಲ್ಲಿ ಇರುವಂತಹ ಮೀನುಗಳು ಕೋಡಿಯೋ ಮುಖಾಂತರ ಹೊರಬರುವ ಸಂದರ್ಭದಲ್ಲಿ ಬಲೆಯನ್ನು ಬಿಸಿ ಮೀನನ್ನು ಹಿಡಿಯಲು ಮುಂದಾಗುತ್ತಾರೆ. ಇನ್ನು, ಕೋಡಿಯಲ್ಲಿ ಮೀನು ಹಿಡಿಯುತ್ತಿರುವ ಅಂತಹ ದೃಶ್ಯವನ್ನು ನೋಡಲು ನೂರಾರು ಜನರು ದಂಡೆಯ ಮೇಲೆ ನಿಂತು ವೀಕ್ಷಿಸುತ್ತಾರೆ.

ಗ್ರಾಮದ ಸಂಪರ್ಕ ಕಡಿತ:

ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ. ಗೇರುಬೀಸ್ ಹೊಳೆ ಸೇತುವೆಯ ಮೇಲೆ ಹರಿಯುತ್ತಿದ್ದು ಗೇರ್ ಬೀಸ್ ಗ್ರಾಮದ ಸಂಪರ್ಕ ಕಳೆದುಕೊಂಡಿದೆ.

ಗೇರ್ ಬೀಸ್ ಗ್ರಾಮದಲ್ಲಿ ನೂರಾರು ಕುಟುಂಬಗಳಿದ್ದು, ಮಳೆಗಾಲದಲ್ಲಿ ವಿಪರೀತ ಮಳೆಯಾದಗ ಈ ಭಾಗದ ಜನರಿಗೆ ಇಂತಹ ಸಮಸ್ಯೆ ಉಂಟಾಗುತ್ತದೆ. ಇಲ್ಲಿ ಹರಿದು ಹೋಗುವ ಹೊಳೆಯ ನೀರು ನಂದಿ ಹೊಳೆಗೆ ಸೇರಿ ಶರಾವತಿ ಹಿನ್ನೂರಿಗೆ ಸೇರಲಿದೆ.

ಎಡೆಬಿಡದ ಮಳೆಗೆ ಮನೆಯ ಗೋಡೆ ಕುಸಿತ

ರಿಪ್ಪನ್‍ಪೇಟೆ: ಹಗಲು ರಾತ್ರಿ ಎನ್ನದೇ ಎಡಬಿಡದೆ ಸುರಿದ ಭಾರಿ ಮಳೆಗೆ ಇಲ್ಲಿನ ಶಿವಮೊಗ್ಗ ರಸ್ತೆ ಶಿವಮಂದಿರ ಎದುರಿನ ರತ್ನಮ್ಮ ಎನ್ನುವವರ ಮನೆ ಗೋಡೆ ರಾತ್ರಿ ಹತ್ತು ಗಂಟೆಯ ಸುಮಾರಿನಲ್ಲಿ ಮತ್ತು ಆರಸಾಳು ಗ್ರಾಮ ಪಂಚಾಯ್ತಿ ನೀರುಗಂಟಿ ಪೀಟರ್‍ಕೋತ್ ಎಂಬುವರ ಮನೆಯ ಗೋಡೆ ಬೆಳಗ್ಗಿನ ಜಾವದಲ್ಲಿ ಕುಸಿದು ಬಿದ್ದಿದ್ದು ಯಾವುದೇ ಪ್ರಾಣಹಾನಿಯಾಗಿಲ್ಲ.

ಬರುವೆ 3 ನೇ ವಾರ್ಡ್ ನಲ್ಲಿನ ರತ್ನಮ್ಮ ನವರು ಮಲಗಿದ್ದ ಕೋಣೆಯ ಒಂದು ಭಾಗದ ಗೋಡೆ ಭಾರಿ ಸದ್ದಿನೊಂದಿಗೆ ಕುಸಿದು ಹೊರಭಾಗಕ್ಕೆ ಬಿದ್ದಿದ್ದರಿಂದ ಯಾವುದೇ ಆಪಾಯ ಸಂಭವಿಸಿಲ್ಲ.ತಕ್ಷಣವೇ ಸ್ಥಳೀಯರು ಅಗಮಿಸಿ ಮನೆಯವರ ನೆರವಿಗೆ ನಿಂತಿದ್ದಾರೆ. 

ಸಾವಿರಾರು ಎಕರೆ ಕೃಷಿ ಭೂಮಿ ಜಲಾವೃತ

ಸಾಗರ: ತಾಲ್ಲೂಕಿನಾದ್ಯಂತ ಪುನರ್ವಸು ಮಳೆ ಅಬ್ಬರ ಗುರುವಾರವೂ ಮುಂದುವರೆದಿದೆ. ಸ್ವಲ್ಪವೂ ಬಿಡುವು ನೀಡದೆ ನಿರಂತರವಾಗಿ ಮಳೆ ಸುರಿಯುತ್ತಿದೆ. ವಿಪರೀತ ಮಳೆಯಿಂದ ಜನರ, ವಾಹನಗಳ ಓಟಾಡಕ್ಕೆ ತೊಂದರೆಯುಂಟಾಯಿತು. ಇನ್ನು ಗುರುವಾರ ವಾರದ ಸಂತೆಗೂ ತೊಡಕಾಯಿತು.

ಕೆಲದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಪಟ್ಟಣದ ಇತಿಹಾಸ ಪ್ರಸಿದ್ಧ ಗಣಪತಿಕೆರೆ ಕೋಡಿಬಿದ್ದಿದೆ. ಬಸವನಹೊಳೆ ಡ್ಯಾಮಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದೆ. ಪಟ್ಟಣದಲ್ಲಿ ಹಾದುಹೋಗುವ ವರದಾನದಿ ತುಂಬಿ ಹರಿಯುತ್ತಿದೆ. ವರದಾನದಿ ಪ್ರವಾಹದಿಂದಾಗಿ ತಾಳಗುಪ್ಪ ಹೋಬಳಿಯ ಕಾನ್ಲೆ, ತಡಗಳಲೆ, ಸೈದೂರು ಮುಂತಾದ ಗ್ರಾಮಗಳ ಸಾವಿರಾರು ಎಕರೆ ಕೃಷಿ ಭೂಮಿ ಸಂಪೂರ್ಣ ಜಲಾವೃತವಾಗಿದೆ. ಕಣ್ಣು ಹಾಯಿಸಿದೆಲ್ಲೆಡೆ ನೀರೇ ಕಾಣುತ್ತಿದ್ದು ಸಮುದ್ರದಂತೆ ಗೋಚರಿಸುತ್ತಿದೆ. ಬೀಸನಗದ್ದೆ ಗ್ರಾಮದ ಸುತ್ತಲೂ ವರದಾನದಿ ಪ್ರವಾಹದ ನೀರು ಆವರಿಸಿದ್ದು ಪ್ರತಿವರ್ಷದಂತೆ ದ್ವೀಪವಾಗಿ ಪರಿಣಮಿಸಿದೆ. ಧರೆಗುರುಳಿದ ಮಾವಿನಮರ :

ಪಟ್ಟಣದ ರಾಘವೇಂದ್ರಸ್ವಾಮಿ ಮಠದ ಪಕ್ಕದಲ್ಲಿದ್ದ ಬೃಹತ್ ಮಾವಿನ ಮರವೊಂದು ಗುರುವಾರ ಬುಡಸಹಿತ ಮುರಿದು ಬಿದ್ದಿದ್ದು ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.ನಗರಸಭೆಯಿಂದ ತಕ್ಷಣ ಕಾರ್ಯಾಚರಣೆ:

ಮರ ಬಿದ್ದ ತಕ್ಷಣ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಬೃಹತ್ ಮರವನ್ನು ನಗರಸಭೆ ಮತ್ತು ಅರಣ್ಯ ಇಲಾಖೆಯವರ ಸಹಾಯದಿಂದ ಕಟಾವು ಮಾಡಿ ಸಂಚಾರಕ್ಕೆ ಅವಕಾಶ ಕಲ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೌರಾಯುಕ್ತ ಎಚ್.ಕೆ.ನಾಗಪ್ಪ, ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು, ವಾಹನ ಸವಾರರು ಹೆಚ್ಚು ಜಾಗೃತೆಯಿಂದ ಇರಬೇಕು. ಪೋಷಕರು ತಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.