ಕನ್ನಡಪ್ರಭ ವಾರ್ತೆ ಶಿರಾತಾಲೂಕಿನಾದ್ಯಂತ ಜನ ಜಾನುವಾರುಗಳಿಗೆ ನೀರಿಲ್ಲದೆ ಹಾಹಾಕಾರ ಉಂಟಾಗಿದೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಶಾಸಕ ಟಿ.ಬಿ.ಜಯಚಂದ್ರ ಅವರು ಸಮಸ್ಯೆಗಳಿಗೆ ಸ್ಪಂದಿಸದೆ ನಿರ್ಲಕ್ಷ ವಹಿಸುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಆರೋಪಿಸಿದರು.

ಅವರು ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಶಿರಾ ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಇದೆ. ಹೆಣ್ಣುಮಕ್ಕಳು ಖಾಲಿ ಕೊಡಗಳನ್ನು ಇಟ್ಟುಕೊಂಡು ಪ್ರತಿಭಟಿಸುತ್ತಿದ್ದಾರೆ. ತಾಲೂಕಿನ ಗೌಡಗೆರೆ, ಹುಲಿಕುಂಟೆ, ಕಸಬಾ ಹೋಬಳಿ ಸೇರಿದಂತೆ ಶೇ. ೮೦ರಷ್ಟು ಜನ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಪ್ರಮಾಣದಲ್ಲಿ ಕಾಡುತ್ತಿದೆ. ಆದರೆ ತಾಲೂಕಿನ ಆಡಳಿತ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಆಡಳಿದ ಯಂತ್ರ ವಿಫಲವಾಗಿದೆ ಎಂದು ಆರೋಪಿಸಿದರು.

ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಅವರು ಹಿರಿಯ ಶಾಸಕರಾಗಿದ್ದೀರಿ, ಹಲವು ಭಾರಿ ಸಚಿವರಾಗಿದ್ದೀರಿ, ದೆಹಲಿ ಪ್ರತಿನಿಧಿಗಳಾಗಿದ್ದೀರಿ ಆದರೂ ತಾಲೂಕಿನಲ್ಲಿ ಜನರ ಸಮಸ್ಯೆ ಪರಿಹಾರ ನೀಡುವಲ್ಲಿ ವಿಫಲರಾಗಿದ್ದೀರಿ. ಕೋಟ್ಯಾಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿಲ್ಲ. ಹೇಮಾವತಿ ನೀರು, ಕಳ್ಳಂಬೆಳ್ಳ ಕೆರೆ, ಶಿರಾ ಕೆರೆ ತೋರಿಸಿ ರಾಜಕಾರಣ ಮಾಡಿದ್ದೀರಿ. ಸುವರ್ಣಮುಖಿ ನದಿಯಲ್ಲಿ ಮರಳು ಗಣಿಗಾರಿಕೆ ಮಾಡಿದ ಪರಿಣಾಮ ಅಂತರ್ಜಲ ಕಡಿಮೆಯಾಗಿದೆ. ಜಾಜಿಕಟ್ಟೆ ನೀರು ಎತ್ತಿದ್ದು ಅಂತರ್ಜಲ ಕಡಿಮೆಯಾಗಿದೆ. ಶಿರಾ ನಗರದಲ್ಲಿ ಕಸದ ಸಮಸ್ಯೆ ಇದೆ. ಮೂಲಭೂತ ಸೌಲಭ್ಯ ಒದಗಿಸಿಲ್ಲ. ಯುಜಿಡಿ ಸಂಪರ್ಕ ಸರಿಯಾಗಿಲ್ಲ. ಟ್ರಾಫಿಕ್ ಸಮಸ್ಯೆ ಉಲ್ಬಣಗೊಂಡಿದೆ. ನಗರದ ಕ್ರೀಡಾಂಗಣದಲ್ಲಿ ರಾತ್ರಿ ವೇಳೆಯಲ್ಲಿ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಸ್ಟೇಡಿಯಂ ನಲ್ಲಿ ದೀಪ ಅಳವಡಿಸಿಲ್ಲ. ತಾಲೂಕು ಕಚೇರಿಯಲ್ಲಿ ಇಡೀ ವ್ಯವಸ್ಥೆ ಲಂಚದ ಮೂಲವಾಗಿ ಮಾರ್ಪಟ್ಟಿದೆ. ಹಣ ಕೊಟ್ಟರೆ ಏನು ಬೇಕಾದರೂ ಕೆಲಸ ಆಗುತ್ತದೆ. ಅಧಿಕಾರಿಗಳು ಸಮಸ್ಯೆ ಬಗೆಹರಿಸುತ್ತಿಲ್ಲ. ಗುಂಪು ಮನೆಗಳು ತುಕ್ಕು ಹಿಡಿದು ಬೀಳುತ್ತಿದೆ ಇನ್ನೂ ಹಂಚಿಕೆ ಆಗುತ್ತಿಲ್ಲ. ಥೀಮ್ ಪಾರ್ಕ್ ಗಾಗಿ ೫೦೦ ಜನ ರೈತರನ್ನು ಒಕ್ಕಲೆಬ್ಬಿಸಿದ್ದೀರಿ ಆದರೆ ಯಾಕೆ ಕೆಲಸ ಮಾಡಿಲ್ಲ. ರೈಲು ಬಂತು, ವಿಮಾನ ಬಂತು, ಕ್ರಿಕೆಟ್ ಸ್ಟೇಡಿಯಂ ಬಂತು ಎಂದು ಜನರನ್ನು ಯಾಮಾರಿಸುತ್ತಿದ್ದೀರಿ. ೧೪೦೦ ಎಕರೆ ಇಂಡಸ್ಟ್ರಿಯಲ್ ಜಮೀನು ನೀಡಿದ್ದೀರಿ ನಮ್ಮ ಜನರಿಗೆ ವಾಚ್ ಮೆನ್ ಕೆಲಸ ಕೊಟ್ಟಿದ್ದಾರೆ. ತಾಲೂಕಿನಲ್ಲಿ ಒಂದಲ್ಲ ನೂರಾರು ಸಮಸ್ಯೆಗಳು ಇವೆ. ಇವುಗಳನ್ನು ಸರಿಪಡಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು. ಸರ್ಕಾರಿ ಆಸ್ಪತ್ರೆಯಲ್ಲಿ ಗುಂಪುಗಾರಿಕೆ ಇದೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶುಚಿತ್ವ ಇಲ್ಲ, ಬಾಣಂತಿಯರನ್ನು ನೋಡಿಕೊಳ್ಳುವ ಸಂಬಂಧಿಕರು ಉಳಿದುಕೊಳ್ಳಲು ಸರಿಯಾಗಿ ಜಾಗವಿಲ್ಲ. ಸಾರ್ವಜನಿಕ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಕೇಂದ್ರ ಕೆಟ್ಟು ಹೋಗಿದೆ. ಡಯಾಲಿಸಿಸ್ ಮಾಡಿಸಲು ರೋಗಿಗಳು ಶಿಫಾರಸ್ಸು ತರಬೇಕು. ಡಯಾಲಿಸಿಸ್ ತಕ್ಷಣ ಆಗಬೇಕಾದ ಚಿಕಿತ್ಸೆ ಅದಕ್ಕೆ ಕಾಯುವ ಸ್ಥಿತಿ ಇಲ್ಲ. ಆದರೂ ಅದನ್ನು ರಿಪೇರಿ ಮಾಡಿಸದೆ ರೋಗಿಗಳಿಗೆ ತೊಂದರೆ ಆಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಮಧುಗಿರಿ ವಿಭಾಗದ ಬಿಜೆಪಿ ಅಧ್ಯಕ್ಷೆ ಉಮಾ ವಿಜಯರಾಜ್, ಪ್ರಧಾನ ಕಾರ್ಯದರ್ಶಿ ಎಂಜಲಗೆರೆ ಮೂರ್ತಿ, ಓಬಿಸಿ ಘಟಕದ ಅಧ್ಯಕ್ಷ ಮಾಗೋಡು ಪ್ರತಾಪ್, ನಗರ ಅಧ್ಯಕ್ಷ ಗಿರಿಧರ್, ಜಿಲ್ಲಾ ಉಪಾಧ್ಯಕ್ಷ ಹೊನ್ನಗೊಂಡನಹಳ್ಳಿ ಚಿಕ್ಕಣ್ಣ, ನಗರ ಉಪಾಧ್ಯಕ್ಷ ಲೋಕೇಶ್, ರೈತ ಮೋರ್ಚಾ ಅಧ್ಯಕ್ಷ ಮದ್ದೆವಳ್ಳಿ ರಾಮಕೃಷ್ಣ, ಕಾರ್ಯದರ್ಶಿ ಕುಮಾರ್ ಮಾಸ್ಟರ್, ಪ್ರಧಾನಕಾರ್ಯದರ್ಶಿ ಭಾಸ್ಕರ್, ಎಸ್‌ಟಿ ಮೋರ್ಚಾ ಅಧ್ಯಕ್ಷ ತೇಜೇಶ್ವರ್, ಮಹಿಳಾ ಘಟಕದ ನಾಗರತ್ನಮ್ಮ, ಪದ್ಮ ಮಂಜುನಾಥ್, ಬಾಂಬೆ ನಾಗಣ್ಣ, ಪುರುಷೋತ್ತಮ್, ಬೊಪ್ಪರಾಯಪ್ಪ, ವಿರೂಪಾಕ್ಷ, ಬಾಬಾ, ವೀರೇಶಪ್ಪ, ಸೇರಿದಂತೆ ಹಲವರು ಹಾಜರಿದ್ದರು. ೧೪ಶಿರಾ೧: ಶಿರಾ ನಗರದ ಪ್ರವಾಸಿ ಮಂದಿರದಲ್ಲಿ ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.