ಶಿರಗೂಡು ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ

| Published : Mar 14 2025, 12:34 AM IST

ಸಾರಾಂಶ

ಹನೂರು ತಾಲೂಕಿನ ಶಿರಗೂಡು ಲಕ್ಷ್ಮೀ ವೆಂಕಟೇಶ್ವರ ದೇವಾಲಯದಲ್ಲಿ ರಥೋತ್ಸವ ಸಂಭ್ರಮ ಸಡಗರದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಶಿರಗೂಡು ಲಕ್ಷ್ಮೀ ವೆಂಕಟೇಶ್ವರ ರಥೋತ್ಸವ ಗುರುವಾರ ಬೆಳಗ್ಗೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

ದೇವಾಲಯದಲ್ಲಿ ರಥೋತ್ಸವ ಅಂಗವಾಗಿ ವಿವಿಧ ಹೂಗಳಿಂದ ಸ್ವಾಮಿಯನ್ನು ಅಲಂಕಾರಗೊಳಿಸಿ ಪೂಜೆ ಸಲ್ಲಿಸಿ ಬಳಿಕ ದೇವಾಲಯದ ಸುತ್ತಲೂ ಪ್ರದಕ್ಷಿಣೆ ಹಾಕಲಾಯಿತು. ಈ ವೇಳೆ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ಭಕ್ತಾದಿಗಳು ಗೋವಿಂದ ಗೋವಿಂದ ನಾಮ ಸ್ಮರಣೆಯ ಮೂಲಕ ಮಹಾ ರಥೋತ್ಸವವನ್ನು ಕಣ್ತುಂಬಿಕೊಂಡರು. ರಥಕ್ಕೆ ಹಣ್ಣುದವನ ಎಸೆದು ತಮ್ಮ ಹರಕೆ ತೀರಿಸಿದರು.

ಎರಡನೇ ಚಿಕ್ಕ ತಿರುಪತಿಯಂದೇ ಪ್ರಖ್ಯಾತಿ:

ಹನೂರು ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರುವ ಶಿರಗೂಡು ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಾಲಯ ಚಿಕ್ಕ ತಿರುಪತಿಯಂದೇ ಪ್ರಖ್ಯಾತಿ ಪಡೆದಿದ್ದು, ಪ್ರಧಾನ ಅರ್ಚಕ ರಾಮಕೃಷ್ಣ ನೇತೃತ್ವದಲ್ಲಿ ಬೆಳಗಿನಿಂದ ದೇವಾಲಯದ ಲಕ್ಷ್ಮೀ ವೆಂಕಟೇಶ್ವರ, ಪದ್ಮಾವತಿಗೆ ವಿಶೇಷ ಪೂಜೆ ಕಾರ್ಯಕ್ರಮಗಳು ನಡೆಯಿತು.

ಮಜ್ಜಿಗೆ ಪಾನಕ ಅನ್ನದಾಸೋಹ: ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಪ್ರಸಾದ ಹಾಗೂ ಸಿಹಿ ಲಾಡು, ಅನ್ನದಾಸೋಹ ಮಜ್ಜಿಗೆ ಪಾನಕ ವಿತರಿಸಲು ದೇವಾಲಯ ಆಡಳಿತ ಮಂಡಳಿ ವ್ಯವಸ್ಥೆ ಕಲ್ಪಿಸಿತು. ಅರ್ಚಕ ವಾಸು ಮಾತನಾಡಿ, ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ರಥೋತ್ಸವ ಭಕ್ತಾದಿಗಳ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರುಗಿದೆ. ಬೆಳಗ್ಗೆಯಿಂದ ಅನ್ನ ಕಾರ್ಯ ನಡೆಯುತ್ತಿದೆ ವಾರದ ಪ್ರತಿ ಶನಿವಾರ ಕೂಡ ದಾಸೋಹ ವ್ಯವಸ್ಥೆ ಭಕ್ತಾದಿಗಳಿಗೆ ಇದೆ ಎಂದು ತಿಳಿಸಿದರು.

ಭಕ್ತರ ದಂಡು:

ಲಕ್ಷ್ಮೀ ವೆಂಕಟೇಶ್ವರ ರಥೋತ್ಸವಕ್ಕೆ ಹನೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಾದ ಲೊಕ್ಕನಹಳ್ಳಿ, ಉದ್ದನೂರು, ಬೆಳ್ತೂರು, ಮಹಾಲಿಂಗನ ಕಟ್ಟೆ ಹನೂರು ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಿರುಬಿಸಿಲಿನ್ನದೆ ಪಾಲ್ಗೊಂಡಿದ್ದರು. ಬೆಳಗ್ಗೆ 9.40ರಿಂದ 10.40 ಗಂಟೆವರೆಗೆ ನಡೆದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತರು ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತು ಬಿರು ಬಿಸಿಲನ್ನು ಸಹ ಲೆಕ್ಕಿಸದೆ ಸ್ವಾಮಿಯ ದರ್ಶನ ಪಡೆದು ಪುನೀತರಾದರು.ಗರುಡ ಉತ್ಸವ:

ವಿಶೇಷವಾಗಿ ಗರುಡೋತ್ಸವ ಪೂಜಾ ಕಾರ್ಯಕ್ರಮಕ್ಕೆ ಬೆಳಗ್ಗೆ 11 ಗಂಟೆಯಿಂದ 12.10ರವರೆಗೆ ಸಲ್ಲುವ ಶುಭ ವೃಷಭ ಲಗ್ನದಲ್ಲಿ ಗರುಡೋತ್ಸವ ಸಂಭ್ರಮ ಸಡಗರದಿಂದ ಜರುಗಿತು.

ಬಿಗಿ ಬಂದೋಬಸ್ತ್:

ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ರಥೋತ್ಸವ ವೇಳೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಹನೂರು ಪೊಲೀಸರು ಸೂಕ್ತ ಬಂದೋಬಸ್ತ್ ಕಲ್ಪಿಸುವ ಮೂಲಕ ಬಿಗಿ ಪಹರೆಯನ್ನು ಕೈಗೊಂಡಿದ್ದರು.