ಕ್ಯಾಂಟಿನ್‌ನ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ಸಮಯ ಪಾಲನೆಯ ಬಗ್ಗೆಯೂ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ.

ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ಪಟ್ಟಣದ ತಹಸೀಲ್ದಾರ ಕಾರ್ಯಾಲಯದ ಪಕ್ಕದಲ್ಲೇ ಇಂದಿರಾ ಕ್ಯಾಂಟೀನ್ ಇದ್ದರೂ ನಿರ್ವಹಣೆ ಕೊರತೆಯಿಂದ ಮುಚ್ಚುವ ಹಂತ ತಲುಪಿದೆ.

ಬಡವರು, ಕಾರ್ಮಿಕರು, ದುಡಿಯುವ ವರ್ಗ, ವಲಸಿಗರು, ವಿದ್ಯಾರ್ಥಿಗಳು ಹಾಗೂ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆಹಾರ ನೀಡುವ ಉದ್ದೇಶದಿಂದ ಆರಂಭಗೊಂಡ ಯೋಜನೆ ನಿರ್ವಹಣೆಯ ಕೊರತೆಯಿಂದ ಸೊರಗುತ್ತಿದೆ. ಕ್ಯಾಂಟಿನ್‌ನಲ್ಲಿ ನಿಗದಿಪಡಿಸಿರುವ ಮೆನು ಪ್ರಕಾರ ಆಹಾರ ನೀಡದೆ, ಸಿಬ್ಬಂದಿ ತಮ್ಮ ಇಚ್ಛೆಯಂತೆ ಊಟ- ಉಪಾಹಾರ ನೀಡುತ್ತಿದ್ದು, ಇದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.ಇಲಿಗಳ ಹಾವಳಿಯಿಂದ ಆಹಾರ ಪದಾರ್ಥಗಳು ಕಲುಷಿತಗೊಳ್ಳುವ ಸಾಧ್ಯತೆ ಇರುವುದರಿಂದ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕ್ಯಾಂಟಿನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಆಹಾರ ಸಾಮಗ್ರಿಗಳ ಸಂಗ್ರಹಣೆ, ಅಡುಗೆ ಕೋಣೆ, ಪಾತ್ರೆಗಳು ಹಾಗೂ ಸುತ್ತಮುತ್ತಲಿನ ಪರಿಸರವನ್ನು ಪರಿಶೀಲಿಸಿ ಸ್ವಚ್ಛತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕ್ಯಾಂಟಿನ್‌ನ ಸ್ವಚ್ಛತೆ, ಆಹಾರದ ಗುಣಮಟ್ಟ ಹಾಗೂ ಸಮಯ ಪಾಲನೆಯ ಬಗ್ಗೆಯೂ ಸಾರ್ವಜನಿಕರಿಂದ ಅಸಮಾಧಾನ ವ್ಯಕ್ತವಾಗುತ್ತಿದೆ. ನಿರ್ವಹಣೆಯಲ್ಲಿನ ಲೋಪಗಳಿಂದ ಯೋಜನೆಯ ಆಶಯವೇ ಹಾಳಾಗುವಂತಾಗಿದೆ. ಇಂದಿರಾ ಕ್ಯಾಂಟಿನ್‌ಗೆ ಸರ್ಕಾರದಿಂದ ಅನುದಾನ ಹಾಗೂ ಅಗತ್ಯ ಸೌಲಭ್ಯಗಳು ದೊರೆಯುತ್ತಿದ್ದರೂ ಸಾರ್ವಜನಿಕರಿಗೆ ಸಮರ್ಪಕ ಸೇವೆ ನೀಡದಿರುವುದು ಏಕೆ ಎಂಬ ಪ್ರಶ್ನೆ ಎದುರಾಗಿದೆ.೬ ತಿಂಗಳಿಂದ ವಿದ್ಯುತ್ ಇಲ್ಲ: ಕಳೆದ ಆರು ತಿಂಗಳಿನಿಂದ ಕ್ಯಾಂಟಿನ್‌ನಲ್ಲಿ ವಿದ್ಯುತ್ ಇಲ್ಲದೆ ಅಡುಗೆ ತಯಾರಿಸುವ ಸಾಮಗ್ರಿಗಳು ತುಕ್ಕು ಹಿಡಿದಿವೆ. ಬೋರ್‌ವೆಲ್ ಬಂದಾಗಿದೆ. ಕುಡಿಯುವ ನೀರು ಮತ್ತು ದಿನಬಳಕೆ ನೀರಿಲ್ಲದೇ ಊಟದ ತಟ್ಟೆಗಳು ದುರ್ನಾತ ಬೀರುತ್ತಿವೆ. ಕಾಯಿಪಲ್ಲೆ, ರೇಷನ್‌ನಲ್ಲಿ ಇಲಿ, ಹೆಗ್ಗಣಗಳು ಓಡಾಡುತ್ತಿವೆ. ಹೆಜ್ಜೆ ಹೆಜ್ಜೆಗೂ ಇಲಿಗಳು ಕಾಣುತ್ತಿದ್ದು, ಅಡುಗೆ ಪದಾರ್ಥಗಳಲ್ಲಿ ಇಲಿ ಹಿಕ್ಕೆಗಳು ಬಿದ್ದು ಅಪಾಯ ತಂದೊಡ್ಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕ್ಯಾಂಟಿನ್ ಮುಚ್ಚುವ ಹಂತಕ್ಕೆ?: ಅಧಿಕಾರಿಗಳ ನಿರಾಸಕ್ತಿ, ನಿರ್ವಹಣೆಯ ಕೊರತೆ ಮತ್ತು ಮೆನು ಪಾಲನೆಯಲ್ಲಿನ ಲೋಪಗಳಿಂದ ಕ್ಯಾಂಟಿನ್‌ಗಳು ಜನರಿಂದ ದೂರವಾಗುತ್ತಿವೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರದ ಮಹತ್ವಾಕಾಂಕ್ಷೆಯ ಇಂದಿರಾ ಕ್ಯಾಂಟಿನ್ ಯೋಜನೆ ಮುಚ್ಚುವ ಹಂತಕ್ಕೆ ತಲುಪುವ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಕಳೆದ ಒಂದು ವರ್ಷದಿಂದ ಈ ರೀತಿ ನಿರ್ವಹಣಾ ಸಮಸ್ಯೆ ಎದುರಾಗಿದ್ದು, ಗ್ರಾಹಕರು ಸಹ ಹಿಡಿಶಾಪ ಹಾಕುತ್ತಿದ್ದು, ಅಲ್ಲದೇ ಬಹಳಷ್ಟು ಗ್ರಾಹಕರು ಇಂದಿರಾ ಕ್ಯಾಂಟಿನ್‌ನಿಂದ ದೂರವಾಗುತ್ತಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ಯಾಂಟಿನ್‌ಗೆ ಭೇಟಿ ನೀಡಿ ಆಹಾರದ ಗುಣಮಟ್ಟ, ಮೆನು ಪಾಲನೆ, ಸ್ವಚ್ಛತೆ, ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಸಾರ್ವಜನಿಕರಿಗೆ ನೀಡುತ್ತಿರುವ ಸೇವೆಯನ್ನು ಪರಿಶೀಲಿಸಿ, ಲೋಪ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕ್ಯಾಂಟಿನ್‌ಗಳನ್ನು ಸಮರ್ಪಕವಾಗಿ ನಿರ್ವಹಿಸಿ ಬಡ ಜನರಿಗೆ ಯೋಜನೆಯ ಸಂಪೂರ್ಣ ಪ್ರಯೋಜನ ದೊರಕುವಂತೆ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಕ್ಯಾಂಟಿನ್ ಅವ್ಯವಸ್ಥೆ: ನಾನು ಹೊಸದಾಗಿ ಕರ್ತವ್ಯಕ್ಕೆ ಹಾಜರಾಗಿದ್ದು, ಶಿರಹಟ್ಟಿಯಲ್ಲಿರುವ ಇಂದಿರಾ ಕ್ಯಾಂಟಿನ್ ಅವ್ಯವಸ್ಥೆ ಬಗ್ಗೆ ಪರಿಶೀಲಿಸಿ ತಕ್ಷಣ ಸಂಬಂಧಿಸಿದ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮೆನು ಪ್ರಕಾರ ಊಟ, ಉಪಾಹಾರ ನೀಡಲು ಕ್ರಮ ವಹಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ ತಿಳಿಸಿದರು.

ದಿವ್ಯ ನಿರ್ಲಕ್ಷ್ಯ: ಕಡಿಮೆ ದರದಲ್ಲಿ ಊಟ ನೀಡುವುದಷ್ಟೇ ಮುಖ್ಯವಲ್ಲ, ಶುಚಿತ್ವ, ಸುರಕ್ಷತೆ ಹಾಗೂ ಗುಣಮಟ್ಟದ ಆಹಾರ ಒದಗಿಸುವುದೂ ಕ್ಯಾಂಟಿನ್‌ನ ಜವಾಬ್ದಾರಿಯಾಗಿದೆ. ಇಂದಿರಾ ಕ್ಯಾಂಟೀನ್ ಯೋಜನೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಸರ್ಕಾರ ಅಧಿಕಾರದಲ್ಲಿರುವಾಗಲೇ ಯೋಜನೆ ಹಳ್ಳ ಹಿಡಿಯುವಂತಾಗಿದೆ. ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸಬೇಕು ಎಂದು ತಾಲೂಕು ಪಂಚ ಗ್ಯಾರಂಟಿ ಸಮಿತಿ ಅಧ್ಯಕ್ಷ ವೀರಯ್ಯ ಮಠಪತಿ ತಿಳಿಸಿದರು.