ಉದ್ಯಾನವನವಿಲ್ಲದ ಶಿರಹಟ್ಟಿ ಪಟ್ಟಣ

| Published : Mar 31 2024, 02:01 AM IST

ಸಾರಾಂಶ

ಸಧ್ಯ ತಾಲೂಕು ಕ್ರೀಡಾಂಗಣ, ಡಬಾಲಿ ಹೈಸ್ಕೂಲ್ ಮೈದಾನ, ಛಬ್ಬಿ ರಸ್ತೆ, ಹರಿಪುರ, ಯಲಿಶಿರುಂದ, ಸೊರಟೂರ ರಸ್ತೆಗಳೇ ಬಹುತೇಕ ನಾಗರಿಕರಿಗೆ ವಾಕಿಂಗ್ ತಾಣಗಳಾಗಿವೆ

ಮಹದೇವಪ್ಪ ಎಂ. ಸ್ವಾಮಿ ಶಿರಹಟ್ಟಿ

ಶಿರಹಟ್ಟಿ ತಾಲೂಕು ಕೇಂದ್ರ ಸ್ಥಾನವಾಗಿದ್ದರೂ ಇಲ್ಲಿ ಒಂದೇ ಒಂದು ಉದ್ಯಾನವನ ಇಲ್ಲ. ಶಿರಹಟ್ಟಿ ತಾಲೂಕು ರಾಜ್ಯದಲ್ಲಿಯೇ ಅತ್ಯಂತ ಹಿಂದುಳಿದ ತಾಲೂಕು ಎಂಬ ಹೆಗ್ಗಳಿಕೆಗೆ ಹೆಸರಾಗಿದೆ. ಪಟ್ಟಣದ ಅಭಿವೃದ್ಧಿಗೆ ಇಲ್ಲಿನ ಚುನಾಯಿತ ಜನಪ್ರತಿನಿಧಿಗಳ ನಿರ್ಲಕ್ಷವೇ ಕಾರಣ ಎಂದು ಜನತೆ ಹಿಡಿಶಾಪ ಹಾಕುತ್ತಿದ್ದಾರೆ.

ಪಟ್ಟಣದ ಸೌಂದರ್ಯಕ್ಕೆ ಉದ್ಯಾನವನಗಳು ಭೂಷಣ. ಅದರಂತೆ ಪಟ್ಟಣದಲ್ಲಿ ನೋಡಲು ಹೇಳಿಕೊಳ್ಳುವಂತಹ ಒಂದೂ ಉದ್ಯಾನವನ ಕಾಣ ಸಿಗದು. ಪಪಂ ಮುಖ್ಯಾಧಿಕಾರಿಗಳು ಸೇರಿದಂತೆ ಸಧ್ಯ ಆಡಳಿತಾಧಿಕಾರಿಯಾಗಿರುವ ತಹಸೀಲ್ದಾರ ಗಾರ್ಡನ್ ಅಭಿವೃದ್ದಿ ಪಡಿಸುವತ್ತ ಹೆಚ್ಚಿನ ಅಸಕ್ತಿ ತೋರಿಸಬೇಕಾಗಿದೆ ಎಂದು ಸಾರ್ವಜನಿಕರ ಒತ್ತಾಸೆಯಾಗಿದೆ.

ಪಟ್ಟಣದ ವಿದ್ಯಾನಗರ, ಫಕ್ಕೀರೇಶ್ವರ ನಗರ, ಶಬ್ಬೀರ ಕಾಲನಿ ಅಲ್ಲದೇ ಹೊಸದಾಗಿ ನಿರ್ಮಾಣಗೊಳ್ಳುತ್ತಿರುವ ಸಿದ್ದರಾಮೇಶ್ವರ ನಗರ, ಏಳು ಕೋಟಿ ನಗರ ಸೇರಿದಂತೆ ಇನ್ನೂ ಹಲವೆಡೆ ಹೊಸ ಹೊಸ ಬಡಾವಣೆಗಳು ತಲೆ ಎತ್ತುತ್ತಿದ್ದು, ಈ ಎಲ್ಲ ಸ್ಥಳಗಳಲ್ಲಿ ಉದ್ಯಾನವನಕ್ಕಾಗಿ ಕಾಯ್ದಿರಿಸಲಾದ ಜಾಗ ಎಂದು ಅಧಿಕಾರಿಗಳು ಹೇಳುತ್ತಿದ್ದು, ದಶಕಗಳೇ ಕಳೆದರೂ ಉದ್ಯಾನವನ ನಿರ್ಮಾಣವಾಗಿಲ್ಲ. ವಾತಾವರಣ ಶುದ್ದವಾಗಿಟ್ಟುಕೊಳ್ಳಲು ಉದ್ಯಾನವನದ ಅಗತ್ಯತೆ ಹೆಚ್ಚಿದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ.

ಸಧ್ಯ ತಾಲೂಕು ಕ್ರೀಡಾಂಗಣ, ಡಬಾಲಿ ಹೈಸ್ಕೂಲ್ ಮೈದಾನ, ಛಬ್ಬಿ ರಸ್ತೆ, ಹರಿಪುರ, ಯಲಿಶಿರುಂದ, ಸೊರಟೂರ ರಸ್ತೆಗಳೇ ಬಹುತೇಕ ನಾಗರಿಕರಿಗೆ ವಾಕಿಂಗ್ ತಾಣಗಳಾಗಿವೆ. ದಿನನಿತ್ಯ ಬೆಳಗಿನ ಜಾವ ಮತ್ತು ಸಂಜೆ ಹೊತ್ತಿಗೆ ಸೂಮಾರು ನೂರರಿಂದ ಎರಡನೂರು ಜನ ವಾಯುವಿಹಾರಕ್ಕಾಗಿ ಇಲ್ಲಿಗೆ ಬರುತ್ತಾರೆ. ಇವರಲ್ಲಿ ಸರ್ಕಾರಿ ಇಲಾಖೆ ಅಧಿಕಾರಿಗಳು ಸೇರಿದಂತೆ ಪಪಂ ಸದಸ್ಯರೂ ಸೇರಿರುತ್ತಾರೆ.

ಹೀಗೆ ದಿನಾಲು ರಸ್ತೆ, ಮೈದಾನಕ್ಕೆ ಬರುವ ಬದಲು ಒಂದು ಸುಸಜ್ಜಿತ ಉದ್ಯಾನವನ ನಿರ್ಮಿಸಲು ಈ ಪುರಪಿತೃಗಳು ಏಕೆ ಮನಸ್ಸು ಮಾಡುತ್ತಿಲ್ಲ ಎಂಬುದು ಪಟ್ಟಣದ ಜನತೆಯ ಪ್ರಶ್ನೆ.

ಪಾರ್ಕಗಳೇ ಇಲ್ಲ: ಬೇಸಿಗೆ ರಜೆ ಸಮಯದಲ್ಲಿ ಪಟ್ಟಣಗಳಿಗೆ ಅತಿಥಿಗಳು ಬರುವುದು ಸಾಮಾನ್ಯ. ಹೀಗೆ ಬಂದ ಅತಿಥಿಗಳಿಗೆ ತೋರಿಸಲು ಯಾವುದೇ ಪಾರ್ಕಗಳಿಲ್ಲ. ತೋಟಗಾರಿಕೆ ಇಲಾಖೆಯವರು ಚಿಕ್ಕದಾದ ತಮ್ಮ ಕಾರ್ಯಾಲಯದ ಆವರಣದಲ್ಲಿಯೇ ಉದ್ಯಾನವನ ನಿರ್ಮಿಸಿಕೊಂಡಿದ್ದು, ಸರಿಯಾದ ನಿರ್ವಹಣೆ ಇಲ್ಲದೇ ಜನತೆ ಅಲ್ಲಿ ಹೋಗಲು ಹಿಂದೇಟು ಹಾಕುತ್ತಿದ್ದಾರೆ.

ತಾಲೂಕು ಕಚೇರಿಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಬಂದು ಹೋಗುವ ಸಾರ್ವಜನಿಕರಿಗೆ,ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಊಟಕ್ಕೆ ಮತ್ತು ವಿಶ್ರಮಿಸಲು ಒಂದು ತಣ್ಣನೆಯ ತಾಣವಿಲ್ಲ. ಸುಡುಬಿಸಿಲಿನಲ್ಲಿಯೇ ತಾಲೂಕು ಕಚೇರಿ ಎದುರು ಒಂಟಿ ಕಾಲಿನಲ್ಲಿ ನಿಂತು ತಮ್ಮ ಸರ್ಕಾರಿ ಕೆಲಸ ಕಾರ್ಯ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಹೀಗೆ ತಾಲೂಕು ಕೇಂದ್ರ ಸ್ಥಳಕ್ಕೆ ಬರುವ ಜನರು ತಾಲೂಕಾಡಳಿತಕ್ಕೆ ಹಿಡಿಶಾಪ ಹಾಕಿ ತೆರಳುವಂತಾಗಿದೆ. ತಾಲೂಕಾಡಳಿತ ಇನ್ನೂ ಮುಂದಾದರು ಎಚ್ಚೆತ್ತುಕೊಳ್ಳಬೇಕಾಗಿದೆ.

ಒಟ್ಟಾರೆಯಾಗಿ ತಾಲೂಕು ಕೇಂದ್ರ ಸ್ಥಳದಲ್ಲಿ ಒಂದು ಸುಸಜ್ಜಿತ ಉದ್ಯಾನವನ ನಿರ್ಮಾಣವಾಗಬೇಕೆಂಬುದು ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದೆ.

ಪಟ್ಟಣದ ವಾಲ್ಮೀಕಿ ಭವನದ ಪಕ್ಕದಲ್ಲಿ ಸುಸಜ್ಜಿತವಾದ ಉದ್ಯಾನವನ ನಿರ್ಮಿಸಲು ಪಪಂ ವತಿಯಿಂದ ₹೧೨ ಲಕ್ಷ ಅನುದಾನ ಮೀಸಲಿಡಲಾಗಿದೆ.ಈಗಾಗಲೇ ಎಲ್ಲ ಕ್ರಿಯಾ ಯೋಜನೆಯೂ ಸಿದ್ದವಾಗಿದೆ. ಚುನಾವಣೆ ಮುಗಿದ ಬಳಿಕ ಕಾಮಗಾರಿ ಆರಂಭಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಿಮನಿ ಹೇಳಿದರು.