ಸರ್ಕಾರದಿಂದ ಮಂಜೂರಾದ ₹೫ ಲಕ್ಷ, ಮೀನುಗಾರಿಕಾ ಇಲಾಖೆಯಿಂದ ₹೧೦ ಲಕ್ಷ, ವೈಯಕ್ತಿಕವಾಗಿ ₹೧ ಲಕ್ಷ ಹಾಗೂ ಜನತಾ ಸಹಕಾರಿ ಪತ್ತಿನ ಸಂಘದಿಂದ ₹೫೦ ಸಾವಿರ ಸೇರಿದಂತೆ ₹೧೬.೫೦ ಲಕ್ಷಗಳನ್ನು ವಿತರಿಸಿದರು.

ಮೃತರ ಕುಟುಂಬಕ್ಕೆ ಮಾಜಿ ಸಚಿವ ಮಂಕಾಳ ವೈದ್ಯರಿಂದ ಪರಿಹಾರಧನದ ಚೆಕ್ ಹಸ್ತಾಂತರಮೃತ ಲಕ್ಷ್ಮೀ ನಾಯ್ಕ ಕುಟುಂಬಕ್ಕೆ ಮನೆ ನಿರ್ಮಾಣಕ್ಕೂ ₹5 ಲಕ್ಷ ನೀಡುವ ಭರವಸೆಕನ್ನಡಪ್ರಭ ವಾರ್ತೆ ಭಟ್ಕಳ

ಶಿರಾಲಿಯ ತಟ್ಟಿಹಕ್ಕಲಿನಲ್ಲಿ ನಡೆದ ದುರಂತದಲ್ಲಿ ಮೃತಪಟ್ಟ ಶಿರಾಲಿ ಸಾರದಹೊಳೆಯ ೧೧ ಜನರ ಕುಟುಂಬಕ್ಕೆ ರಾಜ್ಯದ ಮಾಜಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಉ.ಕ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಸರ್ಕಾರದಿಂದ ಮಂಜೂರಾದ ₹೫ ಲಕ್ಷ, ಮೀನುಗಾರಿಕಾ ಇಲಾಖೆಯಿಂದ ₹೧೦ ಲಕ್ಷ, ವೈಯಕ್ತಿಕವಾಗಿ ₹೧ ಲಕ್ಷ ಹಾಗೂ ಜನತಾ ಸಹಕಾರಿ ಪತ್ತಿನ ಸಂಘದಿಂದ ₹೫೦ ಸಾವಿರ ಸೇರಿದಂತೆ ₹೧೬.೫೦ ಲಕ್ಷಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಪ್ರಥಮ ಎನ್ನುವಂತೆ ದೊಡ್ಡ ದುರಂತವೊಂದು ನಡೆದು ಹೋಗಿದೆ. ದುರಂತದಲ್ಲಿ ಮಡಿದವರಿಗೆ ಭಗವಂತ ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುವುದರೊಂದಿಗೆ ಅವರ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ನಾವು ಮಾಡಬೇಕಾಗಿದೆ. ಇಲ್ಲಿ ಮಾನವೀಯತೆಯ ದೃಷ್ಟಿಯಿಂದ ಎಲ್ಲ ಅಗತ್ಯ ಸಹಾಯ-ಸಹಕಾರ ಮಾಡುತ್ತಿದ್ದೇವೆ. ಅಲ್ಲದೇ ಉಳ್ಳವರು ಕೂಡಾ ಅವರಿಗೆ ಸಹಾಯ-ಸಹಕಾರ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳಿದರು.

ಮೃತರ ಮಕ್ಕಳಿಗೆ ತಾವು ಅನಾಥರಾಗಿದ್ದೇವೆ ಎನ್ನುವ ಭಾವನೆ ಬರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದರೆ ತಮ್ಮದೇ ಬೀನಾ ವೈದ್ಯ ಶಾಲೆಯಲ್ಲಿ ಅಥವಾ ಇನ್ನಿತರ ಯಾವುದೇ ಶಾಲೆಯಲ್ಲಿ ಅವಕಾಶ ಕೊಡಿಸುವ ಜವಾಬ್ದಾರಿ ತನ್ನದು ಎಂದರು.

ವೈಯಕ್ತಿಕ ಧನ ಸಹಾಯ:

ಈಗಾಗಲೇ ವೈಯಕ್ತಿಕವಾಗಿ ₹೧ ಲಕ್ಷ ನೀಡಿದ್ದ ಮಂಕಾಳ ವೈದ್ಯ ಅವರು ಲಕ್ಷ್ಮೀ ಶಿವರಾಮ ನಾಯ್ಕ ಅವರ ಪುಟ್ಟ ಪುಟ್ಟ ಮಕ್ಕಳಿಗೆ ಸೂರಿಲ್ಲದಿರುವುದನ್ನು ನೋಡಿ ಸ್ಥಳದಲ್ಲಿಯೇ ₹೫ ಲಕ್ಷ ಮನೆ ಕಟ್ಟಿಕೊಳ್ಳಲು ಕೊಡುವುದಾಗಿ ಭರವಸೆ ನೀಡಿದರು.

ನನ್ನ ಕ್ಷೇತ್ರದಲ್ಲಿಯೇ ಬಹುದೊಡ್ಡ ದುರಂತ ಸಂಭವಿಸಿದ್ದರಿಂದ ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದೇ ಹುಟ್ಟುಹಬ್ಬದಂದೇ ಈ ಮನೆಯ ಅಡಿಗಲ್ಲು ಹಾಕುವುದಾಗಿ ಘೋಷಿಸಿದರು.

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿ, ಡಿವೈಎಸ್‌ಪಿ ಗಿರೀಶ ಮುಂತಾದ ಅಧಿಕಾರಿ ವರ್ಗದವರು ಹಾಗೂ ಕಾಂಗ್ರೆಸ್ ಮುಖಂಡರು, ಊರಿನ ಪ್ರಮುಖರು, ನಾಮಧಾರಿ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.