ಸಾರಾಂಶ
ಶಿರಸಿ:ಏಪ್ರಿಲ್‌ನಲ್ಲಿ ಸಿಂಗಾಪುರದಲ್ಲಿ ನಡೆಯುವ ಎರಡನೇ ವಿಶ್ವಕನ್ನಡ ಹಬ್ಬಕ್ಕೆ ಶಿರಸಿಯ ಕದಂಬ ಕಲಾ ವೇದಿಕೆಯ ಇಬ್ಬರು ಗಾಯಕರು ಆಯ್ಕೆಯಾಗಿದ್ದಾರೆ ಎಂದು ಕದಂಬ ಕಲಾ ವೇದಿಕೆ ಅಧ್ಯಕ್ಷ ರತ್ನಾಕರ ನಾಯ್ಕ ತಿಳಿಸಿದರು.ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ದುಬೈನಲ್ಲಿ ಆಯೋಜಿಸಿದ್ದ ಮೊದಲನೇ ವಿಶ್ವಕನ್ನಡ ಸಮ್ಮೇಳನ ಯಶಸ್ವಿಯಾದ ಹಿನ್ನಲೆ ಈ ಬಾರಿಯೂ ಕೂಡ ಬೆಂಗಳೂರಿನ ಕರ್ನಾಟಕ ಪ್ರೆಸ್‌ಕ್ಲಬ್ ಕೌನ್ಸಿಲ್ ವತಿಯಿಂದ ಸಿಂಗಾಪುರದಲ್ಲಿ ಎರಡನೇ ವಿಶ್ವಕನ್ನಡ ಹಬ್ಬವನ್ನು ಏಪ್ರಿಲ್‌ನಲ್ಲಿ ಆಯೋಜಿಸಲಾಗಿದೆ ಎಂದರು.ಈ ಅಭೂತಪೂರ್ವ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಶಿರಸಿಯ ಕದಂಬ ಕಲಾ ವೇದಿಕೆ ತಂಡದ ಸುಗಮ ಸಂಗೀತ ಹಾಗೂ ಚಲನಚಿತ್ರ ಗಾಯಕರಾದ ಶಿರಸಿ ರತ್ನಾಕರ ಹಾಗೂ ದಿವ್ಯಾ ಶೇಟ್ ಆಯ್ಕೆಯಾಗಿದ್ದಾರೆ. ಈ ಸಮ್ಮೇಳನದಲ್ಲಿ ಖ್ಯಾತ ತತ್ವಜ್ಞಾನಿ ಸದ್ಗುರು ವಾಸುದೇವ, ಮೈಸೂರು ಮಹಾರಾಜರು, ನಟ ಡಾ. ಶಿವರಾಜಕುಮಾರ ಮುಂತಾದ ಅನೇಕ ಗಣ್ಯರು ಪಾಲ್ಗೊಳ್ಳಲ್ಲಿದ್ದು, ನಾಡಿನ ಸುಪ್ರಸಿದ್ಧ ಗಾಯಕರು, ಕವಿ-ಸಾಹಿತಿಗಳು, ವಾದ್ಯಗಾರರು ಸೇರಿದಂತೆ 300ಕ್ಕೂ ಅಧಿಕ ಕಲಾವಿದರು ಈ ವಿಶ್ವಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.ಡಿ. 27ರಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‌ನಲ್ಲಿ ವಿಶ್ವಕನ್ನಡ ಹಬ್ಬದ ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಲಿದ್ದಾರೆ. ಶಿರಸಿಯಲ್ಲಿಯೂ ಕೂಡ ವಿಶ್ವಕನ್ನಡ ಹಬ್ಬದ ಪೋಸ್ಟರ್ ಬಿಡುಗಡೆಗೊಳಿಸಲಿದ್ದೇವೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಕದಂಬ ಕಲಾ ವೇದಿಕೆಯ ಖ್ಯಾತ ಗಾಯಕಿ ದಿವ್ಯಾ ಶೇಟ್, ಪ್ರಮುಖರಾದ ವಿಘ್ನೇಶ್ವರ ಹೆಗಡೆ, ಜ್ಯೋತಿ ರತ್ನಾಕರ, ಲಕ್ಷ್ಮಣ ಶೇಟ್, ನಯನಾ ನಾಯ್ಕ ಇದ್ದರು.