ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವ ಶೋಭಾಯಾತ್ರೆ ಭಾನುವಾರ ಬೆಳಗಿನ ಜಾವ ವಿಜೃಂಭಣೆಯಿಂದ ನಡೆಯಿತು.
ಶ್ರೀಕಾಂತ್ ಹೆಮ್ಮಾಡಿಕನ್ನಡಪ್ರಭ ವಾರ್ತೆ ಉಡುಪಿ
ಶೀರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವ ಶೋಭಾಯಾತ್ರೆ ಭಾನುವಾರ ಬೆಳಗಿನ ಜಾವ ವಿಜೃಂಭಣೆಯಿಂದ ನಡೆಯಿತು. ಮುಂಜಾನೆ 1.30ಕ್ಕೆ ಕಾಪು ದಂಡತೀರ್ಥದಲ್ಲಿ ಪುಣ್ಯಸ್ನಾನ ಮುಗಿಸಿ, ಉಡುಪಿ ನಗರದ ಜೋಡುಕಟ್ಟೆಗೆ ಆಗಮಿಸಿದ ಯತಿಗಳು, ಅಲ್ಲಿ ಇತರ ಸಪ್ತ ಮಠಾಧೀಶರ ಉಪಸ್ಥಿತಿಯಲ್ಲಿ ತಮ್ಮ ಪಟ್ಟದ ದೇವರಿಗೆ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿ ಕಟ್ಟೆಯಲ್ಲಿ ವಿರಾಜಮಾನರಾಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಚಾಲನೆ ನೀಡಿದ ವೈಭವದ ಮೆರವಣಿಗೆಯನ್ನು ವೀಕ್ಷಿಸಿದರು.ಸುಮಾರು 2 ಗಂಟೆಗೆ 100ಕ್ಕೂ ಅಧಿಕ ಜನಪದ ಕಲಾ ಪ್ರಕಾರಗಳು, ಸ್ತಬ್ಧಚಿತ್ರಗಳು, ಚೆಂಡೆ ತಂಡಗಳು ಮೆರವಣಿಗೆಯ ವೈಭವವನ್ನು ಹೆಚ್ಚಿಸಿದವು. ಜಗ್ಗಲಿಕೆ ವಾದ್ಯ, ಪೂಜಾ ಕುಣಿತ, ಗೊರವರ ಕುಣಿತ, ಕೊಂಬು ಕಹಳೆ, ಪುಟಾಣಿಗಳಿಂದ ಮರಕಾಲು ಕುಣಿತ, ಕಂಗೀಲು ನೃತ್ಯ, ನಾಸಿಕ್ ಬ್ಯಾಂಡ್, ಗೊಂಬೆಯಾಟ, ತಾಲೀಮು ತಂಡಗಳು ನೆರೆದಿದ್ದ ಲಕ್ಷಾಂತರ ಮಂದಿಗೆ ಮನರಂಜನೆ ಒದಗಿಸಿದವು.
ಬಳಿಕ ಜೇಷ್ಠತೆಯ ಆಧಾರದಲ್ಲಿ ಸಪ್ತ ಮಠಾಧೀಶರು ತಂತಮ್ಮ ಮಠದ ಅಲಂಕೃತವಾದ, ತೆರೆದ ವಾಹನದ ಮೇಲಿರಿಸಿದ್ದ ಪಲ್ಲಕ್ಕಿಯಲ್ಲಿ ಕುಳಿತು ರಥಬೀದಿಗೆ ಮೆರವಣಿಗೆಯಲ್ಲಿ ಸಾಗಿದದರು, ಭಾವಿ ಪರ್ಯಾಯ ಶ್ರೀ ವೇದವರ್ಧನ ತೀರ್ಥರ ಪಲ್ಲಕ್ಕಿಯನ್ನು ಮಾತ್ರ ಯುವ ಉತ್ಸಾಹಿಗಳ ತಂಡ ಹೆಗಲ ಮೇಲೆ ಹೊತ್ತು ಮೆರವಣಿಗೆ ನಡೆಸಿದ್ದು ವಿಶೇಷವಾಗಿತ್ತು.ಕೋರ್ಟು ರಸ್ತೆ, ಡಯಾನ ವೃತ್ತ, ಐಡಿಯಲ್ ವೃತ್ತ, ತೆಂಕಪೇಟೆ ಮಾರ್ಗವಾಗಿ ಸುಮಾರು 2 ಕಿಮಿ ಸಾಗಿದ ಈ ಗಜಗಾಂಭೀರ್ಯದಲ್ಲಿ 5.45ಕ್ಕೆ ರಥಬೀದಿಯನ್ನು ಪ್ರವೇಶಿಸಿದ ಮೆರವಣಿಗೆಯ ಸೊಬಗನ್ನು ಜನರು ರಸ್ತೆಯ ಇಕ್ಕೆಲಗಳಲ್ಲಿ, ಬೃಹತ್ ಕಟ್ಟಡಗಳ ಮೇಲೆ, ಕಾಂಪೌಂಡ್ ಗಳ ಮೇಲೆ ಕುಳಿತು ಕಣ್ತುಂಬಿಕೊಂಡರು.ಮೆರವಣಿಗೆಯಲ್ಲಿ ಲಕ್ಷ್ಮೀವರ ತೀರ್ಥರು !ಶಿರೂರು ಮಠದ ಈ ಹಿಂದಿನ ಯತಿ ಶೀರೂರು ಮಠದ ಶ್ರೀ ಲಕ್ಷ್ಮೀವರ ತೀರ್ಥರ ಮೂರ್ತಿ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದಿರುವುದು ವಿಶೇಷವಾಗಿತ್ತು.
ಮೆರವಣಿಗೆಯ ನೇತೃತ್ವವನ್ನು ಪರ್ಯಾಯೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷ ಶಾಸಕ ಯಶ್ಪಾಲ್ ಸುವರ್ಣ ಮತ್ತವರ ತಂಡ ಯಶಸ್ವಿಯಾಗಿ ನಿರ್ವಹಿಸಿತು. ಈ ಸಂದರ್ಭದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕರಾದ ರಘುಪತಿ ಭಟ್, ಪ್ರಮೋದ್ ಮಧ್ವರಾಜ್, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ, ಸಂಚಾಲಕ ಸುಪ್ರಸಾದ್ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಪ್ರಮುಖರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ, ವೀಣಾ ಎಸ್.ಶೆಟ್ಟಿ, ನಯನ ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಪೊಲೀಸ್, ಪೌರರ ಸೇವೆಗೆ ಮೆಚ್ಚುಗೆ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ನೇತೃತ್ವದ ವಿವಿಧ ಪೊಲೀಸ್ ಅಧಿಕಾರಿಗಳು ಮತ್ತು ನೂರಾರು ಪೊಲೀಸರ ಮೆರವಣಿಗೆ, ವಾಹನಸಂಚಾರ, ಸುವ್ಯವಸ್ಥೆ, ಬಿಗು ಬಂದೋಬಸ್ತ್ ವ್ಯವಸ್ಥೆ ಶ್ಲಾಘನೀಯವಾಗಿತ್ತು. ಮೆರವಣಿಗೆಯ ಕೊನೆಯಲ್ಲಿ ಬಿದ್ದಿದ್ದ ಕಸ, ಪ್ಲಾಸ್ಟಿಕ್ ಬಾಟಲು, ಪೇಪರ್‌ಗಳನ್ನು ನಗರಸಭೆಯ ಪೌರಕಾರ್ಮಿಕರು ತಕ್ಷಣವೇ ಸ್ವಚ್ಛಗೊಳಿಸುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದರು.