ಸಾರಾಂಶ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತ ಶೋಧ ಕಾರ್ಯಾಚರಣೆ ನಿರ್ಣಾಯಕ ಘಟ್ಟಕ್ಕೆ ಬಂದು ತಲುಪಿದೆ. ಗುರುವಾರ ಹತ್ತನೇ ದಿನದ ಕಾರ್ಯಾಚರಣೆಯಲ್ಲಿ ನೇವಿ, ಆರ್ಮಿ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಜತೆಗೆ ನಿವೃತ್ತ ಮೇಜರ್ ಜನರಲ್ ಇಂದ್ರಬಾಲನ್ ಅವರ ನೇತೃತ್ವದಲ್ಲಿ ಎಐ ತಂತ್ರಜ್ಞಾನ ಹೊಂದಿರುವ ಡ್ರೋನ್ ಮೂಲಕ ನದಿಯ ಆಳದಲ್ಲಿ ಲಾರಿ ಇರುವಿಕೆಯನ್ನು ಪತ್ತೆಹಚ್ಚಲಾಗಿದೆ.
ಇಂಟೆಲಿಜೆಂಟ್ ಅಂಡರ್ ಗ್ರೌಂಡ್ ಬರೀಡ್ ಒಬ್ಜೆಕ್ಟ್ ಡಿಟೆಕ್ಷನ್ ಸಿಸ್ಟಮ್ ಒಳಗೊಂಡಿರುವ ಡ್ರೋನ್ ನದಿಯ ಮೇಲೆ ಹಾಗೂ ಭೂಮಿಯ ಮೇಲೆ ಹಾರಾಟ ನಡೆಸಿ ಶೋಧ ಕಾರ್ಯ ಕೈಗೊಂಡಿದೆ. ಕೇರಳ ಮೂಲದ ಅರ್ಜುನ್ ಅವರಿದ್ದ ಬೆಂಜ್ ಲಾರಿ ಹಾಗೂ ಮೃತದೇಹಗಳ ಹುಡುಕಾಟಕ್ಕೆ ಈ ತಂತ್ರಜ್ಞಾನ ಬಳಕೆ ಮಾಡಲಾಗಿದೆ.ನೌಕಾನೆಲೆಯ ಹೆಲಿಕಾಪ್ಟರ್ ಮೂಲಕವೂ ಪತ್ತೆ ಕಾರ್ಯಾಚರಣೆ ನಡೆಸಲಾಗಿದೆ. ನೇವಿ ಸೋನಾರ್ ಸಿಗ್ನಲ್ ಮೂಲಕ ಗುರುತು ಮಾಡಿದ್ದು, ಮೃತದೇಹಗಳು ಹಾಗೂ ಲಾರಿಯ ಕುರುಹುಗಾಗಿ ಹೆಲಿಕಾಪ್ಟರ್ ಹಾರಾಟ ನಡೆಸಿದೆ. ನೇವಿಯಿಂದ ನುರಿತ ಮುಳುಗು ತಜ್ಞರು ಕಾರ್ಯಾಚರಣೆ ನಡೆಸಿದ್ದರೂ ನೀರಿನ ಹರಿವಿನ ವೇಗ 6 ನಾಟಿಕಲ್ ಮೈಲಿಗಿಂತ ಹೆಚ್ಚು ಇರುವುದರಿಂದ ಶೋಧ ಯಶಸ್ವಿಯಾಗಲಿಲ್ಲ.ಕಣ್ಮರೆಯಾದ ಅರ್ಜುನ್, ಜಗನ್ನಾಥ ಹಾಗೂ ಲೋಕೇಶ್‌ಗಾಗಿ ಹುಡುಕಾಟ ನಡೆಯುತ್ತಿದೆ.ಬೃಹತ್ ಬೂಮ್ ಪೋಕ್ಲೈನ್ ಎಕ್ಸ್ಕವೇಟರ್ ಹಾಗೂ ರೇಡಾರ್ ಸಿಗ್ನಲ್ ಹರಿಸುವ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ನದಿಯಲ್ಲಿ ಲಾರಿ ಇರುವ ಬಗ್ಗೆ ಸಿಗ್ನಲ್ ದೊರಕಿದೆ. ಸೋನಾರ್, ರೇಡಾರ್ ಸಿಗ್ನಲ್ ಜತೆ ಪೋಕ್ಲೈನ್ ಕಾರ್ಯಾಚರಣೆಯ ವೇಳೆಯೂ ಲಾರಿಯಂತಹ ವಸ್ತು ಇರುವುದು ಬೆಳಕಿಗೆ ಬಂದಿದೆ.
ಅರ್ಧ ದೇಹ ಸರವಣನ್‌ದ್ದು
ಇತ್ತೀಚೆಗೆ ಸಮುದ್ರದಲ್ಲಿ ದೊರೆತಿರುವ ಅರ್ಧ ಮೃತದೇಹ ತಮಿಳುನಾಡು ಮೂಲದ ಟ್ಯಾಂಕರ್ ಚಾಲಕ ಸರವಣನ್ ಅವರದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಶವವನ್ನು ಡಿಎನ್‌ಎ ಪರೀಕ್ಷೆಗೆ ಕಳಿಸಲಾಗಿತ್ತು. ವರದಿಯಲ್ಲಿ ಸರವಣನ್ ಅವರದ್ದೇ ಎಂದು ದೃಢವಾಗಿದೆ.
ಇಂದು 9 ತಾಲೂಕುಗಳಿಗೆ ರಜೆ ಕಾರವಾರ: ಹವಾಮಾನ ಇಲಾಖೆ ಜಿಲ್ಲೆಯಲ್ಲಿ ಶುಕ್ರವಾರ ಭಾರಿ ಮಳೆಯಾಗುವ ಮುನ್ಸೂಚನೆ ನೀಡಿದ ಹಿನ್ನೆಲೆಯಲ್ಲಿ ಜಿಲ್ಲೆಯ 9 ತಾಲೂಕುಗಳ ಶಾಲಾ- ಕಾಲೇಜುಗಳಿಗೆ ಶುಕ್ರವಾರ ಜಿಲ್ಲಾಧಿಕಾರಿ ರಜೆ ಘೋಷಿಸಿದ್ದಾರೆ.ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ದಾಂಡೇಲಿ, ಜೋಯಿಡಾ, ಹಳಿಯಾಳ ಹಾಗೂ ಯಲ್ಲಾಪುರ ತಾಲೂಕುಗಳ ಪದವಿಪೂರ್ವ ಕಾಲೇಜುಗಳ ತನಕ, ಐಟಿಐ ಹಾಗೂ ಡಿಪ್ಲೊಮಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.