ಸಾರಾಂಶ
ಶಿರ್ವ ಸಂತ ಮೇರಿ ಪ.ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2 ಲಕ್ಷ 50000 ರು. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾಪು
ಸುವರ್ಣ ವರ್ಷದ ಸಂಭ್ರಮದಲ್ಲಿರುವ ಶಿರ್ವ ಸಂತ ಮೇರಿ ಪ.ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದಿಂದ ಆರ್ಥಿಕವಾಗಿ ಹಿಂದೆ ಇರುವ ಹಾಗೂ ಪ್ರತಿಭಾವಂತರಾಗಿರುವ ಅದೇ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಅದೇ ಸಂಸ್ಥೆಯಲ್ಲಿ ಕಲಿತು ಉನ್ನತ ಶಿಕ್ಷಣ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳಿಗೆ 2 ಲಕ್ಷ 50000 ರು. ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.ಸಂತ ಮೇರಿ ಶಿಕ್ಷಣ ಸಂಸ್ಥೆಗಳ ಸಂಚಾಲಕ, ಧರ್ಮಗುರುಗಳಾದ ರೇ.ಫಾ ಡಾ ಲೆಸ್ಲಿ ಡಿ‘ಸೋಜ ಅವರು ವಿದ್ಯಾರ್ಥಿ ವೇತನ ವಿತರಿಸಿ ಮಕ್ಕಳಿಗೆ ಮಾರ್ಗದರ್ಶನ ನೀಡಿ ಹಳೆ ವಿದ್ಯಾರ್ಥಿ ಸಂಘದ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ವಿದ್ಯಾರ್ಥಿ ವೇತನವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿ ಶುಭಹಾರೈಸಿ ಮಾತನಾಡಿದರು.
ಸಂಘದ ಅಧ್ಯಕ್ಷ ನೊರ್ಬಾಟ್ ಮಾಚದೊ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತ ಕೋರಿದರು. ವಿದ್ಯಾರ್ಥಿ ವೇತನ ಪಡೆದ ವಿದ್ಯಾರ್ಥಿಗಳ ಪರವಾಗಿ ನಿತಿನ್ ವಾಗ್ಲೆ, ಆಶ್ಲೇಶ್ ಪ್ರಭು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಜಯಶಂಕರ್ ಅವರು ಸಂಘದ ಕಾರ್ಯಚಟುವಟಿಕೆ ಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.ಶಿರ್ವ ಚರ್ಚ್ ನ ಪಾಲನ ಮಂಡಳಿಯ ಮೆಲ್ವಿನ್ ಅರಾನ್ನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕೋಶಾಧಿಕಾರಿ ಡಾ. ಗುರುರಾಜ್ ಅವರು ವಿದ್ಯಾರ್ಥಿವೇತನ ಪಡೆದವರ ವಿವರ ನೀಡಿದರು. ಕಾರ್ಯದರ್ಶಿ ಮೋಹನ್ ನೊರೊನ್ಹಾ ಅವರು ವಂದಿಸಿದರು. ಸಂಘದ ಕಾರ್ಯಕಾರಿ ಸಮಿತಿಯ ಕೆ ಆರ್ ಪಾಟ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಮಕ್ಕಳ ಹೆತ್ತವರು ಉಪಸ್ಥಿತರಿದ್ದರು.