ಸಾರಾಂಶ
ಕನ್ನಡಪ್ರಭ ವಾರ್ತೆ ಕಾಪು
೯೮ ವರ್ಷಗಳ ಸೇವಾ ಇತಿಹಾಸ ಹೊಂದಿರುವ ಇಲ್ಲಿನ ಬಂಟಕಲ್ಲು ಶ್ರೀದುರ್ಗಾಪರಮೇಶ್ವರಿ ಅನುದಾನಿತ ಶಾಲೆಯಲ್ಲಿ ಕೆಲವು ವರ್ಷಗಳಿಂದ ಇಲಾಖೆಯಿಂದ ಯಾವುದೇ ಅಧಿಕೃತ ಶಿಕ್ಷಕರು ಇಲ್ಲದ್ದಿದ್ದರೂ, ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿ ದಾನಿಗಳ ಸಹಕಾರದಿಂದ ಗೌರವ ಶಿಕ್ಷಕರನ್ನು ನಿಯೋಜಿಸಿ ಕನ್ನಡ ಶಾಲೆಗಳನ್ನು ನಡೆಸುವ ದಯನೀಯ ಸ್ಥಿತಿಯಲ್ಲೂ ಶಾಲಾ ಪ್ರಾರಂಭೋತ್ಸವ ವರ್ಣರಂಜಿತವಾಗಿ ನಡೆಸಿದ ಹಿರಿಮೆ ಈ ಶಾಲೆಯಲ್ಲಿ ನಡೆದಿದೆ.ಶುಕ್ರವಾರ ಬೆಳಗ್ಗೆ ಶಾಲಾ ಆಡಳಿತ ಮಂಡಳಿ, ಅಭಿವೃದ್ಧಿ ಸಮಿತಿ, ವಿದ್ಯಾರ್ಥಿಗಳ ಪೋಷಕರ ಜೊತೆಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಗಾಳಿ ತುಂಬಿದ ಬೆಲೂನು ನೀಡಿ, ಮುಖ್ಯ ರಸ್ತೆಯಿಂದ ಚಂಡೆ, ಮಂಗಲವಾದ್ಯದಲ್ಲಿ ಮೆರವಣಿಗೆಯ ಮೂಲಕ ಬರ ಮಾಡಿಕೊಂಡು, ಶಾಲಾ ಮಹಾದ್ವಾರದಲ್ಲಿ ಪುಷ್ಪಾರ್ಚಣೆ, ಹಣೆಗೆ ತಿಲಕ, ಆರತಿ ಬೆಳಗಿ, ಸಿಹಿ ನೀಡಿದ ಸಂಭ್ರಮದಿಂದ ಶಿಕ್ಷಕಿಯರು ಸ್ವಾಗತಿಸಿದರು.
ಒಂದನೇ ತರಗತಿಗೆ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳನ್ನು ಗಣ್ಯರು ತಮ್ಮ ಹೆಗಲಮೇಲೆ ಕುಳ್ಳಿರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬಂದುದು ವಿಶೇಷ ಆಕರ್ಷಣೆಯಾಗಿತ್ತು. ಮಧ್ಯಾಹ್ನ ಪಾಯಸ, ಹೋಳಿಗೆ, ವಡೆ ಸೇರಿದಂತೆ ಭರ್ಜರಿ ಭೂರಿ ಭೋಜನ, ಮಕ್ಕಳಿಗಂತೂ ಖುಷಿಯೋ ಖುಷಿ!ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಬಂಟಕಲ್ಲು ದೇವಳದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಶಾಲಾ ಸಂಚಾಲಕ ಗಂಪದಬೈಲು ಜಯರಾಮ ಪ್ರಭು, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ವಿಶ್ವನಾಥ್ ಪ್ರಭು, ಶಿರ್ವ ಗ್ರಾ.ಪಂ. ಸದಸ್ಯ ಕೆ.ಆರ್.ಪಾಟ್ಕರ್, ಶ್ರೀದೇವಳದ ಉಪಾಧ್ಯಕ್ಷ ಉಮೇಶ ಪ್ರಭು ಪಾಲಮೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ರವೀಂದ್ರ ಪಾಟ್ಕರ್, ರಘುನಾಥ್ ನಾಯಕ್ ಪುನಾರು ಸೇರಿದಂತೆ ಶಾಲಾಭಿಮಾನಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸಂಗೀತಾ ಆರ್ ಪಾಟ್ಕರ್, ಗೌರವ ಶಿಕ್ಷಕಿಯರಾದ ಶಾಲಿನಿ, ವಿನುತಾ, ರೇಷ್ಮಾ, ಸುಮತಿ, ನಾಗರತ್ನಾ ಉಪಸ್ಥಿತರಿದ್ದರು.