ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕಬಾರದು ಎಂದು ಶಿವಸೇನಾ ಕರ್ನಾಟಕ (ಏಕನಾಥ ಶಿಂಧೆ ಬಣ) ಪ್ರತಿಭಟನೆ ನಡೆಸುವ ಮುಖಾಂತರ ರಾಜ್ಯಪಾಲರಿಗೆ ಒತ್ತಾಯಿಸಿ ಮನವಿ ಸಲ್ಲಿಸಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ರಾಜ್ಯ ಸರ್ಕಾರದ ದ್ವೇಷ ಭಾಷಣ ಮಸೂದೆಗೆ ಅಂಕಿತ ಹಾಕಬಾರದು ಎಂದು ಶಿವಸೇನಾ ಕರ್ನಾಟಕ (ಏಕನಾಥ ಶಿಂಧೆ ಬಣ) ಪ್ರತಿಭಟನೆ ನಡೆಸುವ ಮುಖಾಂತರ ರಾಜ್ಯಪಾಲರಿಗೆ ಒತ್ತಾಯಿಸಿ ಮನವಿ ಸಲ್ಲಿಸಿತು.

ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ವಿಜಯ ಪಾಟೀಲ್, ಕರ್ನಾಟಕ ಸರ್ಕಾರ ಪ್ರಸಕ್ತ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಯಾವುದೇ ವಿಸೃತ ಚರ್ಚೆ, ಮತ ವಿಭಜನೆ, ತಿದ್ದುಪಡಿ, ಸೇರ್ಪಡೆಗೆ ಅವಕಾಶವನ್ನೂ ನೀಡದೆ ತರಾತುರಿಯಲ್ಲಿ ದ್ವೇಷ ಭಾಷಣ ಮಸೂದೆ ಮಂಡಿಸಿದೆ. ಇದೊಂದು ಪ್ರಜಾಪ್ರಭುತ್ವ, ವಾಕ್ ಸ್ವಾತಂತ್ರ್ಯದ ಕಗ್ಗೊಲೆಯ ಕರಾಳ ಮಸೂದೆಯಾಗಿದೆ. ರಾಜ್ಯದಲ್ಲಿ ತುರ್ತು ಪರಿಸ್ಥಿತಿ ನಿರ್ಮಿಸುವ ಹುನ್ನಾರ ಸ್ಪಷ್ಟವಾಗಿ ಕಾಣಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ನಡೆದ ಭೀಕರ, ವಾಸ್ತವ ಸತ್ಯಗಳನ್ನು ಸಮಾಜಕ್ಕೆ ತಿಳುಹಿಸಿದರೆ, ನಮ್ಮ ಭಾವನೆಗಳನ್ನು ವ್ಯಕ್ತಪಡಿಸಿದರೆ, ಸರ್ಕಾರದ ಜನ ವಿರೋಧಿ ನೀತಿ ಟೀಕಿಸಿದರೆ ಮುಂತಾದ ಸಂದರ್ಭಗಳಲ್ಲಿ ಪ್ರಕರಣ ದಾಖಲಿಸಿ ಸತ್ಯ ದಮನಿಸುವ ಷಡ್ಯಂತ್ರ ಈ ಕಾಯ್ದೆಯ ಹಿಂದೆ ಅಡಗಿದೆ ಎಂದು ವಿಜಯ ಪಾಟೀಲ್‌ ಆರೋಪಿಸಿದರು.

ಈ ಕಾಯ್ದೆಯು ಸರ್ಕಾರಿ ಅಧಿಕಾರಿಗಳಿಗೆ ಮುಕ್ತ ಅವಕಾಶ ಕೊಟ್ಟು ವಿರೋಧ ಪಕ್ಷಗಳನ್ನು ಜನದನಿಯನ್ನು ಅಡಗಿಸುವ ದುರುದ್ದೇಶದ ದುರ್ಬಳಕೆಗೆ ಸರ್ಕಾರ ರಹದಾರಿಯಾಗಿಸಿಕೊಂಡಿದೆ ಎಂದು ಕಿಡಿಕಾರಿದರು.

ಇಂತಹ ಜನವಿರೋಧಿ, ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ, ವಾಕ್ ಸ್ವಾತಂತ್ರ್ಯ ವಿರೋಧಿ, ಕಾನೂನು ವಿರೋಧಿ ಮಸೂದೆಗೆ ಸಹಿ ಹಾಕದೆ ಪ್ರಜಾಪ್ರಭುತ್ವ, ಡಾ. ಬಾಬಾಸಾಹೇಬರ ಸಂವಿಧಾನ ಮೌಲ್ಯಎತ್ತಿ ಹಿಡಿಯುವಂತೆ ರಾಜ್ಯಪಾಲರಿಗೆ ಒತ್ತಾಯಿಸಿದರು.

ಶಿವಸೇನಾ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಚೆನ್ನಾರಡ್ಡಿಗೌಡ ಕೋಡಾಲ್, ಉಪಾಧ್ಯಕ್ಷ ಬಸನಗೌಡ ಕನ್ಯಾಕೌಳೂರು, ಪ್ರ. ಕಾರ್ಯದರ್ಶಿ ಶಶಾಂಕ ನಾಯಕ, ಯುವ ಘಟಕದ ಜಿಲ್ಲಾಧ್ಯಕ್ಷ ಸಂದೀಪ ಮಹೇಂದ್ರಕರ್, ಶಂಕರ ಸೋನಾರ, ಮಲ್ಲು ಪೂಜಾರಿ ಮುಂಡರಗಿ, ಮಲ್ಲು ಕಲಾಲ್ ಮುಂಡರಗಿ, ವಿಶ್ವಾ ಬಾಲಛೇಡ, ಶರಣು ಹಾಲಗೇರಿ, ರಾಮರಾವ್ ಕುಲಕರ್ಣಿ, ಇತರರು ಇದ್ದರು.