ಮುಂಬರುವ ಎಲ್ಲ ಚುನಾವಣೆಗಳಲ್ಲಿ ಶಿವಸೇನೆ ಸ್ಪರ್ಧೆ

| Published : Oct 20 2025, 01:04 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಶಿವಸೇನೆ ಪಕ್ಷ ಅಭಿವೃದ್ಧಿ, ಹಾಗೂ ಹಿಂದುತ್ವವಾದಿ ಪಕ್ಷವಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಮೊದಲ ಆಧ್ಯತೆ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯದಲ್ಲಿ ನಾವು ಅದರ ಚುಕ್ಕಾಣಿ ಹಿಡಿದಿದ್ದೇವೆ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗಸ್ವಾಮಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಿವಸೇನೆ ಪಕ್ಷ ಅಭಿವೃದ್ಧಿ, ಹಾಗೂ ಹಿಂದುತ್ವವಾದಿ ಪಕ್ಷವಾಗಿದೆ. ಭಾರತದಲ್ಲಿ ಹಿಂದೂಗಳಿಗೆ ಮೊದಲ ಆಧ್ಯತೆ ಸಿಗಬೇಕು ಎಂಬ ಕಾರಣಕ್ಕೆ ರಾಜ್ಯದಲ್ಲಿ ನಾವು ಅದರ ಚುಕ್ಕಾಣಿ ಹಿಡಿದಿದ್ದೇವೆ ಎಂದು ಶಿವಸೇನಾ ರಾಜ್ಯಾಧ್ಯಕ್ಷ ಆಂದೋಲಾ ಸಿದ್ಧಲಿಂಗಸ್ವಾಮಿ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಭಿವೃದ್ಧಿಯಲ್ಲಿ ಭಾರತ ವಿಶ್ವದ ನಂಬರ್ ಒನ್ ಆಗಬೇಕು, ರೈತರು ಅಭಿವೃದ್ಧಿಯಾಗಬೇಕು ಎಂಬುದು ಪಕ್ಷದ ಸ್ಪಷ್ಠ ಉದ್ದೇಶವಿದೆ. ಹಾಗಾಗಿ ಮುಂಬರುವ ರಾಜ್ಯದಲ್ಲಿನ ಎಲ್ಲ ಚುನಾವಣೆಗಳಲ್ಲಿ ಶಿವಸೇನೆಯಿಂದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಈಗಾಗಲೇ ನಾವು ರಾಜ್ಯಾದ್ಯಂತ ಜಿಲ್ಲಾ ಪ್ರವಾಸ ಮಾಡಿ, ಪಕ್ಷ ಸಂಘಟನೆ ಮಾಡುತ್ತಿದ್ದು, ಮುಂದೆ ಎಲ್ಲ ಕ್ಷೇತ್ರಗಳಲ್ಲೂ ಪ್ರಭಲ ಆಕಾಂಕ್ಷಿಗಳನ್ನು ಕಣಕ್ಕೆ ಇಳಿಸಲಾಗುವುದು ಎಂದರು.

ಈ ಬಾರಿ ರಾಜ್ಯದಲ್ಲಿ ಪ್ರವಾಹದಿಂದ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಬೆಳೆ ಹಾನಿಯಿಂದ ತತ್ತರಿಸಿವೆ. ಆದರೆ, ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಕೊಡದೆ ನಡು ನೀರಲ್ಲಿ ಕೈ ಬಿಟ್ಟಿದೆ. ಜಾತಿ ಸಮೀಕ್ಷೆ ಮುಖ್ಯವಲ್ಲ, ರೈತರ ಬೆಳೆಹಾನಿ ಸಮೀಕ್ಷೆ ಮುಖ್ಯವಾಗಿದೆ. ಆದರೆ, ಇದನ್ನು ಅರಿಯದ ಕಾಂಗ್ರೆಸ್ ಸರ್ಕಾರ ಸೂಪ್ತ ಸ್ಥಿತಿಗೆ ತಲುಪಿದೆ. ಬೆಳೆ ಹಾನಿಗೊಳಗಾದ ರೈತರಿಗೆ ಒಣ ಬೇಸಾಯವಿದ್ದಲ್ಲಿ ಎಕರೆಗೆ ₹ 25 ಸಾವಿರ ಪರಿಹಾರವನ್ನು ಪ್ರತಿ ರೈತನ 10 ಎಕರೆಗೆ ಕೊಡಬೇಕು. ವಾಣಿಜ್ಯ ಬೆಳೆಗಳಿದ್ದಲ್ಲಿ ಎಕರೆಗೆ ₹ 50 ಸಾವಿರದಂತೆ 5 ಎಕರೆವರೆಗೆ ಪರಿಹಾರ ಕೊಡಬೇಕು ಎಂದು ಶಿವಸೇನೆ ಪಕ್ಷದಿಂದ ಆಗ್ರಹಿಸಿದರು.

ಕಲಬುರಗಿಯಲ್ಲಿ ಪ್ರಯಾಂಕ ಖರ್ಗೆ ಆಡಳಿತವಿದೆ, ಅವರು ಪದಗ್ರಹಣ ಮಾಡಿದ ಮೊದಲ ಸಭೆಯಿಂದಲೇ ಹಿಂದೂ ವಿರೋಧಿ ಮಾತನಾಡಿದ್ದಾರೆ. ಅಂದಿನಿಂದ ಹಿಂದೂ ವಿರೋಧಿಯನ್ನೇ ಮಾಡುತ್ತಿದ್ದಾರೆ. ಅಭಿವೃದ್ಧಿ ಬಿಟ್ಟು ಆರ್‌ಎಸ್‌ಎಸ್ ಹಾಗೂ ಹಿಂದೂ ಸಮಾಜ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸುತ್ತಲೂ ಇರುವ ಬ್ರಷ್ಟ ಪಿಡಿಒಗಳನ್ನು ಬಿಟ್ಟು, ಆರ್‌ಎಸ್‌ಎಸ್ ಗಣವೇಷ ಹಾಕಿದ ಪಿಡಿಒನನ್ನು ಸಸ್ಪೆಂಡ್ ಮಾಡಿದರು. ಖರ್ಗೆ ಜೊತೆ ಇರುವವರು ನಮ್ಮನ್ನು ಹಾಗೂ ಒಬ್ಬ ಶಾಸಕನನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದರು ಎಂದು ಆರೋಪಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಕನ್ಹೇರಿ ಶ್ರೀಗಳಿಗೆ ನಿರ್ಬಂಧ ವಿಧಿಸಿದ್ದು ಖಂಡನೀಯ. ಕನ್ಹೇರಿ ಶ್ರೀಗಳು ಭಯೋತ್ಪಾದಕರಾ?, ಅವರು ಯಾರ ಮೇಲಾದರೂ ಹಲ್ಲೆ ಮಾಡಿದ್ದಾರಾ?. ಒಂದು ಮಾತು ಆಡಿದ ಸ್ವಾಮೀಜಿಗೆ ನಿರ್ಬಂಧ ಹೇರುವುದು ಯಾವ ನ್ಯಾಯ?. ಸಚಿವ ಎಂ.ಬಿ.ಪಾಟೀಲರು ತಮ್ಮ ಹಿಂಬಾಲಕರಿಂದ ಶ್ರೀಗಳಿಗೆ ಅವಮಾನ ಮಾಡುವುದು ಸರಿಯಲ್ಲ. ಸ್ವಾಮೀಜಿಗಳಿಗೆ ವಿಷಾದ ವ್ಯಕ್ತಪಡಿಸಿ ಎಂದು ಸಚಿವರು ಕರೆಮಾಡಿ ಹೇಳಿದ್ದರೆ ಮುಗಿಯುತ್ತಿತ್ತು. ಅಪಾಯಕಾರಿ ದುಷ್ಠ ಶಕ್ತಿಗಳು ಸಚಿವರ ಸುತ್ತಮುತ್ತಲಲ್ಲೇ ಇದ್ದಾರೆ. ಅಮೀತ್ ಶಾ ತಲೆ‌ ಕಡಿದರೆ, ನಾಲಿಗೆ ಕಡೆದರೆ ಒಂದು ಕೋಟಿ ಬಹುಮಾನ ಕೊಡುತ್ತೇನೆ ಎಂದು ಹೇಳಿದ ವಿಜಯಪುರದವರ ಮೇಲೆ ಕೇಸ್ ಆಯಿತಾ?, ಕ್ರಮ ಆಯಿತಾ ಎಂದು ಪ್ರಶ್ನಿಸಿದರು. ಸಚಿವರ ಕೃಪಾ ಕಟಾಕ್ಷದಿಂದಲೇ ಇದಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.

ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕುಮ್ಮರಶಿರಸಿ ಗ್ರಾಮದಲ್ಲಿ ಅ.19ರಂದು ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನವನ್ನು ಬೇರೆ ಕಾರಣವೊಡ್ಡಿ ತಹಸೀಲ್ದಾರ್‌ ಅದನ್ನು ರದ್ದು ಮಾಡಿದ್ದಾರೆ. ಇದನ್ನು ಶಿವಸೇನೆ ಖಂಡಿಸುತ್ತದೆ ಎಂದರು.

ಇದೇ ವೇಳೆ ಜಿಲ್ಲೆಯ ಹಂಗಾಮಿ ಜಿಲ್ಲಾ ಅಧ್ಯಕ್ಷರಾಗಿ ಬಲಭೀಮ ಸಾಳುಂಕೆ ಹಾಗೂ ಜಿಲ್ಲಾ ಕಾರ್ಯದರ್ಶಿಯಾಗಿ ಭೀಮಾಶಂಕರ ಕ್ಷತ್ರಿ ಅವರನ್ನು ಪಕ್ಷದ ಧ್ವಜ ನೀಡಿ ನೇಮಿಸಲಾಯಿತು. ಶಿವಸೇನಾ ರಾಜ್ಯ ಸಂಘಟನಾ ಕಾರ್ಯದರ್ಶಿ ಅಮರನಾಥ ಹಾಗೂ ಕಾರ್ಯಕರ್ತರಿ ಉಪಸ್ಥಿತರಿದ್ದರು.