ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಭವ್ಯ ಪರಂಪರೆಯನ್ನು ಹೊಂದಿರುವ ಶಿವಶರಣರ ಜೀವನದ ಮಾರ್ಗಗಳು, ತತ್ವಗಳು, ಚಿಂತನಾ ನೆಲೆಗಳನ್ನು ಅರಿತುಕೊಳ್ಳುವ ಅವಶ್ಯಕತೆ ಇದ್ದು ಸಂತೃಪ್ತ ಹಾಗೂ ನೆಮ್ಮದಿಯ ಬದುಕನ್ನು ಯುವಪೀಳಿಗೆ ಪಡೆದುಕೊಳ್ಳಬೇಕಾದರೆ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕಿದೆ ಎಂದು ಸಮಾಜ ಸೇವಕ ಲೋಕೇಶ್ವರ ತಿಳಿಸಿದರು.ತಾಲೂಕಿನ ಬಿ.ರಂಗಾಪುರ ಗ್ರಾಮದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಹೊನ್ನವಳ್ಳಿ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಸೇವಾ ಪದ ಸ್ವೀಕಾರ ಹಾಗೂ ಶರಣ ಆರ್.ಕೆ. ಶಿವಶಂಕರಪ್ಪನವರಿಂದ ನಡೆದ ಅಶ್ವತ್ಥವೃಕ್ಷ ದೀಕ್ಷೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಸರ್ವ ಸಮಾನತೆಯನ್ನು ಹನ್ನೆರಡನೇ ಶತಮಾನದಲ್ಲಿಯೇ ಜಾರಿಗೊಳಿಸಿ ಸಾಮಾಜಿಕ ಕ್ರಾಂತಿಗೆ ನಾಂದಿ ಹಾಡಿದ್ದ ಬಸವಣ್ಣನವರು ಈ ನಾಡಿನ ಶ್ರೇಷ್ಠ ಕೊಡುಗೆ. ಅನುಭವ ಮಂಟಪದ ಮೂಲಕ ಕಾಯಕ ನಿಷ್ಠೆ, ನಿತ್ಯ ಕಾಯಕದೊಂದಿಗೆ ವಚನ ಸೃಷ್ಟಿಯಲ್ಲಿ ಯಾರೊಬ್ಬರೂ ಮೇಲು, ಕೀಳಲ್ಲ, ಅನುಭವದ ಮೂಸೆಯಿಂದ ರಚಿತವಾದ ವಚನಗಳು ಬರೀ ಸಾಹಿತ್ಯವಾಗದೆ ನಡೆ-ನುಡಿಗಳೆರಡೂ ಮೇಳೈಸಿದ ಅಪರೂಪದ ಪ್ರಕಾರವಾಗಿತ್ತು. ಪ್ರಸ್ತುತ ಸನ್ನಿವೇಶಕ್ಕೆ ಶರಣ ತತ್ವ ವಿಚಾರಧಾರೆ ಅವಶ್ಯಕವಾಗಿದ್ದು, ಅವಸರ ಮತ್ತು ಅಗತ್ಯತೆಯ ಅವಘಡಗಳಿಗೆ ಶರಣ ಸಾಹಿತ್ಯ ವಿಚಾರಧಾರೆಯೇ ಮದ್ದಾಗಿದೆ ಎಂದರು. ಶಸಾಪ ಜಿಲ್ಲಾಧ್ಯಕ್ಷ ಎಂ.ಜಿ. ಸಿದ್ದರಾಮಯ್ಯ ಮಾತನಾಡಿ, ಶರಣ ಶಿವಶಂಕರಪ್ಪನವರು ಪರಿಸರಕ್ಕೆ ಉತ್ತಮ ಕೊಡುಗೆಯಾಗಿ ಅಶ್ವತ್ಥ ವೃಕ್ಷ ದೀಕ್ಷೆಯ ಮೂಲಕ ಹೋಬಳಿ ಘಟಕಕ್ಕೆ ಚಾಲನೆ ನೀಡಿರುವುದು ವಿಶೇಷ ಸಂಕೇತವಾಗಿದೆ. ಬಸವಾದಿ ಪ್ರಮಥರ ಸಂದೇಶಗಳು ಸರಿಯಾದ ಹಾದಿಯಲ್ಲಿ ಮುನ್ನಡೆಯತ್ತಿವೆ ಎಂಬುದಕ್ಕೆ ಇಂದಿನ ಶರಣ ಗೋಷ್ಠಿಯೇ ಸಾಕ್ಷಿ ಎಂದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷೆ ಲತಾಮಣಿ ವಚನ ಸಾಹಿತ್ಯದಲ್ಲಿ ಮಹಿಳೆಯರ ಪಾತ್ರ ಎಂಬ ವಿಷಯದ ಬಗ್ಗೆ ಮಾತನಾಡುತ್ತಾ, ವಚನ ಯುಗ ನಾಡಿನ ಸುವರ್ಣ ಯುಗ. ಅಲ್ಲಮ ಪ್ರಭು ಬಸವಣ್ಣನವರ ನಾಯಕತ್ವದ ಅನುಭವ ಮಂಟಪದಲ್ಲಿ ಮುವತ್ತನಾಲ್ಕಕ್ಕೂ ಹೆಚ್ಚು ಸುಪ್ರಸಿದ್ಧ ವಚನಕಾರ್ತಿಯರು ಯಾವುದೇ ಲಿಂಗ, ಭೇದ, ಜಾತಿ, ಭೇದವಿಲ್ಲದೆ ಕಾಯಕ ಮತ್ತು ವಚನ ಸೃಷ್ಟಿಗಳೆರಡರಲ್ಲೂ ತೊಡಗಿಸಿಕೊಂಡಿದ್ದರು. ಸಮಾಜದ ಅತ್ಯಂತ ನಿಕೃಷ್ಠ ವರ್ಗದ ಸೂಳೆ ಸಂಕವ್ವೆಯಂತಹವರನ್ನೂ ಬಸವಣ್ಣ ಅತ್ಯಂತ ಗೌರವಾದರಗಳಿಂದ ನಡೆಸಿಕೊಳ್ಳುತ್ತಿದ್ದರು ಎಂಬುದಕ್ಕೆ ಸ್ಪಷ್ಠ ಉದಾಹರಣೆ ಎಂದರು. ಅಧ್ಯಕ್ಷತೆ ವಹಿಸಿದ್ದ ಶಸಾಪ ತಾಲೂಕು ಅಧ್ಯಕ್ಷ ಪಿ.ಆರ್.ಗುರುಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ತಾಲೂಕು ಶಸಾಪ ಅಧ್ಯಕ್ಷರಾದ ಪಿ.ಆರ್. ಗುರುಸ್ವಾಮಿಯವರು ಶಸಾಪ ಧ್ವಜವನ್ನು ಆರ್.ಕೆ. ಶಿವಶಂಕರಪ್ಪನವರಿಗೆ ಹಸ್ತಾಂತರಿಸುವ ಮೂಲಕ ಹೋಬಳಿ ಘಟಕಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ.ಎಂ. ರಾಜಣ್ಣ, ಶಸಾಪ ಪದಾಧಿಕಾರಿಗಳಾದ ವಿಮಲಾ, ಹೆಚ್. ಎಸ್. ಸೋಮಶೇಖರ್, ಪಂಕಜಾಕ್ಷಿ, ಸ್ವರ್ಣಗೌರಮ್ಮ, ಕಾತ್ಯಾಯಿನಿ, ಸಚ್ಚಿದಾನಂದ್, ಹಂ.ಸಿ.ಶಿವಕುಮಾರ್, ನಂ.ಶಿವಗಂಗಪ್ಪ, ಡಿ.ಎಸ್.ಮರುಳಪ್ಪ, ಬಸವರಾಜು, ಕೆ.ಎಸ್.ಸದಾಶಿವಯ್ಯ, ಎಸ್.ಎಸ್. ಕುಮಾರಸ್ವಾಮಿ, ಮಲ್ಲಿಕಾರ್ಜುನಯ್ಯ, ಶಂಕರಲಿಂಗಪ್ಪ, ಓಂಕಾರಮೂರ್ತಿ, ಡಿ.ಎಸ್. ಲೋಕೇಶ್, ಸರಸ್ವತಿ ಭೂಷಣ್, ಸುಮನ್ ಜಯದೇವ್, ಜಯಶೀಲ, ಧನಂಜಯ ಮತ್ತಿತರರಿದ್ದರು.