ಜಾತಿ ಮೀರಿದ ಚಳವಳಿ ಹುಟ್ಟುಹಾಕಿದ ಶಿವಶರಣರು

| Published : Mar 25 2024, 12:51 AM IST

ಸಾರಾಂಶ

12ನೇ ಶತಮಾನದ ಶರಣರು ಜಾತಿ ಮೀರಿದ ಚಳವಳಿ ಹುಟ್ಟುಹಾಕಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ. ಜಾತಿವಿರೋಧಿ, ಪ್ರಭುತ್ವವಿರೋಧಿ, ಆರ್ಥಿಕ ಸಮಾನತೆ, ಲಿಂಗ ಸಮಾನತೆ, ಜನರಿಂದ ಜನರಿಗಾಗಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹಾಗಾಗಿ, 12ನೇ ಶತಮನಾದ ವಚನ ಸಾಹಿತ್ಯ 21ನೇ ಶತಮಾನಕ್ಕೂ ಪ್ರಸ್ತುತವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಬಿ.ಜೆ. ಹೊನ್ನಾಳಿಯಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ, ಹೊನ್ನಾಳಿ

12ನೇ ಶತಮಾನದ ಶರಣರು ಜಾತಿಯನ್ನು ಮೀರಿದ ಚಳವಳಿ ಹುಟ್ಟುಹಾಕಿ ಇಡೀ ಜಗತ್ತಿಗೆ ಮಾದರಿಯಾಗಿದ್ದಾರೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಧನಂಜಯ ಬಿ.ಜೆ. ಹೇಳಿದರು.

ಪಟ್ಟಣದ ಎಸ್‍ಜೆವಿಪಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕು ಕದಳಿ ಮಹಿಳಾ ವೇದಿಕೆ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸದಲ್ಲಿ "ವಚನ ಸಾಹಿತ್ಯದ ಪ್ರಸ್ತುತತೆ " ಬಗ್ಗೆ ಅವರು ಮಾತನಾಡಿದರು.

ಜಾತಿವಿರೋಧಿ, ಪ್ರಭುತ್ವವಿರೋಧಿ, ಆರ್ಥಿಕ ಸಮಾನತೆ, ಲಿಂಗ ಸಮಾನತೆ, ಜನರಿಂದ ಜನರಿಗಾಗಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು. ಹಾಗಾಗಿ, 12ನೇ ಶತಮನಾದ ವಚನ ಸಾಹಿತ್ಯ 21ನೇ ಶತಮಾನಕ್ಕೂ ಪ್ರಸ್ತುತವಾಗಿದೆ ಎಂದರು.

ಗಾಂಧೀಜಿ ಅಂತರ್ಜಾತಿ ವಿವಾಹ ಮಾಡಿಸಲು ಹೆಣಗಾಡಬೇಕಾಯಿತು. ಆದರೆ, 12ನೇ ಶತಮಾನದಲ್ಲೇ ಅಂತರ್ಜಾತಿ ವಿವಾಹ ಮಾಡಿಸಿ, ಜಾತಿವಾದಿಗಳಿಗೆ ಬಲವಾದ ಪೆಟ್ಟುಕೊಟ್ಟಿದ್ದು ಇದೇ ಶರಣರು. ಶರಣರದು ಮುಖವಾಡ ಇಲ್ಲದ ಪ್ರಾಮಾಣಿಕ ಬದುಕು. ಹಾಗಾಗಿ ಅವರು ಒಳಿತನ್ನು ಸ್ವೀಕರಿಸಿ, ಕೆಡಕನ್ನು ತಿರಸ್ಕರಿಸಿದ್ದರು ಎಂದು ಹೇಳಿದರು.

ಬಸವಣ್ಣನವರನ್ನು ಸೀಮಿತವಾಗಿ ನೋಡುವುದು ಸಲ್ಲದು. ಅವರದು ಜಾಗತಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಚಿಂತನೆಯನ್ನು ಮೈಗೂಡಿಸಿಕೊಂಡು ನಿರ್ಗತಿಕರ ಪರವಸಿ ಹೋರಾಡಿದ್ದ ಮಹಾನ್ ಸಂತ. ಬಸವೇಶ್ವರರು ಉನ್ನತ ಕುಲದಲ್ಲಿ ಹುಟ್ಟಿದ್ದರೂ ಸಹ ಅವರು ದೀನದಲಿತರ ಹಾಗೂ ಅಸ್ಶ್ಯಶ್ಯರ ಪರವಾಗಿ ಹೋರಾಡಿದ ಅವತಾರ ಪುರುಷ ಎಂದ ಅವರು, ಭಾವಿ ಶಿಕ್ಷಕರು ವಿದ್ಯಾಥಿಗಳಿಗೆ ನೀತಿ ಹೇಳುವ ಮೊದಲು, ನೀವು ಸಹ ನೀತಿವಂತರಾಗಬೇಕು. ಆದ್ದರಿಂದ ಹೆಚ್ಚೆಚ್ಚು ವಚನ ಸಾಹಿತ್ಯವನ್ನು ಅಧ್ಯಯನ ಮಾಡುವಂತೆ ಸಲಹೆ ನೀಡಿದರು.

ಬಸವಾಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಲೋಕೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ನಾಡಿನಾಧ್ಯಂತ ಶರಣರ ಚಿಂತನೆ, ತತ್ವ, ವೈಚಾರಿಕತೆಗಳನ್ನು ಪ್ರತಿಯೊಬ್ಬರಿಗೂ ಮುಟ್ಟಿಸುವುದು ಈಗಿನ ಅವಶ್ಯಕತೆ. ಮಾನವಕುಲದ ಉಳಿವಿಗಾಗಿ ಶರಣ ಸಾಹಿತ್ಯದಲ್ಲಿ ಮದ್ದು ಇದೆ. ಶರಣ ಸಾಹಿತ್ಯ ಮನುಷ್ಯರನ್ನು ದೇವರಂತೆ ಕಾಣುತ್ತದೆ ಎಂದರು.

ತಾಲೂಕು ಅಧ್ಯಕ್ಷ ಕೆ.ಪಿ.ದೇವೆಂದ್ರಪ್ಪ ಮಾತನಾಡಿದರು. ಹಿರಿಯ ಸಾಹಿತಿ ಸಂಗನಾಳಮಠ, ಕಸಾಪ ಅಧ್ಯಕ್ಷ ಮುರಿಗೆಪ್ಪಗೌಡ, ಕದಳಿ ವೇದಿಕೆಯ ತಾಲೂಕು ಅಧ್ಯಕ್ಷೆ ಡಾ.ಪ್ರತಿಮ, ಉಪನ್ಯಾಸಕ ಗೊಲ್ಲರಹಳ್ಳಿ ಮಂಜುನಾಥ್, ಪ.ಪಂ. ಮಾಜಿ ಉಪಾಧ್ಯಕ್ಷೆ ವೀಣಾ ಸುರೇಶ್, ಷಹಜಾನ್, ಸಿದ್ದಯ್ಯ, ದತ್ತಿದಾನಿಗಳು ಉಪಸ್ಥಿತರಿದ್ದರು.

- - - -23ಎಚ್.ಎಲ್.ಐ2:

ಉಪನ್ಯಾಸ ಕಾರ್ಯಕ್ರಮವನ್ನು ಶರಣ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಕೆ.ಪಿ.ದೇವೆಂದ್ರಪ್ಪ ಉದ್ಘಾಟಿಸಿದರು.