ಜೀವನದ ಸಂಕಷ್ಟಗಳ ನಡುವೆಯೂ ಶಿವನ ಧ್ಯಾನದಲ್ಲಿ ತೊಡಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಅರ್ಚಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ

ಕನ್ನಡಪ್ರಭ ವಾರ್ತೆ ನಂಜನಗೂಡುಕಲ್ಲನ್ನೇ ದೇವರ ರೂಪಕ್ಕೆ ತಂದು ಪ್ರತಿಷ್ಠಾಪಿಸುವ ಅಪೂರ್ವ ಶಕ್ತಿ ಶಿವಾರ್ಚಕರಿಗಿದ್ದು, ಸಂಕೋಚ ಬಿಟ್ಟು ಆತ್ಮಗೌರವದಿಂದ ಸಂತೋಷದ ಜೀವನ ನಡೆಸಬೇಕು ಎಂದು ಗಾವಡಗೆರೆ ಕ್ಷೇತ್ರದ ಗುರುಲಿಂಗ ಜಂಗಮದೇವರ ಮಠಾಧ್ಯಕ್ಷ ಶ್ರೀ ನಟರಾಜ ಸ್ವಾಮೀಜಿ ಕರೆ ನೀಡಿದರು.ಪಟ್ಟಣದಲ್ಲಿ ಆಯೋಜಿಸಿದ್ದ ನಂಜನಗೂಡು ತಾಲೂಕು ಶಿವಾರ್ಚಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿ. ಬೇರೆಯವರಿಗೆ ವರವಾಗಿರುವ ಶಿವಾರ್ಚಕರು ತಮ್ಮ ಹಕ್ಕುಗಳು, ಸೌಲಭ್ಯಗಳು ಮತ್ತು ಸಂಘಟನೆಯ ಅಗತ್ಯವನ್ನು ಸರಿಯಾಗಿ ಅರಿತುಕೊಳ್ಳಬೇಕಾಗಿದೆ. ಮನುಕುಲದ ಕಲ್ಯಾಣಕ್ಕಾಗಿ ಶ್ರಮಿಸುವ ಅರ್ಚಕರು ಗುರುಗಳ ಸ್ಥಾನಕ್ಕೆ ಸಮಾನರಾಗಿದ್ದಾರೆ. ಜೀವನದ ಸಂಕಷ್ಟಗಳ ನಡುವೆಯೂ ಶಿವನ ಧ್ಯಾನದಲ್ಲಿ ತೊಡಗಿ ನಿಸ್ವಾರ್ಥ ಸೇವೆ ಸಲ್ಲಿಸುವ ಅರ್ಚಕರು ಸಮಾಜದ ಅಮೂಲ್ಯ ಆಸ್ತಿಯಾಗಿದ್ದಾರೆ ಎಂದು ಹೇಳಿದರು.ಮುಖ್ಯಅತಿಥಿಯಾಗಿ ಕರ್ನಾಟಕ ರಾಜ್ಯ ಶಿವಾರ್ಚಕ ಸಂಘದ ಅಧ್ಯಕ್ಷ ಪ್ರೊ.ಎಂ. ಮಲ್ಲಣ್ಣ ಮಾತನಾಡಿ, ಶಿವಾರ್ಚಕರ ಸೇವೆ ದೇಶದ ಗಡಿಗಳನ್ನು ಮೀರಿ ವಿಶ್ವದಾದ್ಯಂತ ವ್ಯಾಪಿಸಿದೆ ಎಂದು ತಿಳಿಸಿದರು.ಅರ್ಚಕರು ಎಂದರೆ ಕೇವಲ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರಿಗೆ ಜಾತಿ, ಮತ, ಭೇದಭಾವ ಎಂಬುದಿಲ್ಲ. ಸಮಾಜದ ಎಲ್ಲ ವರ್ಗದ ಜನರನ್ನು ಸಮಾನವಾಗಿ ಕಾಣುವುದು ಅರ್ಚಕರ ವಿಶೇಷತೆ. ರಾಷ್ಟ್ರಪತಿ, ಪ್ರಧಾನಮಂತ್ರಿ, ಮುಖ್ಯಮಂತ್ರಿ ಸೇರಿದಂತೆ ಗಣ್ಯರು ಹಾಗೂ ಸಾಮಾನ್ಯ ಜನರೆಲ್ಲರೂ ಧಾರ್ಮಿಕ ವಿಧಿವಿಧಾನಗಳನ್ನು ಅರ್ಚಕರ ಮೂಲಕವೇ ನೆರವೇರಿಸಿಕೊಳ್ಳುತ್ತಾರೆ. ಆದರೂ ಯಾಂತ್ರಿಕ ಬದುಕಿನ ಇಂದಿನ ಸಮಾಜದಲ್ಲಿ ಅರ್ಚಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಅವರಿಗೆ ಸೂಕ್ತ ಸ್ಥಾನಮಾನ ಮತ್ತು ಗೌರವ ದೊರೆಯಬೇಕಾದರೆ ಸಂಘಟನೆಯ ಅಗತ್ಯ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಮಾತನಾಡಿ, ಶಿವಾರ್ಚಕರ ಸಂಘದ ಕಚೇರಿಗಾಗಿ ನಿವೇಶನ ನೀಡುವಂತೆ ಸಲ್ಲಿಸಿರುವ ಮನವಿಯನ್ನು ಶಾಸಕರ ಗಮನಕ್ಕೆ ತಂದು, ನಿವೇಶನ ಮಂಜೂರಾತಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಭರವಸೆ ನೀಡಿದರು.ಆಧ್ಯಾತ್ಮಿಕ ಚಿಂತಕರಾದ ವಿನಯ್ ಗುರೂಜಿ, ಕಾಪೋಸ್ಟ್ ನಿಗಮದ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಪುರಸಭೆಯ ಮಾಜಿ ಅಧ್ಯಕ್ಷ ಎನ್. ನರಸಿಂಹಸ್ವಾಮಿ, ವೀರಶೈವ ಮಹಾಸಭಾದ ಅಧ್ಯಕ್ಷ ಎಸ್.ಎಂ. ಕೆಂಪಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗುರುಸ್ವಾಮಿ ಮಾತನಾಡಿ, ಶಿವಾರ್ಚಕರ ಸೇವೆ ಸ್ಮರಿಸಿದರು.ಗೌರವಾಧ್ಯಕ್ಷ ಏಚಗಳ್ಳಿ ಮಹದೇವಪ್ಪ, ಸಂಘದ ಅಧ್ಯಕ್ಷ ಮಣೆಗಾರ್, ಎಸ್.ಪಿ. ಶಿವಶಂಕರ್, ದೇಬೂರು ಚಿನ್ನಸ್ವಾಮಪ್ಪ, ಉಪಾಧ್ಯಕ್ಷ ನವೀನ್ ಕುಮಾರ್, ಕಾರ್ಯದರ್ಶಿ ಬಸವಣ್ಣ, ಪದಾಧಿಕಾರಿಗಳು, ನಿರ್ದೇಶಕರು ಇದ್ದರು.