1 ಕೋಟಿ ವೆಚ್ಚದಲ್ಲಿ ಶಿವಾಜಿ ಪುತ್ಥಳಿ ನಿರ್ಮಾಣ: ವಿನಾಯಕ

| Published : Feb 25 2025, 12:48 AM IST

1 ಕೋಟಿ ವೆಚ್ಚದಲ್ಲಿ ಶಿವಾಜಿ ಪುತ್ಥಳಿ ನಿರ್ಮಾಣ: ವಿನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ಕನ್ನಡ ಬಳಗದ ಅಧ್ಯಕ್ಷ ಡಾ.ಸಿದ್ದಗೌಡ ಕಾಗೆ ನೇತೃತ್ವದಲ್ಲಿ ಸರಕಾರದಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ದಾನ ಪಡೆದು ₹1 ಕೋಟಿ ವೆಚ್ಚದಲ್ಲಿ ಮೂರ್ತಿ ಪ್ರತಿಷ್ಠಾಪನೆ

ಕನ್ನಡಪ್ರಭ ವಾರ್ತೆ ಕಾಗವಾಡ

ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಭಾಗವಾದ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಬಹುದಿನಗಳ ಬೇಡಿಕೆಯಾದ ಛತ್ರಪತಿ ಶಿವಾಜಿ ಮಹಾರಾಜರ 11 ಅಡಿ ಎತ್ತರದ ಪುತ್ಥಳಿಯನ್ನು ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದೆಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ವಿನಾಯಕ ಬಾಗಡಿ ಹೇಳಿದರು.

ಮದಭಾವಿ ಗ್ರಾಮದಲ್ಲಿ ಶಿವಾಜಿ ಜಯಂತಿ ನಿಮಿತ್ತ ಸೋಮವಾರ ಶಿವಾಜಿ ವೃತ್ತದಲ್ಲಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಶಾಸಕರಾದ ರಾಜು ಕಾಗೆ, ಲಕ್ಷ್ಮಣ ಸವದಿ, ಕನ್ನಡ ಬಳಗದ ಅಧ್ಯಕ್ಷ ಡಾ.ಸಿದ್ದಗೌಡ ಕಾಗೆ ನೇತೃತ್ವದಲ್ಲಿ ಸರಕಾರದಿಂದ ಮತ್ತು ವಿವಿಧ ಸಂಘ ಸಂಸ್ಥೆಗಳಿಂದ ದಾನ ಪಡೆದು ₹1 ಕೋಟಿ ವೆಚ್ಚದಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಗುವುದೆಂದರು.

ಎರಡೂ ರಾಜ್ಯಗಳ ನಿಕಟ ಸಂಪರ್ಕ ಹೊಂದಿರುವ ಮದಭಾವಿ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಭಕ್ತರು ಹಾಗೂ ಅಭಿಮಾನಿಗಳಿದ್ದಾರೆ. ಈಗಾಗಲೇ ಕರ್ನಾಟಕ ಹಾಗೂ ಮಹಾರಾಷ್ಟ್ರದ ಶಾಸಕರು, ಸಚಿವರು, ಸಂಸದರನ್ನು ಭೇಟಿಯಾಗಿದ್ದು ಮೂರ್ತಿ ಪ್ರತಿಷ್ಠಾಪನೆ ಮಾಡಲು ದೇಣಿಗೆ ನೀಡಲು ಹಲವಾರು ಸಂಘಟನೆಗಳು, ಮುಖಂಡರು ಮುಂದೆ ಬಂದಿದ್ದಾರೆ. ಸದ್ಯದಲ್ಲೇ ಭೂಮಿ ಪೂಜೆ ನೆರವೇರಿಸಿ ಒಂದು ವರ್ಷದೊಳಗೆ ಮೂರ್ತಿ ನಿರ್ಮಿಸಲಾಗುವುದೆಂದರು.

ಛತ್ರಪತಿ ಶಿವಾಜಿ ಮಹಾರಾಜರು ಅಪ್ಪಟ ದೇಶ ಪ್ರೇಮಿ, ಮಹಾನ್ ಪರಾಕ್ರಮಿ ಆಗಿದ್ದರು. ಶಿವಾಜಿ ಮಹಾರಾಜರು ಈ ದೇಶ ಕಂಡ ಮಹಾನ್ ಹೋರಾಟಗಾರ, ಅವರ ಹೆಸರು ಕೇಳಿದರೆ ವೈರಿಗಳ ಎದೆ ನಡುಗುತ್ತಿತ್ತು. ಅಂಥ ವೀರರು ಈ ನೆಲದಲ್ಲಿ ಜನಿಸಿದ್ದು ಭಾಗ್ಯವಾಗಿದೆ. ಶೌರ್ಯ, ಸಾಹಸ, ಪರಾಕ್ರಮಗಳು ಆದರ್ಶವಾಗಬೇಕು. ಆರೋಗ್ಯವಂತ ಸಮರ್ಥ ದೇಶ ನಿರ್ಮಾಣವಾದಲ್ಲಿ ಶಿವಾಜಿ ಜೀವನ ಹಾಗೂ ಸಾಧನೆ ಅಜರಾಮರವಾಗಲಿದೆ. ಅದಗೋಸ್ಕರ ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಮದಭಾವಿಯಲ್ಲಿ 11 ಅಡಿ ಎತ್ತರದ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣ ಮಾಡಲು ಮುಂದಾಗಿರುವುದಾಗಿ ವಿನಾಯಕ ಬಾಗಡಿ ಹೇಳಿದರು.

ಈ ವೇಳೆ ತಾಪಂ ಮಾಜಿ ಅಧ್ಯಕ್ಷ ನಿಜಗುಣಿ ಮಗದುಮ್, ಮುಖಂಡರಾದ ಶಿವಾನಂದ ಮಗದುಮ್, ಅಶೋಕ ಪೂಜಾರಿ, ಸಂಜಯ ಅದಾಟೆ, ಕೆ.ಆರ್.ಪಾಟೀಲ, ಅಪ್ಪಾಸಾಬ ಚೌಗಲೆ, ಹಣಮಂತ ಕಾಂಬಳೆ, ಅಶೋಕ ಸೂರ್ಯವಂಶಿ, ಉದಯ ಪವಾರ, ದೀಪು ಪೂಜಾರಿ (ಖಿಳೇಗಾಂವ) ಪ್ರವೀಣ ಭಂಡಾರೆ, ಸುಖದೇವ ಬಾಗಡಿ, ಸಾಗರ ಬಾಗಡಿ, ಮಾರುತಿ ಬೋರಗಾಂವೆ, ಮನೋಹರ ಪವಾರ, ಮನೋಹರ ಪೂಜಾರಿ, ಬಾಹುಬಲಿ ಉಮದಿ, ಸುರೇಶ ಪೂಜಾರಿ, ಪಪ್ಪು ಶಿಂಧೆ, ಪರಸು ರಾಜಮಾನೆ, ಖಂಡು ಬಾಗಡಿ, ರಾಜು ಬಾಗಡಿ, ವಿಠ್ಠಲ ಅವಳೆ, ಮಾರುತಿ ಗಾಡಿವಡ್ಡರ ಸೇರಿ ಅನೇಕರು ಇದ್ದರು.

ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಶಾಸಕ ರಾಜು ಕಾಗೆಯವರ ಪ್ರಚಾರಕ್ಕಾಗಿ ಆಗಮಿಸಿದಾಗ ರಾಜು ಕಾಗೆ ಆಯ್ಕೆಯಾಗಿ ಬಂದರೆ ಶಿವಾಜಿ ಮಹಾರಾಜರ ಪುತ್ಥಳಿ ನಿರ್ಮಾಣಕ್ಕಾಗಿ ಡಾ.ಡಿ.ವೈ.ಪಾಟೀಲ ಟ್ರಸ್ಟ್‌ನಿಂದ ₹5 ಲಕ್ಷ ನೀಡಲಾಗುವುದೆಂದು ಹೇಳಿದ್ದರು. ಆ ಪ್ರಕಾರ ಇಂದು ₹5 ಲಕ್ಷ ಚೆಕ್ ನೀಡಲಾಗಿದೆ.

ಬಂಟಿ ಪಾಟೀಲ ಮಾಜಿ ಸಚಿವರು, ವಿಪ ಸದಸ್ಯರು, ಮಹಾರಾಷ್ಟ್ರ