ಹಾವೇರಿ:ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು. ಶಿವಾಜಿ ಅವರ ಜೀವನ ಚರಿತ್ರೆ, ಇತಿಹಾಸ ಅರಿತುಕೊಳ್ಳುವ ಮೂಲಕ ಅವರ ಗುಣಗಳನ್ನು ಪಾಲಿಸಿ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಹೇಳಿದರು.ಸ್ಥಳೀಯ ಶಿವಾಜಿನಗರದಲ್ಲಿರುವ ತಾಲೂಕಾ ಮರಾಠಾ ಸಮುದಾಯ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ಮರಾಠ ಸಮಾಜ ಇವರ ಸಹಯೋಗದಲ್ಲಿ ಗುರುವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜರ 399ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಕೇಳಿದರೆ ರೋಮಾಂಚನವಾಗುತ್ತದೆ. ಶಿವಾಜಿಯವರ ಜೀವನ ಸಾಧನೆ ತಾಯಂದಿರಿಗೆ ಆದರ್ಶವಾಗಬೇಕು. ಶಿವಾಜಿ ಚಿಕ್ಕಂದಿನಿಂದಲೇ ತಾಯಿ ಜೀಜಾಬಾಯಿ ಶೌರ್ಯದ ಬಗ್ಗೆ ಕಥೆ ಹೇಳುತ್ತಿದ್ದರು. ಮುಂದೆ ಸಾಮಾನ್ಯ ಮನುಷ್ಯನಾಗಿ ಬೆಳೆದು ಸೈನಿಕನಾಗಿ ದೇಶ ಕಟ್ಟುವ, ಹಿಂದೂ ಸಾಮ್ರಾಜ್ಯ ನಿರ್ಮಿಸುವ ಆದರ್ಶ ಪುರುಷನಾಗುತ್ತಾನೆ. ಮೊಘಲರು, ಆದಿಲ್‌ಶಾಹಿಗಳ ವಶದಲ್ಲಿದ್ದ ವಸಾಹತುಶಾಹಿ ಸಂಸ್ಥೆಗಳನ್ನು ಒಗ್ಗೂಡಿಸಿ ಸಾಮ್ರಾಜ್ಯ ಕಟ್ಟುವ ಜಾಗಿರದಾರರಾಗುತ್ತಾರೆ. ಅದಕ್ಕಾಗಿಯೇ ಛತ್ರಪತಿ ಶಿವಾಜಿಯವರನ್ನು ಹಿಂದೂ ರಾಷ್ಟ್ರದ ನಿರ್ಮಾತೃ ಎಂದು ಕರೆಯುತ್ತಾರೆ. ಶಿವಾಜಿ ಮಹಾರಾಜರ ಧೈರ್ಯ, ಶೌರ್ಯ, ಯಶಸ್ಸು ನಮ್ಮೆಲ್ಲರಿಗೆ ಆದರ್ಶವಾಗಬೇಕು. ಶಿವಾಜಿ ಅವರ ಗುಣಗಳನ್ನು ಪಾಲಿಸಿ, ಅನುಸರಿಸುವ ಮೂಲಕ ದೇಶ ಕಟ್ಟಲು ಶ್ರಮಿಸಬೇಕು ಎಂದರು.ಅಧ್ಯಕ್ಷತೆ ವಹಿಸಿದ್ದ ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್ ಗಾಜಿಗೌಡ್ರ ಮಾತನಾಡಿ, 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಮರಾಠ ಸಾಮ್ರಾಜ್ಯ ಸ್ಥಾಪನೆ ಮಾಡಿದ್ದರು. 16ನೇ ವಯಸ್ಸಿನಲ್ಲಿ ಮೊಘಲ್ ಮತ್ತು ಆದಿಲ್ ಶಾಹಿ ಆಡಳಿತದ ವಿರುದ್ಧ ಹೋರಾಡಿದ ಯುಗ ಪುರುಷ ಪರಾಕ್ರಮಿಯಾಗಿದ್ದಾರೆ. ಮರಾಠ ಸಮಾಜದವರು ಒಗ್ಗಟ್ಟಾಗಿ ಇರಬೇಕು. ಶಿವಾಜಿ ಜಯಂತಿ ಒಂದು ಸಮುದಾಯಕ್ಕೆ ಸೀಮಿತವಾಗಿರದೆ ಎಲ್ಲಾ ಸಮಾಜದವರು ಒಗ್ಗಟ್ಟಾಗಿ ಆಚರಿಸುವ ಅವಶ್ಯಕತೆ ಇದೆ. ಸರ್ಕಾರ ಎಲ್ಲ ಸಮಾಜದವರು ಕೂಡಿ ಮಾಡಬೇಕು ಎಂದು ಘೋಷಣೆ ಮಾಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾತಿಗೊಬ್ಬ ಜಗದ್ಗುರು, ಜಾತಿಗೊಂದು ಜಯಂತಿ ಕಾರ್ಯಕ್ರಮ ಆಗಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಈಗಾಗಲೇ ಪ್ರಾಧಿಕಾರದಿಂದ ಸಮಾಜದ ಸಮುದಾಯ ಭವನಕ್ಕೆ ಜಾಗ ನೀಡಿದ್ದು, ಹಣಕಾಸಿನ ತೊಂದರೆಯಿಂದ ಸ್ಥಗಿತಗೊಂಡಿದೆ. ಶಾಸಕರ ಜತೆಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದರು.ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ.ಮೈದೂರ ಮಾತನಾಡಿದರು. ರೇವತಿ ವಿವೇಕಾನಂದ ತಿಳವಳ್ಳಿ ಉಪನ್ಯಾಸ ನೀಡಿದರು. ನಗರಸಭೆ ಮಾಜಿ ಸದಸ್ಯೆ ಚೆನ್ನಮ್ಮ ಬ್ಯಾಡಗಿ, ಈರಪ್ಪ ಲಮಾಣಿ, ಸಮಾಜದ ಮುಖಂಡರಾದ ಉಮೇಶ ವಾಘ್, ಪ್ರಕಾಶ ಮುಂಜೋಜಿ, ನಾಗರಾಜ ಜೋರಾಪುರಿ, ರೇಖಾ ಮುಂಜೋಜಿ, ರಘುವೀರ ಚವ್ಹಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಹಿರೇಮಠ ಸೇರಿದಂತೆ ಇತರರು ಇದ್ದರು. ಮರಾಠಾ ಸಮಾಜ 36 ಉಪ ಪಂಗಡಗಳನ್ನು ಹೊಂದಿರುವ ಸಣ್ಣ ಸಮಾಜವಾಗಿದೆ. ಸಮಾಜದ ಜನತೆಗೆ ಸಭೆ ಸಮಾರಂಭ ಮಾಡಲು ಸಮುದಾಯ ಭವನದ ಅಗತ್ಯವಿದ್ದು, ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾಗ 10 ಗುಂಟೆ ಜಾಗ ಕೊಟ್ಟಿದೆ. ಆದರೆ ಜಾಗ ಖರೀದಿಯಾಗದೆ ಹಾಗೆಯೇ ಬಾಕಿ ಇದ್ದು, ಪ್ರಾಧಿಕಾರದ ಅಧ್ಯಕ್ಷರು ಖರೀದಿ ಮಾಡಿಸಿಕೊಡಬೇಕು ಎಂದು ಮರಾಠ ಸಮಾಜ ಜಿಲ್ಲಾಧ್ಯಕ್ಷ ಎಂ.ಎನ್. ವೆಂಕೋಜಿ ಹೇಳಿದರು.ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುಗೆ ಕೊಟ್ಟಿದ್ದೇವೆ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಮಾಜ ಬಾಂಧವರು ಎಲ್ಲರೂ ಒಗ್ಗಟ್ಟಾಗಿರಬೇಕು. ಶಿವಾಜಿಯವರ ಇತಿಹಾಸ ತಿಳಿದುಕೊಂಡು ಇತಿಹಾಸ ಸೃಷ್ಟಿಸಬೇಕು. ಸಮಾಜದ ಬಾಂಧವರು ಉನ್ನತ ಶಿಕ್ಷಣ ಪಡೆದುಕೊಳ್ಳಬೇಕು. ಫೆ. 28ರಂದು ಪುರಸಿದ್ದೇಶ್ವರ ದೇವಸ್ಥಾನದಿಂದ ನಗರದ ಹಲವೆಡೆ ಮೆರವಣಿಗೆ ನಡೆಯಲಿದ್ದು, ಸಮಾಜ ಬಾಂಧವರು ಪಾಲ್ಗೊಳ್ಳಬೇಕು ಎಂದು ಕ್ಷತ್ರಿಯ ಸಮಾಜ ಜಿಲ್ಲಾಧ್ಯಕ್ಷ ಶಂಕರ ಮೆಹರವಾಡೆ ಹೇಳಿದರು.
ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಯುವ ಜನತೆಗೆ ಪ್ರೇರಣೆ-ಡಾ. ನಾಗರಾಜ ಎಲ್.
ಛತ್ರಪತಿ ಶಿವಾಜಿ ಮಹಾರಾಜರ ಧೈರ್ಯ, ಸಾಹಸ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು. ಶಿವಾಜಿ ಅವರ ಜೀವನ ಚರಿತ್ರೆ, ಇತಿಹಾಸ ಅರಿತುಕೊಳ್ಳುವ ಮೂಲಕ ಅವರ ಗುಣಗಳನ್ನು ಪಾಲಿಸಿ, ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ನಾಗರಾಜ ಎಲ್. ಹೇಳಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.