ಹಾವೇರಿ:ಶಿವಾಜಿ ಮಹಾರಾಜರ ಜಯಂತ್ಯುತ್ಸವ ಪ್ರಯುಕ್ತ ಕರ್ನಾಟಕ ಕ್ಷತ್ರಿಯ ಒಕ್ಕೂಟ ಜಿಲ್ಲಾ ಘಟಕದ ನೇತೃತ್ವದಲ್ಲಿ ಶನಿವಾರ ಸಂಜೆ ನಗರದಲ್ಲಿ ಬೃಹತ್ ಮೆರವಣಿಗೆಯನ್ನು ನಡೆಸಲಾಯಿತು.ನಗರದ ಹುಕ್ಕೇರಿಮಠ ಆವರಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಸಲ್ಲಿಸಲಾಯಿತು. ಕ್ಷತ್ರಿಯ ಸಮಾಜದವರು, ಭಾವಸಾರ ಕ್ಷತ್ರಿಯ, ಮರಾಠಾ ಕ್ಷತ್ರಿಯ, ಸೋಮವಂಶ ಕ್ಷತ್ರಿಯ, ರಾಮವಂಶ ಕ್ಷತ್ರಿಯ, ರಜಪೂತ, ನಾಮದೇವ, ಕಲಾಲ, ಜೋಗಿ, ಕಿಳ್ಳಿಕ್ಯಾತರ, ಲಂಬಾಣಿ, ಗೊಂದಳಿ ಕ್ಷತ್ರಿಯ ಹೀಗೆ ಅನೇಕ ಸಮುದಾಯದ ಜನರು ಮೆರವಣಿಗೆಯಲ್ಲಿ ಹಾಜರಿದ್ದರು. ಬಳಿಕ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ಹರಸೂರ ಬಣ್ಣದಮಠದ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ, ಮೈಲಾರ ಲಿಂಗೇಶ್ವರ ದೇವಸ್ಥಾನದ ವೆಂಕಪ್ಪ ಒಡೆಯರ್ ಅವರು ಜಂಟಿಯಾಗಿ ಮೆರವಣಿಗೆಗೆ ಚಾಲನೆ ನೀಡಿದರು.
ಬಳಿಕ ಆರಂಭವಾದ ಮೆರವಣಿಗೆ ನಗರದ ಪುರಸಿದ್ದೇಶ್ವರ ದೇವಸ್ಥಾನದಿಂದ ಹೊರಟು, ಮೇಲಿನಪೇಟೆ, ಸುಭಾಸ್ ಸರ್ಕಲ್, ಪುನಃ ಮೇಲಿನಪೇಟೆ ಮಾರ್ಗವಾಗಿ ದ್ಯಾಮವ್ವನ ಗುಡಿ ಪಾದಗಟ್ಟಿ, ಎಂ.ಜಿ. ರಸ್ತೆ, ಎಂ.ಜಿ. ವೃತ್ತ, ಜೆ.ಪಿ. ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ ಮಾರ್ಗದಿಂದ ಶಿವಾಜಿನಗರದಲ್ಲಿರುವ ಮರಾಠಾ ಸಮುದಾಯ ಭವನ ತಲುಪಿತು. ಮೆರವಣಿಗೆಯಲ್ಲಿ ಮಹಾರಾಷ್ಟ್ರದ ನಾಸಿಕ್ ಡೋಲು ತಂಡ ಭಾಗವಹಿಸಿ ಗಮನ ಸೆಳೆಯಿತು. ಪುರುಷರು ಬಿಳಿ ಶರ್ಟ್, ಬಿಳಿ ಪ್ಯಾಂಟ್, ಜುಬ್ಬಾ, ಪೇಟಾ ಧರಿಸಿದ್ದರು. ಮಹಿಳೆಯರು ಸೀರೆ, ಪೇಟಾ ಧರಿಸಿ ಗಮನ ಸೆಳೆದರು.ಮೆರವಣಿಗೆಯಲ್ಲಿ ಮಾಜಿ ಶಾಸಕ ನೆಹರೂ ಓಲೇಕಾರ, ಕರ್ನಾಟಕ ಕ್ಷತ್ರಿಯ ಒಕ್ಕೂಟದ ಜಿಲ್ಲಾಧ್ಯಕ್ಷ ಶಂಕರ ಮೆಹರವಾಡೆ, ಒಕ್ಕೂಟದ ಗೌರವಾಧ್ಯಕ್ಷ ನಾಗರಾಜ ಜೋರಾಪುರಿ, ಗ್ಯಾರಂಟಿ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ ಮೈದೂರ, ಯುವ ಒಕ್ಕೂಟದ ಗೌರವಾಧ್ಯಕ್ಷ ದರ್ಶನ ಲಮಾಣಿ, ಮಹಾವೀರ ಘನಾತೆ, ಪ್ರಮೋದ ನವಲೆ, ಉದಯ ತಾಂಗಳೆ, ಭಾಗ್ಯಶ್ರೀ ಮೋರೆ, ಚಂದ್ರಶೇಖರ ಜಾಧವ, ನಾಮದೇವ ಸಿಂಪಿ, ರಮೇಶ ಮಾಳೋದೆ, ಲಕ್ಷ್ಮಣಸಿಂಗ್ ರಜಪೂತ, ಧರ್ಮರಾಜ ಕಜೂರಕರ, ದೇವರಾಜ ಗುಂಡೆ, ನಾಗೇಂದ್ರಪ್ಪ ಡಿ.ಕೆ., ವಿಶಾಲ ಸುಲಾಕೆ, ಶ್ರೀಕಾಂತ ಮಾಳದಕರ ಸೇರಿದಂತೆ ಹಿಂದೂಪರ ಸಂಘಟನೆಗಳ ಮುಖಂಡರು, ಶಿವಾಜಿ ಮಹಾರಾಜರ ಅಭಿಮಾನಿಗಳು, ಪಕ್ಷಾತೀತ ನಾಯಕರು ಭಾಗವಹಿಸಿದ್ದರು.