ಸಾರಾಂಶ
ಕುಷ್ಟಗಿ: ಪಟ್ಟಣದ ತಹಶಿಲ್ದಾರ ಕಚೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯನ್ನು ಶಿವಾಜಿ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.ಕ್ಷತ್ರಿಯ ಸಮಾಜದ ಮುಖಂಡರಾದ ಎ.ವೈ. ಲೋಕರೆ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ಹೆಸರು ಭಾರತದ ಚರಿತ್ರೆಯಲ್ಲಿ ಅಗ್ರಪಂಕ್ತಿಯಲ್ಲಿ ನಿಲ್ಲುವಂತದ್ದು. ಅಪ್ರತಿಮ ಯೋಧನಾದ ಶಿವಾಜಿ ಮಹಾರಾಜರು ಯುದ್ಧ ಭೂಮಿಯಲ್ಲಿ ಪರಾಕ್ರಮ ಪ್ರದರ್ಶಿಸಿ ಮರಾಠ ರಾಜ್ಯ ಸ್ಥಾಪಿಸಿದ ಸ್ವಾಭಿಮಾನಿ ರಾಷ್ಟ್ರ ನಿರ್ಮಾಣದ ಕನಸು ಕಂಡಿದ್ದರು. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.ರವಿಂದ್ರಸಾ ಬಾಕಳೆ ಮಾತನಾಡಿ, ಶಿವಾಜಿ ಮಹಾರಾಜರು ತಮ್ಮ ಜೀವಿತಾವಧಿಯಲ್ಲಿ ತನ್ನ ಸಾಮ್ರಾಜ್ಯವನ್ನು ಮೊಘಲರಿಂದ ಕಾಪಾಡಿಕೊಳ್ಳಲು ಅನೇಕ ವರ್ಷಗಳ ಕಾಲ ಹೋರಾಡಿದ್ದರು. ಇನ್ನು ಕೆಲವರು ಛತ್ರಪತಿ ಶಿವಾಜಿಯನ್ನು ದೇವರೆಂದೇ ಪರಿಗಣಿಸುತ್ತಾರೆ. ದಕ್ಷಿಣ ಭಾರತದಲ್ಲಿ ಇಂದಿಗೂ ಪ್ರಾಚೀನ ಹಿಂದೂ ದೇವಾಲಯಗಳು ಅಳಿಯದೇ ಉಳಿದಿದೆಯೆಂದರೆ ಅದಕ್ಕೆ ಮುಖ್ಯ ಕಾರಣ ಛತ್ರಪತಿ ಶಿವಾಜಿಯ ನ್ಯಾಯಯುತ ಆಡಳಿತವಾಗಿದೆ. ಎಲ್ಲ ಧರ್ಮಗಳಿಗೆ ಅವಕಾಶ ನೀಡಿದ್ದ ಅವರು ಹಿಂದೂ ಧರ್ಮದಲ್ಲಿ ರಾಜಿ ಮಾಡಿಕೊಂಡಿಲ್ಲ. ತಾಯಿ ಜೀಜಾಬಾಯಿ ಅಣತಿಯಂತೆ ನಡೆದುಕೊಂಡರು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ ಮುರಳೀಧರ, ಕಂದಾಯ ಇಲಾಖೆಯ ಶರಣಯ್ಯ, ಸುಂದರರಾಜ ಮರಾಠಿ, ಸಮುದಾಯದ ಮುಖಂಡರಾದ ರಮೇಶ ಕಾಪ್ಸೆ, ಬಾಬು ಘೋರ್ಪಡೆ, ರಾಮು, ಅಮೃತ ಜ್ಞಾನಮೋಠೆ, ರಮೇಶ ಓಸೇಕರ್, ನೀಲಕಂಠ ಜ್ಞಾನಮೋಠೆ, ಸುರೇಶ ಬೋಸ್ಲೆ, ಹೊನ್ನಪ್ಪ, ಶರಣಪ್ಪ ಆರೇರ್, ಧರ್ಮಣ್ಣ, ರಾಘು ಬೇಂದ್ರೆ, ಶರಣಪ್ಪ ಮೀರಜಕರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.