ನಾಳೆ ಕನ್ನಡ ಜಾಗೃತಿಗೆ ನಗರದಲ್ಲಿ ಬೃಹತ್ ಜಾಥಾ: ಕರವೇ ರಾಮೇಗೌಡ

| Published : Feb 20 2024, 01:47 AM IST

ಸಾರಾಂಶ

ಅಂಬೇಡ್ಕರ್ ವೃತ್ತದಿಂದ ಆರಂಭವಾಗುವಾಗುವ ಕನ್ನಡ ಜಾಗೃತಿಗಾಗಿ ಬೃಹತ್ ಜಾಥಾ ಶ್ರೀ ಜಯದೇವ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಅಕ್ಕ ಮಹಾದೇವಿ ರಸ್ತೆ, ಮಾಮಾಸ್ ಜಾಯಿಂಟ್‌ ರಸ್ತೆ ಮಾರ್ಗವಾಗಿ ಮೆಡಿಕಲ್ ಹಾಸ್ಟೆಲ್ ರಸ್ತೆಯಿಂದ ಆಂಜನೇಯ ಬಡಾವಣೆ ಶ್ರೀ ಆಂಜನೇಯ ದೇವಸ್ಥಾನ ತಲುಪಿ, ಅಲ್ಲಿ ಬೃಹತ್ ಜಾಥಾ ಮುಕ್ತಾಯವಾಗಲಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

ಕರ್ನಾಟಕ ರಕ್ಷಣಾ ವೇದಿಕೆಯಿಂದ ಕನ್ನಡ ಜಾಗೃತಿಗಾಗಿ ಫೆ.21ರಂದು ನಗರದಲ್ಲಿ ಬೃಹತ್ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಎಂ.ಎಸ್.ರಾಮೇಗೌಡ ತಿಳಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಬೆಳಿಗ್ಗೆ 11.30ಕ್ಕೆ ಕರವೇ ಪದಾಧಿಕಾರಿಗಳು ಹಾಗೂ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ನಿಕಟ ಪೂರ್ವ ಅಧ್ಯಕ್ಷ ಡಾ.ಎಚ್.ಎಸ್‌.ಮಂಜುನಾಥ ಕುರ್ತಿ ಸೇರಿ ಅನೇಕರು ಇಲ್ಲಿನ ಡಾ.ಅಂಬೇಡ್ಕರ್‌ ವೃತ್ತದಲ್ಲಿ ಬಾಬಾ ಸಾಹೇಬರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜಾಥಾ ಆರಂಭಿಸಲಿದ್ದಾರೆ ಎಂದರು.

ಅಂಬೇಡ್ಕರ್ ವೃತ್ತದಿಂದ ಆರಂಭವಾಗುವಾಗುವ ಕನ್ನಡ ಜಾಗೃತಿಗಾಗಿ ಬೃಹತ್ ಜಾಥಾ ಶ್ರೀ ಜಯದೇವ ವೃತ್ತ, ಹಳೆ ಪಿಬಿ ರಸ್ತೆ ಮಾರ್ಗವಾಗಿ ಅಕ್ಕ ಮಹಾದೇವಿ ರಸ್ತೆ, ಮಾಮಾಸ್ ಜಾಯಿಂಟ್‌ ರಸ್ತೆ ಮಾರ್ಗವಾಗಿ ಮೆಡಿಕಲ್ ಹಾಸ್ಟೆಲ್ ರಸ್ತೆಯಿಂದ ಆಂಜನೇಯ ಬಡಾವಣೆ ಶ್ರೀ ಆಂಜನೇಯ ದೇವಸ್ಥಾನ ತಲುಪಿ, ಅಲ್ಲಿ ಬೃಹತ್ ಜಾಥಾ ಮುಕ್ತಾಯವಾಗಲಿದೆ ಎಂದು ಹೇಳಿದರು.

ಅದೇ ಸಂಜೆ 4 ಗಂಟೆಯಿಂದ ನಗರ ವಿವಿಧ ಭಾಗಗಳಲ್ಲಿ ಶೇ.60ರಷ್ಟು ಕನ್ನಡ ಹಾಗೂ ಶೇ.40 ಭಾಗ ಇಂಗ್ಲೀಷ್ ಭಾಷೆಯನ್ನು ಹೊಂದಿರದ ಅಂಗಡಿ ಮುಗ್ಗಟ್ಟುಗಳಿಗೆ ತೆರಳಿ, ಜಾಗೃತಿ ಮೂಡಿಸಲಾಗುವುದು. ಕನ್ನಡ ಬಳಸದ ನಾಮಫಲಕಗಳಿದ್ದವರಿಗೆ ತಿಳಿ ಹೇಳುವ ಕೆಲಸ ಮಾಡಲಾಗುವುದು. ಫೆ.28ರ ಒಳಗಾಗಿ ಶೇ.60-40ರಷ್ಟು ಕನ್ನಡ-ಇತರೆ ಭಾಷೆ ನಾಮಫಲಕವಾಗಿ ಸರಿಪಡಿಸಿಕೊಳ್ಳಲು ಸರ್ಕಾರ ಸೂಚಿಸಿದ್ದನ್ನು ವಿವರಿಸುತ್ತೇವೆ ಎಂದು ತಿಳಿಸಿದರು.

ಒಂದು ವೇಳೆ ಯಾರಾದರೂ ಹಠಮಾರಿ ಧೋರಣೆ ತೋರಿದರೆ, ಅಂತಹ ಅಂಗಡಿ, ಸಂಸ್ಥೆ, ಕಂಪನಿ, ಮಾಲೀಕರು ಶೇ.60-40 ಕನ್ನಡ ಭಾಷೆ, ಇತರೆ ಭಾಷೆಗೆ ನಾಮಫಲಕ ಸರಿಪಡಿಸಿಕೊಳ್ಳದಿದ್ದರೆ ಕಳೆದ ಡಿ.27ರಂದು ಬೆಂಗಳೂರಿನ ಪ್ರತಿಭಟನೆ ಮಾದರಿಯಲ್ಲೇ ದಾವಣಗೆರೆಯಲ್ಲೂ ಮಾ.5ರಂದು ದಾವಣಗೆರೆ ಮಹಾ ನಗರ ಪಾಲಿಕೆ ಕಚೇರಿಗೆ ಬೀಗ ಜಡಿದು, ಕ್ರಾಂತಿಕಾರಿ ಹೋರಾಟ ನಡೆಸುವುದಾಗಿ ರಾಮೇಗೌಡ ಎಚ್ಚರಿಸಿದರು.

ಕರವೇ ಮುಖಂಡರಾದ ವಾಸುದೇವ ರಾಯ್ಕರ್‌, ಎಂ.ಡಿ.ರಫೀಕ್, ರವಿಕುಮಾರ, ಜಬೀವುಲ್ಲಾ ಪೈಲ್ವಾನ್‌, ಹನುಮಂತಪ್ಪ, ಆಟೋ ರಫೀಕ್ ಇತರರು ಇದ್ದರು.