ಸಾರಾಂಶ
ಡಾ.ಬಿ.ಆರ್.ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂಬುವುದು ನಮ್ಮ ಆಶಯ. ಅಂಬೇಡ್ಕರ್ ಪ್ರಕಾರ ಭಾರತ ಉಪಖಂಡದ ಬಹುಪಾಲು ಜನರು ಬೌದ್ಧ ಧರ್ಮಕ್ಕೆ ಸೇರಿದ್ದವರೇ ಆಗಿರುತ್ತಾರೆ. ಬೌದ್ಧ ಧರ್ಮ ಜಾತಿ, ಮತ, ಬೇಧವಿಲ್ಲದೇ ಸಮಾನತೆ, ಭಾತೃತ್ವವನ್ನು ಸಾರುತ್ತದೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಬಾಚನಹಳ್ಳಿ ಮಿಲಿಂದ ಬುದ್ಧ ವಿಹಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿ ಭಗವಾನ್ ಬುದ್ಧ ಪ್ರತಿಮೆಗೆ ಪುಷ್ಪಾರ್ಚನೆ ನೆರೆವೇರಿಸಿದರು.ಕನಕದಾಸರ ಕಂಚಿನ ಪ್ರತಿಮೆ ಅನಾವರಣಕ್ಕಾಗಿ ತಾಲೂಕಿನ ಮಂಚನಹಳ್ಳಿಗೆ ತೆರಳುವ ದಾರಿ ಮಧ್ಯೆ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿ ಹಾಗೂ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಸೋಮಶೇಖರ್ ಆಹ್ವಾನದ ಮೇರೆಗೆ ಮಿಲಿಂದ ಬುದ್ಧವಿಹಾರಕ್ಕೆ ಭೇಟಿ ನೀಡಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದ ನಂತರ ಬುದ್ಧವಿಹಾರ ಅಭಿವೃದ್ಧಿಗೆ ಅನುದಾನಕ್ಕೆ ನೀಡಿದ ಮನವಿ ಪತ್ರ ಸ್ವೀಕರಿಸಿದರು.
ನಂತರ ಭಾರತೀಯ ಬೌದ್ಧ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ದರ್ಶನ್ ಮಾತನಾಡಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ನಡೆಯಬೇಕು ಎಂಬುವುದು ನಮ್ಮ ಆಶಯ. ಅಂಬೇಡ್ಕರ್ ಪ್ರಕಾರ ಭಾರತ ಉಪಖಂಡದ ಬಹುಪಾಲು ಜನರು ಬೌದ್ಧ ಧರ್ಮಕ್ಕೆ ಸೇರಿದ್ದವರೇ ಆಗಿರುತ್ತಾರೆ. ಬೌದ್ಧ ಧರ್ಮ ಜಾತಿ, ಮತ, ಬೇಧವಿಲ್ಲದೇ ಸಮಾನತೆ, ಭಾತೃತ್ವವನ್ನು ಸಾರುತ್ತದೆ ಎಂದರು.ಮಹಾರಾಷ್ಟ್ರದಲ್ಲಿ 65 ಲಕ್ಷಕ್ಕೂ ಹೆಚ್ಚು ಜನ ಬೌದ್ಧ ಧರ್ಮಿಯರಿದ್ದಾರೆ. ಮುಂದಿನ 2 ವರ್ಷದಲ್ಲಿ ಕರ್ನಾಟಕದಲ್ಲಿ ಬೌದ್ಧ ಧರ್ಮಿಯರ ಸಂಖ್ಯೆ ಹೆಚ್ಚಾಗಲಿದೆ ಜೊತೆಗೆ ಉಳಿದ ರಾಜ್ಯಗಳಿಗೂ ಮಾದರಿಯಾಗಲಿದೆ ಎಂದರು.
ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ, ಭೈರತಿ ಸುರೇಶ್, ಮಾಜಿ ಸಚಿವ ಬಿ.ಸೋಮಶೇಖರ್, ಶಾಸಕ ಪಿ.ಎಂ ನರೇಂದ್ರಸ್ವಾಮಿ, ಮುಖಂಡರಾದ ಮಾರ್ಕಾಲು ನಟರಾಜು, ಮಹೇಶ್‌ಕುಮಾರ್, ರಾಮಚಂದ್ರ ಸೇರಿದಂತೆ ಇತರರು ಇದ್ದರು.