ಸಾರಾಂಶ
ಸೇವೆ ಕಾಯಂಗೊಳಿಸಬೇಕು, ಮಾಸಿಕ ₹10 ಸಾವಿರ ಗೌರವ ಧನ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಸೇವೆ ಕಾಯಂಗೊಳಿಸಬೇಕು, ಮಾಸಿಕ ₹10 ಸಾವಿರ ಗೌರವ ಧನ ನೀಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ ಗುತ್ತಿಗೆ ನೌಕರರ ಸಂಘದಿಂದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಸೋಮವಾರದಿಂದ ಅನಿರ್ಧಿಷ್ಟಾವಧಿ ಧರಣಿ ಆರಂಭಿಸಲಾಗಿದೆ.ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಎ.ಪಿ.ಜಗದೀಶ, ಸುಮಾರು 1800 ಸಿಬ್ಬಂದಿ 22 ವರ್ಷದಿಂದ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ನಮಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಸೇವೆ ಕಾಯಂ ಮಾಡಿ ಆರೋಗ್ಯ ಇಲಾಖೆಯಲ್ಲಿ ವಿಲೀನ ಮಾಡಬೇಕು. ಮಾಸಿಕ ₹10 ಸಾವಿರ ಪ್ರೋತ್ಸಾಹ ಧನ ನೀಡಬೇಕು ಎಂದು ಒತ್ತಾಯಿಸಿದರು.
ಇದು ಕೇಮದ್ರ ಸರ್ಕಾರ ಪ್ರಾಯೋಜಕತ್ವದ ಯೋಜನೆ ಎಂದು ರಾಜ್ಯ ಸರ್ಕಾರ ನಮ್ಮನ್ನು ನಿರ್ಲಕ್ಷಿಸುತ್ತಿದೆ. ಜನರ ಆರೋಗ್ಯದ ವಿಷಯದಲ್ಲಿ ತಾರತಮ್ಯ ಮಾಡದೇ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕು. ಬೇಡಿಕೆಗಳ ಬಗ್ಗೆ ಪರಿಶೀಲನೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿ ವರದಿ ಪಡೆದು ಅದನ್ನು ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳು, 31 ಜಿಲ್ಲಾ ಆಸ್ಪತ್ರೆ, ಜಿಲ್ಲಾ ಡ್ಯಾಪ್ಕೋ ಕಚೇರಿಯಲ್ಲಿ ನಾವು ರೋಗಿಗಳಿಗೆ ಎಚ್‌ಐವಿ ರಕ್ತ ಪರೀಕ್ಷೆ, ಮಾತ್ರೆ ವಿತರಣೆ ಮಾಡುತ್ತಿದ್ದು ಇದನ್ನು ಸ್ಥಗಿತಗೊಳಿಸಿ ಧರಣಿ ಆರಂಭಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತಂದರೂ ಕಡೆಗಣಿಸಲಾಗುತ್ತಿದೆ. ಆದ್ದರಿಂದ ಹೋರಾಟ ಅನಿವಾರ್ಯವಾಯಿತು ಎಂದು ಸ್ಪಷ್ಟಪಡಿಸಿದರು.