ಶಿವಾಜಿ ಜಯಂತಿ, ಭಾರೀ ಜನಸ್ತೋಮದ ಮಧ್ಯೆ ಬೃಹತ್ ಮೆರವಣಿಗೆ

| Published : Feb 20 2024, 01:47 AM IST

ಸಾರಾಂಶ

ಶಿವಾಜಿ ಜಯಂತ್ಯುತ್ಸವವನ್ನು ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದು ಪರ ಸಂಘಟನೆಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಅಷ್ಟೇ ವಿಜೃಂಭಣೆಯಿಂದ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ಗದಗ: ಅವಳಿ ನಗರದಾದ್ಯಂತ ಭರ್ಜರಿ ಡಿಜೆ ಸೌಂಡ್‌ಗೆ ಹುಚ್ಚೆದ್ದು ಕುಣಿಯುತ್ತಿರುವ ಯುವಕರು, ಎಲ್ಲಿ ನೋಡಿದರಲ್ಲಿ ಜೈ ಭವಾನಿ, ಜೈ ಶಿವಾಜಿ, ಜೈ ಶ್ರೀ ರಾಮ್ ಘೋಷಣೆಗಳ ಸುರಿಮಳೆ, ಕೇಸರಿ ಬಣ್ಣದಲ್ಲಿ ಮಿಂದೆದ್ದು ಸಂಭ್ರಮಿಸಿದ ಯುವಕರು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವವನ್ನು ಶ್ರೀರಾಮ ಸೇನೆ ಹಾಗೂ ವಿವಿಧ ಹಿಂದು ಪರ ಸಂಘಟನೆಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಕಳೆದ 8 ವರ್ಷಗಳಿಂದ ಅತ್ಯಂತ ಅದ್ಧೂರಿಯಾಗಿ ಸಂಭ್ರಮ ಸಡಗರದಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಈ ವರ್ಷವೂ ಶಿವಾಜಿ ಜಯಂತಿಯನ್ನು ಅಷ್ಟೇ ವಿಜೃಂಭಣೆಯಿಂದ ಸಾವಿರಾರು ಸಂಖ್ಯೆಯ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮೆರವಣಿಗೆ ನಡೆಯಿತು.

ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವದ ಅಧ್ಯಕ್ಷ ಜಗದೀಶ ಎಸ್.ಪಿ. ಅಧ್ಯಕ್ಷತೆಯಲ್ಲಿ ನಗರದ ರಾಚೋಟೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಜುಮ್ಮಾ ಮಸೀದಿ, ಪಂಚರ್‌ ಹೊಂಡ, ಬಸವೇಶ್ವರ ಸರ್ಕಲ್, ಹುಯಿಲಗೋಳ ನಾರಾಯಣರಾವ್ ವೃತ್ತ, ಮಹೇಂದ್ರಕರ್ ಸರ್ಕಲ್, ತೋಂಟದಾರ್ಯ ಆಟೋ ನಿಲ್ದಾಣ, ಗಾಂಧಿ ಸರ್ಕಲ್ ಮಾರ್ಗವಾಗಿ ನಗರಸಭೆಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಂಪನ್ನಗೊಂಡಿತು.ಮೆರವಣಿಗೆಯುದ್ಧಕ್ಕೂ ಯುವಕರು ಡಿಜೆ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿದರು. ಮೆರವಣಿಗೆ ಕಾರ್ಯಕ್ರಮದಲ್ಲಿ ಸುಮಾರು 25,000ಕ್ಕೂ ಹೆಚ್ಚು ಹಿಂದು ಕಾರ್ಯಕರ್ತರು ಹಾಗೂ ಶ್ರೀರಾಮ ಭಕ್ತರು ಭಾಗವಹಿಸಿದ್ದರು. ಇದೇ ವೇಳೆ 21 ಅಡಿ ಎತ್ತರದ ಶ್ರೀ ರಾಮನ ಮೂರ್ತಿ, ಶಿವಾಜಿ ಮೂರ್ತಿ, ವಾಲ್ಮೀಕಿ ಮಹರ್ಷಿಗಳ ಮೂರ್ತಿ ಸೇರಿದಂತೆ ಹಲವು ಮಹಾ ಪುರುಷರ ಮೆರವಣಿಗೆ ನಡೆಯಿತು.