ಸ್ವರಾಜ್ಯ ಸ್ಥಾಪಿಸಿದ ಅಪ್ರತಿಮ ಶೂರ ಶಿವಾಜಿ ಮಹಾರಾಜರು: ಜಮಾದಾರ

| Published : Feb 20 2024, 01:47 AM IST

ಸ್ವರಾಜ್ಯ ಸ್ಥಾಪಿಸಿದ ಅಪ್ರತಿಮ ಶೂರ ಶಿವಾಜಿ ಮಹಾರಾಜರು: ಜಮಾದಾರ
Share this Article
  • FB
  • TW
  • Linkdin
  • Email

ಸಾರಾಂಶ

ಪರಕೀಯರ ಆಡಳಿತ ಕಿತ್ತೊಗೆದು ಸ್ವರಾಜ್‌ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರಪ್ರೇಮಿ, ನ್ಯಾಯವಂತ, ಜವಾಬ್ದಾರಿಯುತ, ದಕ್ಷ ಆಡಳಿತಗಾರರಾಗಿದ್ದರು ಎಂದು ಹುಲಕೋಟಿ ಸಹಕಾರ ರೇಡಿಯೋ ನಿಲಯ ನಿರ್ದೇಶಕ ಜೆ.ಕೆ. ಜಮಾದಾರ ಹೇಳಿದರು.

ಗದಗ: ಪರಕೀಯರ ಆಡಳಿತ ಕಿತ್ತೊಗೆದು ಸ್ವರಾಜ್‌ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರಪ್ರೇಮಿ, ನ್ಯಾಯವಂತ, ಜವಾಬ್ದಾರಿಯುತ, ದಕ್ಷ ಆಡಳಿತಗಾರರಾಗಿದ್ದರು ಎಂದು ಹುಲಕೋಟಿ ಸಹಕಾರ ರೇಡಿಯೋ ನಿಲಯ ನಿರ್ದೇಶಕ ಜೆ.ಕೆ. ಜಮಾದಾರ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಮಾತನಾಡಿದರು.

ಶಿವಾಜಿಯವರು ಕ್ರಿ.ಶ ೧೬೩೦ರಲ್ಲಿ ಜನಿಸಿದರು. ತಂದೆ ಷಹಾಜಿರಾಜಿ ಭೋಸ್ಲೆ, ತಾಯಿ ಜೀಜಾಬಾಯಿ, ಶಿವಾಜಿಯ ತಾಯಿ ವೀರಮಾತೆ ಜೀಜಾಬಾಯಿಯು ಶಿವಾಜಿಗೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳನ್ನು ಹೇಳುತ್ತ ಜೀವನ ಮೌಲ್ಯಗಳ ಶಿಕ್ಷಣವನ್ನಿತ್ತಳು. ಇವರ ಗುರು ದಾದಾಜಿ ಕೊಂಡದೇವ ಶಸ್ತ್ರಾಸ್ತ್ರ ವಿದ್ಯೆಕಲಿಸಿ ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಹಿಂದು ಧರ್ಮ ಪುನರುಜ್ಜೀವನಗೊಳಿಸಬೇಕು. ಹೈಂಧವೀ ಸ್ವರಾಜ್ಯಕಟ್ಟಬೇಕೆಂಬ ಆಕಾಂಕ್ಷೆಯಿಂದ ಮರಾಠಾ ಮುಖಂಡರನ್ನು ಮತ್ತು ಪಶ್ಚಿಮ ಘಟ್ಟಗಳ ಮಾವಳರೆಂಬ ದೃಢಕಾಯದ ಗಿರಿ ಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದರು. ಶಿವಾಜಿಯು ಸಂತ ರಾಮದಾಸರ ಪರಮ ಭಕ್ತನಾಗಿದ್ದನು. ಹಿಂದು ಧರ್ಮಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರ. ಸ್ವಾಭಿಮಾನಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು. ದಕ್ಷ ಆಡಳಿತಗಾರರಿಗೆ ಎಂದೆಂದಿಗೂ ಪ್ರೇರಣಾದಾಯಕರಾದವರು ಎಂದರು.

ಶಿವಾಜಿ ಮಹಾರಾಜರು ಚಾಣಾಕ್ಷತೆಯಿಂದ ಅಫಜಲಖಾನ್ ಹಾಗೂ ಶಯಿಸ್ತಾಖಾನ್‌ನೊಂದಿಗೆ ಹೋರಾಡಿದ ಬಗೆ ಹಾಗೂ ಮೊಘಲರ ವಶದಲ್ಲಿರುವ ಸಿಂಹಗಡ, ತೋರಣಗಡ ಹೀಗೆ ಹಲವಾರು ಕೋಟೆಗಳನ್ನು ವಶಪಡಿಸಿಕೊಂಡು ಸ್ವರಾಜ್ಯ ಸ್ಥಾಪಿಸಿದ ಕುರಿತು ವಿವರಿಸಿದರು.

ವಕೀಲ ಸುಧೀರ ಘೋರ್ಪಡೆ ಪ್ರಾಸ್ತಾವಿಕವಾಗಿ ಮಾತನಾಡಿ, ಶಿವಾಜಿ ಮಹಾರಾಜರು ದೇಶಪ್ರೇಮವನ್ನು ಬಡಿದೆಬ್ಬಿಸಿದ ಸ್ವರಾಜ್ಯ ಸ್ಥಾಪಿಸಿದ ಮೇಧಾವಿ. ಪರಕೀಯರ ಆಳ್ವಿಕೆಯಿಂದ ಸ್ವರಾಜ್ಯ ಸ್ಥಾಪಿಸಿದ ಶೂರ ಎಂದು ವಿವರಿಸಿದರು.

ಮರಾಠಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ವಿನಿತಕುಮಾರ ಜಗತಾಪ ಮಾತನಾಡಿ, ಶಿವಾಜಿ ಮಹಾರಾಜರು ದೇಶಭಕ್ತರಾಗಿ, ರಾಷ್ಟ್ರ ಪ್ರೇಮಿಯಾಗಿ, ದಕ್ಷ ಆಡಳಿತಗಾರನಾಗಿ ಬೆಳೆಯುವಲ್ಲಿ ಅವರ ತಾಯಿಯಾದ ಜೀಜಾಬಾಯಿಯವರ ಪಾತ್ರ ಮಹತ್ವದ್ದು. ಜೀಜಾಬಾಯಿಯಂತೆ ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳನ್ನೂ ದೇಶ ಭಕ್ತರನ್ನಾಗಿ ಬೆಳೆಸಬೇಕು ಎಂದರು.

ಈ ವೇಳೆ ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್., ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಜಿಲ್ಲಾ ಕ್ಷತ್ರಿಯ ಮಹಾಸಭಾ ಅಧ್ಯಕ್ಷ ಶ್ರೀಕಾಂತ ಖಟವಟೆ, ರಾಜಮಾತಾ ಜೀಜಾಬಾಯಿ ಮಹಿಳಾ ಮಂಡಳದ ಅಧ್ಯಕ್ಷೆ ಶೃತಿ ಗ್ವಾರಿ, ಸಮಾಜದ ಗಣ್ಯರಾದ ಮೋಹನ್‌ರಾವ್ ಗ್ವಾರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ. ಸೇರಿದಂತೆ ಸಮುದಾಯದ ಮುಖಂಡರು, ಹಿರಿಯರು ಇದ್ದರು. ಮಂಜರಿ ಹೊಂಬಾಳಿ ನಿರೂಪಿಸಿ, ವಂದಿಸಿದರು.