ಸಾರಾಂಶ
- ವರ್ಣರಂಜಿತ ಕಾರಂಜಿಯಿಂದ ಜನಮನ ಸೆಳೆದಿದ್ದ ಪ್ರತಿಷ್ಠಿತ ಟಿ.ಶೀನಪ್ಪ ಶೆಟ್ಟಿ ವೃತ್ತ - ವೃತ್ತದಲ್ಲಿ ಗೋಪಿ ಹೋಟೆಲ್‌ನಿಂದಾಗಿ ಜನಮನದಿಂದ ಈಗ ಮರೆಯಾಗಿರುವ ವೃತ್ತ- - - ಗೋಪಾಲ್ ಯಡಗೆರೆ
ಕನ್ನಡಪ್ರಭ ವಾರ್ತೆ ಶಿವಮೊಗ್ಗನಗರಗಳು ಬೆಳೆದಂತೆಲ್ಲಾ ರಸ್ತೆಗಳು, ರಸ್ತೆಗಳು ಸೇರುವ ವೃತ್ತಗಳು ವಿಶಾಲವಾಗುತ್ತಾ, ಜೊತೆಗೆ ಸಂಖ್ಯೆಯಲ್ಲಿ ಕೂಡ ಹೆಚ್ಚಾಗುತ್ತಿರುತ್ತದೆ. ಇಂತಹ ರಸ್ತೆ ಮತ್ತು ವೃತ್ತಗಳಿಗೆ ಮಹನೀಯರ ಹೆಸರನ್ನು ಇಡುವ ಮೂಲಕ ಗೌರವ ಸಲ್ಲಿಸುವ ಕೆಲಸಗಳು ಕೂಡ ಆಗಿಂದ್ದಾಗ್ಗೆ ಆಡಳಿತ ವ್ಯವಸ್ಥೆಗಳು ಮಾಡುತ್ತಿರುತ್ತವೆ. ಆದರೆ ಹಲವು ದಶಕಗಳ ಕಾಲದ ಹಿಂದೆಯೇ ಶಿವಮೊಗ್ಗ ನಗರದಲ್ಲಿ ಹೀಗೆ ಇಟ್ಟ ಹೆಸರೊಂದು ಕಾಲಾಂತರದಲ್ಲಿ ಬದಲಾಗಿಹೋಗಿದೆ. ಈ ಕುರಿತು ಇದೀಗ ಚರ್ಚೆ ಆರಂಭಗೊಂಡಿದೆ. ಮೂಲ ಹೆಸರು ಮತ್ತು ಆಗಿನ ಕಾಲದ ಮಹನೀಯರ ಹೆಸರು ಬದಲಾಗಬಾರದು ಎಂಬ ಸದ್ದಿಲ್ಲದ ಅಭಿಯಾನವೊಂದು ಆರಂಭಗೊಂಡಿದೆ. ನಗರದ ಹೃದಯ ಭಾಗದಲ್ಲಿರುವ ಶೀನಪ್ಪ ಶೆಟ್ಟಿ ವೃತ್ತದ ಹೆಸರನ್ನು ಮರುಸ್ಥಾಪಿಸುವ ಅಥವಾ ಬಳಕೆಗೆ ತರುವ ಜಾಗೃತಿ ಅಭಿಯಾನ ಇದಾಗಿದೆ. ಸುಮಾರು 46 ವರ್ಷಗಳ ಹಿಂದೆಯೇ ನಗರದಲ್ಲಿ ನಿರ್ಮಾಣವಾದ ಪ್ರಥಮ ವೃತ್ತ ಇದಾಗಿದೆ. ಟಿ.ಶೀನಪ್ಪ ಶೆಟ್ಟಿ ಹೆಸರಿನ ಈ ವೃತ್ತಕ್ಕೆ ಆ ಕಾಲದಲ್ಲಿ ಅದರದೇ ಆದ ಗತ್ತು, ಗೈರತ್ತು ಇತ್ತು. ಅದೊಂದು ಆಕರ್ಷಕ ಕೇಂದ್ರವಾಗಿಯೂ ಇತ್ತು. ಆದರೆ, ಆಗ ಅಲ್ಲೊಂದು ಆರಂಭಗೊಂಡ ಹೋಟೆಲ್ ಈ ಹೆಸರನ್ನು ನುಂಗಿ ನೀರು ಕುಡಿದಿದ್ದು, ಇದರಲ್ಲಿ ಆ ಹೋಟೆಲ್‌ನವರ ತಪ್ಪಿಲ್ಲದೇ ಇದ್ದರೂ, ಜನರ ಬಾಯಿಂದ ಬಾಯಿಗೆ ಹರಿದ ಹೋಟೆಲ್‌ನ ಜನಪ್ರಿಯತೆಯ ಹೆಸರೇ ಹೆಸರಾಂತ ದಾನಿಗಳೂ, ವೃತ್ತ ನಿರ್ಮಾಣಕ್ಕೆ ಕಾರಣರಾದವರ ಹೆಸರು ಜನಮಾನಸದಿಂದ ಮರೆಯಾಗುವಂತೆ ಮಾಡಿದೆ. ಎಲ್ಲ ದಾಖಲೆಗಳಲ್ಲಿಯೂ ಟಿ.ಶೀನಪ್ಪ ಶೆಟ್ಟಿ ವೃತ್ತ ಎಂಬ ಹೆಸರೇ ಇದ್ದರೂ, ಜನರ ಬಾಯಲ್ಲಿ ಮಾತ್ರ ಇದು ಇಂದಿಗೂ ಗೋಪಿ ವೃತ್ತವಾಗಿದೆ. ಹೀಗಾಗಿ, ಮಹಾನ್ ದಾನಿಗಳು, ನಗರದ ಸಾಂಸ್ಕೃತಿಕ ವಲಯಕ್ಕೆ ದಶಕಗಳ ಹಿಂದೆಯೇ ನೀಡಿದ ಕೊಡುಗೆಯನ್ನು ಸ್ಮರಿಸುವ ಕೆಲಸಕ್ಕೆ ಧಕ್ಕೆಯಾಗಿದೆ.
ವೃತ್ತ ಹಿಂದಿನ ಇತಿಹಾಸ:ಆರು ದಶಕಗಳ ಹಿಂದೆ ಪೋಸ್ಟ್ ಆಫೀಸ್ ವೃತ್ತ ಎಂದೇ ಹೆಸರನ್ನು ಹೊಂದಿದ್ದ ಈ ವೃತ್ತವನ್ನು ವಿಸ್ತರಿಸುವ ಕಾಲಕ್ಕೆ ಅಂದರೆ 1956ರಲ್ಲಿ ನಗರದ ಹೆಸರಾಂತ ದಾನಿಗಳೂ, ಸಾಂಸ್ಕೃತಿಕವಾಗಿ ನಗರಕ್ಕೆ ಹಲವು ಕೊಡುಗೆಗಳನ್ನು ನೀಡಿದವರಲ್ಲಿ ಉದ್ಯಮ ಕುಟುಂಬದ ಟಿ.ಶೀನಪ್ಪ ಶೆಟ್ಟಿ ಅಗ್ರಗಣ್ಯರು. ಅವರ ನಿಧನದ ಬಳಿಕ ಅವರ ಸೋದರರು ತಮ್ಮ ಹಿರಿಯ ಸೋದರನ ನೆನಪಿನಲ್ಲಿ ಇಲ್ಲಿ ಆಗಿನ ಕಾಲದಲ್ಲಿಯೇ ಸುಮಾರು ₹25 ಸಾವಿರ ವೆಚ್ಚ ಮಾಡಿ ವೃತ್ತವೊಂದನ್ನು ನಿರ್ಮಿಸಿ ಸಮಾಜಕ್ಕೆ ಅರ್ಪಿಸಿದ್ದರು. ಇದಕ್ಕೆ ಟಿ.ಶೀನಪ್ಪ ಶೆಟ್ಟಿ ವೃತ್ತ ಎಂದು ನಾಮಕರಣವಾಗಿತ್ತು. ಸುತ್ತಲೂ ಕಲ್ಲನ್ನು ವೃತ್ತಾಕಾರದಲ್ಲಿ ಬಳಸಿ ನಿರ್ಮಿಸಿದ ಆಕರ್ಷಕ ವೃತ್ತ ಇದಾಗಿತ್ತು. ಟಿ.ಸೀನಪ್ಪ ಶೆಟ್ಟಿ ಅವರ ಇನ್ನೊಬ್ಬ ಸಹೋದರ ಟಿ. ರಾಮಸ್ವಾಮಿ ಶೆಟ್ಟಿ ಅವರು 1958ರಲ್ಲಿ ಆಕಸ್ಮಿಕವಾಗಿ ಅಪಘಾತದಲ್ಲಿ ತೀರಿಕೊಂಡಾಗ ಅವರ ನೆನಪಿನಲ್ಲಿ, ಉಳಿದ ಸೋದರರು 1959 ರಲ್ಲಿ ಪುನಃ ₹20,000 ಖರ್ಚು ಮಾಡಿ ನಗರದಲ್ಲಿ ಮೊಟ್ಟಮೊದಲ ಬಾರಿಗೆ ಈ ವೃತ್ತದಲ್ಲಿ ಅವರ ಹೆಸರಲ್ಲಿ ನಾಮಫಲಕದೊಂದಿಗೆ ನೀರಿನ ಕಾರಂಜಿ (ಫೌಂಟೇನ್) ನಿರ್ಮಿಸಿದ್ದರು. ಇದು ಮಲೆನಾಡು ಭಾಗದ ಮೊದಲ ನೀರಿನ ಕಾರಂಜಿ ಎಂಬುದು ವಿಶೇಷ. ಇದು ಆ ಕಾಲದಲ್ಲಿಯೇ ವರ್ಣರಂಜಿತವಾದ ವಿದ್ಯುತ್ ದೀಪಗಳಿಂದ ಅಲಂಕೃತವಾಗಿದ್ದು, ಆಕರ್ಷಕ ಸ್ಥಳವಾಗಿತ್ತು. ಸುತ್ತಲೂ ಕಟ್ಟೆ ಕಟ್ಟಲಾಗಿದ್ದು, ಸಂಜೆ ಹೊತ್ತು ವಿಹಾರದ ತಾಣದಂತೆ ಬಳಕೆಯಾಗುತ್ತಿತ್ತು.
ಇತಿಹಾಸವಾದ ಕಾರಂಜಿ:ಮುಂದಿನ ದಶಕಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾದಾಗ ಈ ಕಾರಂಜಿಯನ್ನು ಅನಿವಾರ್ಯವಾಗಿ ನಗರಸಭೆ ಆವರಣಕ್ಕೆ ನಾಮಫಲಕದ ಸಮೇತ ಸ್ಥಳಾಂತರಿಸಲಾಗಿತ್ತು. ಮುಂದೆ ಈ ಕಾರಂಜಿ ಹಳತಾಗಿದ್ದರಿಂದ ಹಾಗೂ ಈ ಕಾರಂಜಿ ಇದ್ದ ಜಾಗದಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸಬೇಕಾದ್ದರಿಂದ ಪಾಲಿಕೆಯವರು ಕಾರಂಜಿಯನ್ನು ತೆರವುಗೊಳಿಸುವ ಮೂಲಕ ನಗರದ ಮೊದಲ ಕಾರಂಜಿಯನ್ನು ಇತಿಹಾಸದ ಪುಟಕ್ಕೆ ಸೇರಿಸಿದರು.
ಗೋಪಿ ವೃತ್ತ ಆಗಿದ್ಹೇಗೆ?:ಈ ಟಿ. ಶೀನಪ್ಪ ಶೆಟ್ಟಿ ವೃತ್ತದಲ್ಲಿ ಆಗಿನ ಕಾಲದಲ್ಲಿ ಮಾಳೂರು ರಾಮಸ್ವಾಮಿ ಅವರು ಗೋಪಿ ಹೋಟೆಲ್ ಹೆಸರಿನಲ್ಲಿ ಹೋಟೆಲ್ ಉದ್ಯಮ ಆರಂಭಿಸಿದರು. ಕಾಲ ಕಳೆದಂತೆ ಜನರು ಟಿ.ಶೀನಪ್ಪ ಶೆಟ್ಟಿ ಪದ ಬಳಕೆ ಬದಲು ತಮಗೆ ಗೊತ್ತಿಲ್ಲದಂತೆ, ಈ ವೃತ್ತವನ್ನು ಗೋಪಿ ವೃತ್ತ ಪದಬಳಕೆಯಿಂದ ಕರೆಯತೊಡಗಿದರು. ಟಿ. ಶೀನಪ್ಪ ಶೆಟ್ಟಿ ವೃತ್ತಕ್ಕೂ, ಗೋಪಿ ಹೋಟೆಲ್‌ಗೂ ಯಾವುದೇ ಸಂಬಂಧವಿಲ್ಲದಿದ್ದರೂ ವೃತ್ತಕ್ಕೆ ಗೋಪಿವೃತ್ತ ಎಂಬ ಹೆಸರೇ ಉಳಿಯಿತು. ಇದರಿಂದಾಗಿ ನಗರದ ಪ್ರಥಮ ವೃತ್ತ ಎನಿಸಿದ್ದ ವೃತ್ತಕ್ಕೆ ದೊಡ್ಡ ಕೊಡುಗೆ ನೀಡಿದ್ದ ಟಿ.ಶೀನಪ್ಪ ಶೆಟ್ಟಿ ಅವರ ಹೆಸರು ಮರೆಯಾಯಿತು. ಈ ಐತಿಹಾಸಿಕ ತಪ್ಪನ್ನು ಸರಿಪಡಿಸಬೇಕು ಎಂಬ ಆಂದೋಲನ ಈಗ ಶಿವಮೊಗ್ಗದಲ್ಲಿ ಆರಂಭಗೊಂಡಿದೆ.
- - - ಕೋಟ್ ಈ ವೃತ್ತ ನಗರದ ಇತಿಹಾಸದ ಕತೆ ಹೇಳುವ ಸ್ಥಳ. ಇದಕ್ಕೆ ಕೊಡುಗೆ ನೀಡಿದ ಮಹನೀಯರನ್ನು ಮರೆಯುವುದು ಸರಿಯಲ್ಲ. ಹೀಗಾಗಿ, ಎಲ್ಲ ಸಂಘ ಸಂಸ್ಥೆಗಳೂ, ಮಾಧ್ಯಮವದರೂ ಈ ವೃತ್ತದ ಹೆಸರನ್ನು ಅದರ ಮೂಲ ಹೆಸರಿನಲ್ಲಿಯೇ ಬಳಕೆ ಮಾಡಬೇಕು. ಈ ಕೊಡುಗೆಯಲ್ಲಿ ಆಟೋ ಚಾಲಕರು ಮತ್ತಿತರರು ಕೂಡ ಕೈ ಜೋಡಿಸಬೇಕು- ಎಚ್. ಖಂಡೋಬರಾವ್, ಇತಿಹಾಸ ಸಂಶೋಧಕ
- - -ಬಾಕ್ಸ್ ಸಮಾಜ ಸೇವೆಗೆ ನಿಂತ ಶೆಟ್ಟಿ ಕುಟುಂಬಈ ವೃತ್ತದಲ್ಲಿ ಟಿ. ಶೀನಪ್ಪ ಶೆಟ್ಟಿ ಕುಟುಂಬದ ಮುಂದಿನ ತಲೆಮಾರು ಕೂಡ ಶ್ರೀನಿಧಿ ಸಿಲ್ಕ್ಸ್ ಎಂಡ್ ಟೆಕ್ಸ್‌ಟೈಲ್ಸ್ ಹೆಸರಿನಲ್ಲಿ ಉದ್ಯಮ ಮುಂದುವರಿಸಿದ್ದಾರೆ. ಟಿ.ಆರ್. ಅಶ್ವತ್ಥನಾರಾಯಣ ಶೆಟ್ಟಿ, ಟಿ.ಆರ್. ವೆಂಕಟೇಶಮೂರ್ತಿ ಮತ್ತವರ ಮಕ್ಕಳು ಉದ್ಯಮದ ಜೊತೆಗೆ ಸಮಾಜ ಸೇವೆಯಲ್ಲಿ ನಿರತರಾಗಿದ್ದಾರೆ. ತಮ್ಮ ಕುಟುಂಬದ ದಾನಿಯೂ, ಸಾಂಸ್ಕೃತಿಕ ಕೊಡುಗೆಗಾರರೂ ಆದ ಟಿ.ಶೀನಪ್ಪ ಶೆಟ್ಟಿ ಹೆಸರಿನ ವೃತ್ತವನ್ನು ಅದೇ ಹೆಸರಿನಲ್ಲಿ ಉಳಿಸಬೇಕೆಂದು ಇನ್ನಿಲ್ಲದ ಪ್ರಯತ್ನ ಮುಂದುವರಿಸಿದ್ದಾರೆ.
- - - -19ಕೆಪಿ ಎಸ್ಎಂಜಿ11:1956ರಲ್ಲಿ ಲೋಕಾರ್ಪಣೆಗೊಂಡ ಶಿವಮೊಗ್ಗ ನಗರದ ಆಗಿನ ಟಿ.ಶೀನಪ್ಪ ಶೆಟ್ಟಿ ಹೆಸರಿನ ವೃತ್ತದ ಚಿತ್ರಣ.
- - --19ಕೆಪಿಎಸ್ಎಂಜಿ12:
1956ರಲ್ಲಿ ಶಿವಮೊಗ್ಗ ನಗರದ ಆಗಿನ ಪ್ರಮುಖ ವೃತ್ತಕ್ಕೆ ಟಿ.ಶೀನಪ್ಪ ಶೆಟ್ಟಿ ಹೆಸರಿನಲ್ಲಿ ನಿರ್ಮಿಸಲಾದ ವೃತ್ತದ ಲೋಕಾರ್ಪಣೆ ಸಮಾರಂಭ.