ಶಿವಾಜಿ ಮಹಾರಾಜರ ದೇಶಭಕ್ತಿ ಯುವ ಪೀಳಿಗೆಗೆ ಮಾದರಿ

| Published : Feb 20 2025, 12:45 AM IST

ಸಾರಾಂಶ

ಕಾರವಾರ ನಗರಸಭೆ ಉದ್ಯಾನದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜ ಪುತ್ಥಳಿಗೆ ಹಾಗೂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಕಾರವಾರ: ರಾಷ್ಟ್ರವನ್ನು ಪರಕೀಯರ ಆಡಳಿತದಿಂದ ಮುಕ್ತಿಗೊಳಸಿ ರಕ್ಷಿಸುವಲ್ಲಿ ಶಿವಾಜಿ ಮಹಾರಾಜರ ಕೊಡುಗೆ ಆಪಾರವಾಗಿದೆ. ಶಿವಾಜಿ ಅವರ ರಾಷ್ಟ್ರ ಮನೋಭಾವ, ದೇಶಪ್ರೇಮ ಇಂದಿನ ಯುವಪೀಳಿಗೆಗೆ ಮಾದರಿಯಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಸಾಜೀದ್ ಮುಲ್ಲಾ ಹೇಳಿದರು.

ಇಲ್ಲಿನ ನಗರಸಭೆ ಉದ್ಯಾನದಲ್ಲಿ ಜಿಲ್ಲಾಡಳಿತ, ಜಿಪಂ, ನಗರ ಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಬುಧವಾರ ನಡೆದ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಹಿನ್ನೆಲೆಯಲ್ಲಿ ಶಿವಾಜಿ ಮಹಾರಾಜ ಪುತ್ಥಳಿಗೆ ಹಾಗೂ ಭಾವಚಿತ್ರಕ್ಕೆ ಪೂಜೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಶಿವಾಜಿ ಮಹಾರಾಜರು ಯಾವುದೇ ಧರ್ಮ, ಜಾತಿ, ಸಮಾಜಕ್ಕೆ ಸಿಮೀತಗೊಳದೇ , ಪರಕೀಯರ ಆಳ್ವಿಕೆಯ ಸಂದರ್ಭದಲ್ಲಿ ಸ್ವತಂತ್ರ ದೇಶವಾಗಿಸಲು ದೇಶ ಉದ್ದಗಲಕ್ಕೂ ಓಡಾಡಿ, ಎಲ್ಲರನ್ನು ಒಗ್ಗೂಡಿಸಿ ಸೇನೆ ಕಟ್ಟಿದರು. ಪ್ರಜೆಗಳಲ್ಲಿ ದೇಶದ ಏಕತೆ, ಸಮಾನತೆ, ದೇಶಭಕ್ತಿಯ ಬಗ್ಗೆ ಅರಿವು ಮೂಡಿಸಿ, ಪರಕೀಯರ ವಿರುದ್ಧ ಹೋರಾಡಿದ ಫಲವಾಗಿ ನಮ್ಮ ದೇಶ ಅಖಂಡವಾಗಿ ನಿಮಾರ್ಣಗೊಂಡಿದ್ದು, ಅವರನ್ನು ರಾಷ್ಟ್ರೀಯ ನಾಯಕ ಎಂದು ಕರೆಯಲಾಗುತ್ತದೆ ಎಂದರು.

ಭಾರತಿಯ ನೌಕಾಪಡೆ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದವರೇ ಶಿವಾಜಿ ಮಹಾರಾಜರಾಗಿದ್ದಾರೆ. ಅವರ ಆಸ್ಥಾನದಲ್ಲಿ ಯಾವುದೇ ಜಾತಿ, ಧರ್ಮ, ಭೇದ-ಭಾವವಿಲ್ಲದೇ ದೀನ-ದಲಿತರಿಗೂ ಆಶ್ರಯ ನೀಡುತ್ತಿದ್ದರು ಎಂದರು.

ನಗರಸಭೆ ಅಧ್ಯಕ್ಷ ರವಿರಾಜ ಅಂಕೋಲೇಕರ ಮಾತನಾಡಿ, ಜೀಜಾಬಾಯಿ ಅವರ ಪ್ರೇರಣೆಯಿಂದ ಶಿವಾಜಿ ಮಹಾರಾಜರು ದೇಶಭಕ್ತಿ ಮೈಗೂಡಿಸಿಕೊಂಡರು. ಸ್ವರಾಜ್ಯ ಕಟ್ಟುವುದೇ ಅವರ ಗುರಿಯಾಗಿತ್ತು. ಅವರ ಯುದ್ಧಕಲೆಯನ್ನು ಸೇನೆಯಲ್ಲಿ ಇಂದಿಗೂ ಪಾಲನೆ ಮಾಡಲಾಗುತ್ತದೆ ಎಂದು ಹೇಳಿದರು.

ಬಾಡದ ಶಿವಾಜಿ ಶಿಕ್ಷಣ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನವೀನ ದೇವರಭಾವಿ ಶಿವಾಜಿ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಪೂರ್ವದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಶಿವಾಜಿ ಮಹಾರಾಜ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲಸ್ವಾರ, ಪೌರಾಯುಕ್ತ ಜಗದೀಶ ಹುಲಗಜ್ಜಿ, ಛತ್ರಪತಿ ಶಿವಾಜಿ ಮಹಾರಾಜರ ಅಭಿಮಾನಿ ಸಮಿತಿಯ ಅಧ್ಯಕ್ಷ ಸತೀಶ್ ಕೊಳಂಬಕರ, ನಗರಸಭೆ ಸದಸ್ಯ ಹನುಮಂತ ತಳವಾರು, ಮನೋಜ ಬಾಂದೇಕರ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಇದ್ದರು.