ಸಾರಾಂಶ
- ಛತ್ರಪತಿ ಶಿವಾಜಿ ವ್ಯಾಘ್ರನಖ ಬಳಸಿ ಅಫ್ಜಲ್ ಖಾನ್ ವಧೆ ಚಿತ್ರದ ಫ್ಲೆಕ್ಸ್ ವಿವಾದ ಸುಖಾಂತ್ಯ
- - -- ಪೊಲೀಸರಿಂದ ಮನವೊಲಿಕೆ: ಶಿವಾಜಿ ಮಹಾರಾಜರು ಖಡ್ಗ ಹಿಡಿದು ನಿಂತಿರುವ ಫ್ಲೆಕ್ಸ್ ಅಳವಡಿಕೆ
- ಸ್ವಾತಂತ್ರ್ಯ ವೀರ ಸಾವರ್ಕರ್ ಯುವಕರ ಬಳಗದ ಶ್ರೀ ಗಣೇಶೋತ್ಸವ ವೇಳೆ ಉಂಟಾಗಿದ್ದ ವಿವಾದ - ಪೊಲೀಸ್ ಅಧಿಕಾರಿಗಳೊಂದಿಗೆ ತಡರಾತ್ರಿವರೆಗೂ ವಾಕ್ಸಮರ: ಮನವೊಲಿಸಿ ಫ್ಲೆಕ್ಸ್ ತೆರವು- - -
ಕನ್ನಡಪ್ರಭ ವಾರ್ತೆ ದಾವಣಗೆರೆನಗರದ ಆನೆಕೊಂಡದ ಮಟ್ಟಿಕಲ್ಲು ಮುಖ್ಯ ರಸ್ತೆಯಲ್ಲಿ ವಿವಾದಕ್ಕೆ ಕಾರಣವಾಗಿದ್ದ ಫ್ಲೆಕ್ಸನ್ನು ಗುರುವಾರ ರಾತ್ರೋರಾತ್ರಿ ಪೊಲೀಸರು ತೆರವುಗೊಳಿಸಿದ್ದ ಸ್ಥಳದಲ್ಲೇ ಶ್ರೀ ಗಣೇಶ ಸಂಘಟಕರು ಶಿವಾಜಿ ಮಹಾರಾಜರ ಬೇರೊಂದು ಭಂಗಿಯ ಫ್ಲೆಕ್ಸ್ ಅಳವಡಿಸಿದ್ದಾರೆ. ಇದರೊಂದಿಗೆ ವಿವಾದ ಸುಖಾಂತ್ಯ ಕಂಡಂತಾಗಿದೆ.
ಅಫ್ಜಲ್ ಖಾನ್ ವಧೆ ಮಾಡುವ ಪ್ಲೆಕ್ಸ್ ಬದಲಿಗೆ ಬಳಗದವರು ಛತ್ರಪತಿ ಶಿವಾಜಿ ಮಹಾರಾಜರು ಖಡ್ಗ ಹಿಡಿದು ನಿಂತಿರುವ ಫ್ಲೆಕ್ಸ್ ಅಳವಡಿಸಿದ್ದಾರೆ. ಫ್ಲೆಕ್ಸ್ ಕೆಳಗೆ ''''ಹೊಗಳುವವರಿಗೆ ಹೋಳಿಗೆ ಊಟದಂತೆ... ತೆಗಳುವವರಿಗೆ ತಂಗಳೂಟದಂತೆ ಕಾಣುವುದು ಈ ಅಪ್ರತಿಮ ದೇಶಪ್ರೇಮಿಯ ಸಾಧನೆ'''' ಎಂಬ ಅಡಿಬರಹ ಬರೆಯಲಾಗಿದೆ. ಈ ರೀತಿಯ ಶಿವಾಜಿ ಮಹಾರಾಜರ ಫ್ಲೆಕ್ಸ್ ಅಳವಡಿಸುವ ಮೂಲಕ ಫ್ಲೆಕ್ಸ್ ವಿವಾದಕ್ಕೆ ತೆರೆ ಎಳೆದು, ಗಣೇಶೋತ್ಸವ ಸಂಭ್ರಮದಲ್ಲಿ ಭಕ್ತರು ಭಾಗಿಯಾದರು.ಆಗಿದ್ದೇನು?:
ಇಲ್ಲಿನ ಆನೆಕೊಂಡದ ಮಟ್ಟಿಕಲ್ಲು ಮುಖ್ಯ ರಸ್ತೆಯಲ್ಲಿ ಶ್ರೀ ವೀರ ಸಾವರ್ಕರ್ ಯುವಕರ ಸಂಘದಿಂದ ಶ್ರೀ ಗಣೇಶೋತ್ಸವ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವ್ಯಾಘ್ರನಖ ಬಳಸಿ, ವಧೆ ಮಾಡುವ ಚಿತ್ರದ ಫ್ಲೆಕ್ಸ್ ಅಳವಡಿಸಿದ್ದರು. ಪ್ರಚೋದನಕಾರಿ ಫೋಟೋ ಎಂಬ ಆಕ್ಷೇಪದ ಮಾಹಿತಿ ಆಧರಿಸಿ ರಾತ್ರಿಯೇ ಪೊಲೀಸರು ಸಾರ್ವಜನಿಕ ಶಾಂತಿ ಪಾಲನೆ ಹಿತದೃಷ್ಟಿಯಿಂದ ಫ್ಲೆಕ್ಸ್‌ನ್ನು ತೆರವುಗೊಳಿಸಲು ಆಗಮಿಸಿದ್ದರು.ಈ ವೇಳೆ ಹಿಂದೂ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್‌ನನ್ನು ವಧೆ ಮಾಡಿರುವುದನ್ನೇ ನಾವು ಹಾಕಿದ್ದೇವೆ. ಯಾವುದೇ ಕಾಲ್ಪನಿಕ ಚಿತ್ರದ ಫ್ಲೆಕ್ಸ್ ಹಾಕಿಲ್ಲವೆಂದು ಸಂಘಟಕರು ಹಾಗೂ ಹಿಂದೂಪರ ಸಂಘಟನೆಗಳ ಮುಖಂಡರು ಪಟ್ಟುಹಿಡಿದಿದ್ದರು. ಇದರಿಂದ ಮಟ್ಟಿಕಲ್ಲು ಪ್ರದೇಶದಲ್ಲಿ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಪೊಲೀಸರ ಈ ನಡೆಗೆ ಸ್ವಾತಂತ್ರ್ಯ ವೀರ ಸಾವರ್ಕರ್ ಯುವಕರ ಬಳಗದ ಪದಾಧಿಕಾರಿಗಳು, ಸ್ಥಳೀಯರು ವಿರೋಧಿಸಿದ್ದರು. ವಿಷಯ ತಿಳಿದ ಹಿಂದೂ ಸಂಘಟನೆಗಳ ಮುಖಂಡರಾದ ಮಾಜಿ ಮೇಯರ್ ಎಸ್.ಟಿ. ವೀರೇಶ, ಸತೀಶ ಪೂಜಾರಿ, ರಾಜು ಬೇಕರಿ ಸೇರಿದಂತೆ ಅನೇಕರು ಸ್ಥಳಕ್ಕೆ ದೌಡಾಯಿಸಿದರು. ಅಷ್ಟರಲ್ಲಾಗಲೇ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯಲ್ಲಿ ಯುವಕರು ಧಾವಿಸಿದ್ದರು.ಸುಮಾರು ಗಂಟೆಗಳ ಕಾಲ ರಾತ್ರಿ ಮಟ್ಟಿಕಲ್ಲು ಪ್ರದೇಶದಲ್ಲಿ ಪೊಲೀಸರೊಂದಿಗೆ ವಾಗ್ವಾದ, ಮಾತಿನ ಚಕಮಕಿಯೂ ನಡೆಯಿತು. ಕಡೆಗೆ ಪೊಲೀಸರು ಈ ಕುರಿತು ಬೆಳಗ್ಗೆ ಸಮಾಲೋಚಿಸೋಣ ಎಂಬುದಾಗಿ ಸಮಾಧಾನಪಡಿಸಿ ಎಲ್ಲರಿಗೂ ಕಳಿಸಿದ್ದರು. ತಡರಾತ್ರಿ ಎಲ್ಲರ ಮನವೊಲಿಸಿದ ಪೊಲೀಸರು ವಿವಾದಕ್ಕೆ ಕಾರಣವಾಗಿದ್ದ ಫ್ಲೆಕ್ಸನ್ನು ತೆರವು ಮಾಡಿದ್ದರು.
ಈ ಬಗ್ಗೆ ಸಂಘಟಕರು, ಹಿಂದು ಸಂಘಟನೆಗಳ ಮುಖಂಡರು ತೀವ್ರ ವಿರೋಧ ಮುಂದುವರಿಸಿಯೇ ಇದ್ದರು. ಕಡೆಗೆ ಛತ್ರಪತಿ ಶಿವಾಜಿ ಮಹಾರಾಜರೇ ಖಡ್ಗ ಹಿಡಿದು, ನಿಂತಿರುವ ಚಿತ್ರವಿರುವ ಫ್ಲೆಕ್ಸ್ ಅಳವಡಿಸಲಾಯಿತು. ಆ ಮೂಲಕ ಸಂಘಟಕರೂ ಕಾನೂನು, ಶಾಂತಿ ಪಾಲನೆಗೆ ಸಹಕರಿಸಿ ವಿವಾದ ಬೆಳೆಸಲು ಮುಂದಾಗಲಿಲ್ಲ.- - -
(-ಫೋಟೋ)