ಸಾರಾಂಶ
ಕನ್ನಡಪ್ರಭ ವಾರ್ತೆ ಭಾಲ್ಕಿ
ಛತ್ರಪತಿ ಶಿವಾಜಿ ಮಹಾರಾಜರು ಸರ್ವಧರ್ಮೀಯರನ್ನು ಸಮಾನವಾಗಿ ಕಾಣುವ ವ್ಯಕ್ತಿಯಾಗಿದ್ದರು ಎಂದು ಎಮ್‌ಆರ್‌ಎ ಕಾಲೇಜಿನ ಪ್ರಾಂಶುಪಾಲ ಅಶೋಕ ರಾಜೋಳೆ ಅಭಿಪ್ರಾಯಪಟ್ಟರು.ಪಟ್ಟಣದ ಪುರಭವನದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮಹೋತ್ಸವದಲ್ಲಿ ವಿಶೇಷ ಉಪನ್ಯಾಸ ಮಂಡಿಸಿದ ಅವರು, ಕೆಲವರು ಛತ್ರಪತಿ ಶಿವಾಜಿ ಮಹಾರಾಜರಿಗೆ ಮುಸ್ಲಿಂ ವಿರೋಧಿಗಳೆಂದು ಹಣೆಪಟ್ಟ ಕಟಿದ್ದಾರೆ. ಆದರೆ ಇದು ತಪ್ಪು, ಛತ್ರಪತಿ ಶಿವಾಜಿ ಮಹಾರಾಜರು ಎಲ್ಲಾ ಧರ್ಮದವರಿಗೂ ಸಮಾನವಾಗಿ ಕಾಣುವ ವ್ಯಕ್ತಿಯಾಗಿದ್ದರು ಎಂದರು.
ಭಾರತದ ಇತಿಹಾಸ ತಿಳಿಯಬೇಕಾದರೆ ಛತ್ರಪತಿ ಶಿವಾಜಿ ಮಹಾರಾಜರ ಇತಿಹಾಸ ಮೊದಲು ತಿಳಿದುಕೊಳ್ಳಬೇಕು. ಅವರು ಮಹಿಳೆಯರಿಗೆ ಗೌರವಿಸುವ ರೀತಿ, ಎಲ್ಲರನ್ನೂ ಸಮಾನವಾಗಿ ಕಾಣುವ ವ್ಯಕ್ತಿತ್ವ, ಅವರ ಆಡಳಿತ ವೈಖರಿ ಎಲ್ಲರನ್ನೂ ಮೆಚ್ಚುವಂತಿದೆ. ವಂಶ ಪರಂಪರೆಗೆ ತಿಲಾಂಜಲಿ ಹೇಳಿದ ಮೊದಲ ರಾಜ ಛತ್ರಪತಿ ಶಿವಾಜಿಯಾಗಿದ್ದರು. ಅವರು ಆಡಳಿತದಲ್ಲಿಯ ಭ್ರಷ್ಟಾಚಾರ ನಿರ್ಮೂಲನೆಗಾಗಿ ಜಾಗೀರದಾರ ಪದ್ಧತಿ ನಿರ್ಮೂಲನೆ ಮಾಡಿದರು. ಇಂತಹ ಮಹಾನ್ ನಾಯಕರ ಇತಿಹಾಸ ಅರಿತು ಅವರ ಬಗ್ಗೆ ಮಾತನಾಡಬೇಕು ಎಂದು ಹೇಳಿದರು.ತಾಪಂ ಅಧಿಕಾರಿ ಸೂರ್ಯಕಾಂತ ಪಾಟೀಲ ಉದ್ಘಾಟಿಸಿ ಮಾತನಾಡಿ, ಮನುಷ್ಯ ಎತ್ತರಕ್ಕೆ ಬೆಳೆಯಲು ತಾಯಿಯ ಸಂಸ್ಕಾರ ಮುಖ್ಯ. ಛತ್ರಪತಿ ಶಿವಾಜಿ ಮಹಾರಾಜರು ಇಷ್ಟೊಂದು ಎತ್ತರಕ್ಕೆ ಬೆಳೆಯಲು ಮಾತೆ ಜೀಜಾಬಾಯಿಯ ಸಂಸ್ಕಾರವೇ ಮೂಲ ಕಾರಣ ಎಂದು ಹೇಳಿದರು.
ತಹಸೀಲ್ದಾರ್ ಶ್ರೀಯಾಂಕ ಧನಾಶ್ರೀ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಪ್ರಾಸ್ತಾವಿಕ ಮಾತನಾಡಿದರು. ಛತ್ರಪತಿ ಶಿವಾಜಿ ಮಹಾರಾಜರು ಸೇರಿದಂತೆ ವಿವಿಧ ರಾಜರ ವೇಷಧಾರಿ ಮಕ್ಕಳಿಗೆ ತಾಲೂಕು ಆಡಳಿತದಿಂದ ಸತ್ಕರಿಸಲಾಯಿತು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಇದಕ್ಕೂ ಮುನ್ನ ಪಟ್ಟಣದ ವಿವಿಧ ಬೀದಿಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರದ ಮೆರವಣಿಗೆ ನಡೆಯಿತು.ಸಮಾಜ ಕಲ್ಯಾಣಾಧಿಕಾರಿ ಸತೀಶಕುಮಾರ ಸಂಗನ, ಉಪತಹಸೀಲ್ದಾರ್ ಪಲ್ಲವಿ ಬೆಳಕೀರೆ, ಗೋಪಾಲ ಹಿಪ್ಪರಗಿ, ಪುರಸಭೆ ಮುಖ್ಯಾಧಿಕಾರಿ ನಾಗಣ್ಣ ಪರೀಟ, ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಜಾಬನೂರ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ, ಕಸಾಪ ತಾಲೂಕು ಅಧ್ಯಕ್ಷ ನಾಗಭೂಷಣ ಮಾಮಡಿ, ಸೋಮನಾಥಪ್ಪ ಅಷ್ಟೂರೆ, ವೈಜಿನಾಥ ತಗಾರೆ, ಸಂತೋಷ ಬಿಜಿಪಾಟೀಲ, ವೈಜಿನಾಥ ತಗಾರೆ, ಪ್ರಕಾಶ ಭಾವಿಕಟ್ಟೆ, ವಿಶ್ವನಾಥ ಮೋರೆ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ, ಸಂತೋಷಿ ವಾಡೆ, ಅರ್ಚನಾ ಪವಾರ್ ಉಪಸ್ಥಿತರಿದ್ದರು.