ಅರಸೀಕೆರೆ: ವಕೀಲರ ಸಂಘದ 2026-27ನೇ ಸಾಲಿನ ಕಾರ್ಯಕಾರಿ ಸಮಿತಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿಗೆ ನೂತನ ಪದಾಧಿಕಾರಿಗಳು ಆಯ್ಕೆಯಾಗಿದ್ದಾರೆ.

ನ್ಯಾಯಾಲಯ ಸಂಕೀರ್ಣದಲ್ಲಿ ಶಾಂತಿಯುತವಾಗಿ ನಡೆದ ಮತದಾನದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ತಮ್ಮ ಮತದಾನದ ಹಕ್ಕು ಚಲಾಯಿಸಿದರು. ಮತ ಎಣಿಕೆ ಬಳಿಕ ಚುನಾವಣಾಧಿಕಾರಿಗಳು ಫಲಿತಾಂಶ ಪ್ರಕಟಿಸಿದರು. ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಬೆಳಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆದ ಮತದಾನ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಒ. ಎ. ಶಿವಕುಮಾರ್ 63 ಮತಗಳನ್ನು ಪಡೆದು ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಎಸ್. ರಾಘವೇಂದ್ರ 65 ಮತಗಳು, ಉಪಾಧ್ಯಕ್ಷರಾಗಿ ಸಿದ್ದಮಲ್ಲಪ್ಪ 78 ಮತಗಳು, ಖಜಾಂಚಿಯಾಗಿ ಎಚ್. ಎಸ್. ಸವಿತಾ 74 ಮತಗಳು, ಜಂಟಿ ಕಾರ್ಯದರ್ಶಿಯಾಗಿ ಯು.ಕೆ. ಪುರುಷೋತ್ತಮ 80 ಮತಗಳು ಹಾಗೂ ನಿರ್ದೇಶಕರಾಗಿ ಟಿ.ಟಿ. ವಿರೂಪಾಕ್ಷ 64 ಮತಗಳನ್ನು ಪಡೆದು ಜಯಗಳಿಸಿದರು. ಮಹಿಳಾ ಮೀಸಲಾತಿ ನಿರ್ದೇಶಕರ ಸ್ಥಾನದ ಅಭ್ಯರ್ಥಿ ಎಸ್‌. ಎನ್‌ ಅನ್ನಪೂರ್ಣ ದೇವಿ 64 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ.ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಹಾಗೂ ವಕೀಲ ಡಿ. ಶ್ರೀಕಾಂತ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಸಹಾಯಕ ಆಡಳಿತಾಧಿಕಾರಿ ಕೆ.ಸಿ. ಶಿವರಾಜ್ ಕುಮಾರ್, ಆಡಳಿತಾಧಿಕಾರಿ ಕಲ್ಗುಂಡಿ ಹಿರಿಯಣ್ಣ, ಮಹದೇವಪ್ಪ ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.