ಅನಾಥ ಹಾಗೂ ಬಡವರ ಮಕ್ಕಳನ್ನು ದೇವರೆಂದು ಸೇವೆ ಮಾಡುವ ಮೂಲಕ ಬಸವತತ್ವವನ್ನು ಪಾಲಿಸಿದ ನಿಜ ಶರಣ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ನಮಗೆಲ್ಲ ಪ್ರೇರಣೆಯಾಗಬೇಕು ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಹೊಸದುರ್ಗ: ಅನಾಥ ಹಾಗೂ ಬಡವರ ಮಕ್ಕಳನ್ನು ದೇವರೆಂದು ಸೇವೆ ಮಾಡುವ ಮೂಲಕ ಬಸವತತ್ವವನ್ನು ಪಾಲಿಸಿದ ನಿಜ ಶರಣ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ನಮಗೆಲ್ಲ ಪ್ರೇರಣೆಯಾಗಬೇಕು ಎಂದು ಕುಂಚಿಟಿಗ ಮಠದ ಶಾಂತವೀರ ಸ್ವಾಮೀಜಿ ಹೇಳಿದರು.

ಪಟ್ಟಣದ ಪಶು ವೈದ್ಯಕೀಯ ಇಲಾಖೆ ಮುಂಭಾಗದ ಆವರಣದಲ್ಲಿ ವಿವೇಕಾನಂದ ಸ್ನೇಹ ಬಳಗ ಹಾಗೂ ಟ್ಯಾಕ್ಸಿ ಮಾಲೀಕರ ಸಂಘದ ಆಶ್ರಯದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳ ಪುಣ್ಯಸ್ಮರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ದಾಸೋಹಕ್ಕೆ ಮತ್ತು ದಾನಕ್ಕೆ ಶ್ರೇಷ್ಠವಾದ ಉದಾಹರಣೆ ಶಿವಕುಮಾರ ಸ್ವಾಮೀಜಿ. ದಾಸೋಹವೇ ದೇವಧಾಮ ಎಂಬ ತತ್ವಕ್ಕೆ ಅನ್ವರ್ಥನಾಮವಾಗಿ ಜೀವನ ನಡೆಸಿದ ಪವಿತ್ರಾತ್ಮ, ಜಾತಿ ಮತ ಭೇದವಿಲ್ಲದೆ ಎಲ್ಲರನ್ನು ನಮ್ಮರೆಂದು ಭಾವಿಸಿ ಕರುಣಾ ಮೂರ್ತಿಯಾಗಿ ಮಾರ್ಗದರ್ಶ ನೀಡಿದ ಪೂಜ್ಯರು ಪ್ರತಿ ದಿನ 10 ಸಾವಿರ ಮಕ್ಕಳಿಗೆ ದಾಸೋಹ ಮಾಡುವ ಮೂಲಕ ಭಾರತದ ಇತಿಹಾಸದಲ್ಲಿಯೇ ಶ್ರೇಷ್ಠ ಅಧ್ಯಾಯಕ್ಕೆ ಪಾತ್ರರಾಗಿದ್ದಾರೆ. ಮಠಾಧೀಶರೆಂದರೆ ತಿಳಿದುಕೊಂಡು ಬಂದು ಕರೆದುಕೊಂಡು ತಿನ್ನು ಎನ್ನುವ ಸಂಸ್ಕೃತಿಯನ್ನು ಪಾಲಿಸಿದ ಮಾತೃ ಹೃದಯ ಶಿವಕುಮಾರ ಸ್ವಾಮೀಜಿಗಳದ್ದು ಎಂದರು.

ಸಮೃದ್ಧ ನಾಡಿನ ಚೇತನ, ನಮ್ಮ ನಡುವೆ ಬೆಳೆದ ಮಹಾ ಬೆಳಕು, ತ್ರಿವಿಧ ದಾಸೋಹಿ ಲಿಂಗೈಕ್ಯ ಶಿವಕುಮಾರ ಶ್ರೀಗಳು ಎಷ್ಟೇಲ್ಲಾ ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆ ಮಾಡಿದರೂ ಎಂದಿಗೂ ಪ್ರಚಾರ ತೆಗೆದುಕೊಳ್ಳಲಿಲ್ಲ. ಯಾವತ್ತಿಗೂ ಸೇವೆಯನ್ನೇ ಮಾಡದ ಜನರು ಪ್ರಚಾರದ ಹಿಂದೆ ಬಿದ್ದಿರುತ್ತಾರೆ. ಇದು ತಾತ್ಕಲಿಕ ಅಷ್ಟೇ. ಆದರೆ ಶ್ರೀ ಶಿವಕುಮಾರ ಶ್ರೀಗಳ ಸೇವಾ ಸಾಧನೆ ಶಾಶ್ವತವಾಗಿ ಉಳಿಯಲಿದೆ ಎಂದು ಹೇಳಿದರು.

ಸಂವಿಧಾನ ಜಾರಿಯಾಗಿ 75 ವರ್ಷವಾದರೂ ತಾರತಮ್ಯ, ಮೀಸಲಾತಿ ಗೊಂದಲಗಳು, ಏರಿಳಿತಗಳು, ಸಮಾಜದ ಅನೇಕ ತಲ್ಲಣಗಳಿಗೆ ಇಂದಿನ ಯುವಜನತೆ ಒಳಗಾಗುತ್ತಿದ್ದಾರೆ. ದುಶ್ಚಟ, ದುರಭ್ಯಾಸ, ದುರ್ಗಣಗಳನ್ನು ದೂರ ಮಾಡಿ, ಸಂಸ್ಕಾರ, ಸಹಜತೆ, ಸರಳತೆಯನ್ನು ವಿಶೇಷವಾಗಿ ಎಲ್ಲರೂ ನಮ್ಮವರೆನ್ನುವಂತಹ ಸಹಬಾಳ್ವೆಯನ್ನು ನಡೆಸುವಂತಹ ಔಧರ್ಯವನ್ನು ಸಮಾಜದಲ್ಲಿ ಮಾಡಬೇಕಿದೆ ಎಂದರು. ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಎಲ್ಲಾ ಕಾಲ ಘಟ್ಟದಲ್ಲಿಯೂ ಈ ದೇಶದಲ್ಲಿ ಸಂತರು, ದಾರ್ಶನಿಕರು, ಮಹಾತ್ಮರು, ಸಮಾಜ ಸೇವಕರು ಸೇವೆ ಮಾಡಿಕೊಂಡು ಬಂದಿದ್ದರ ಫಲವಾಗಿ ಇವತ್ತು ನಾವೇಲ್ಲಾ ಇದ್ದೇವೆ. ಶ್ರೀ ಶಿವಕುಮಾರ ಸ್ವಾಮೀಜಿಗಳಂತೆ ಅವರ ಭಕ್ತರು ಪುಣ್ಯಸ್ಮರಣೆ ದಿನದಂದು ಅನ್ನದಾಸೋಹ ಮಾಡುತ್ತಿದ್ದಾರೆ. ನಾಡಿನ ಜನರು ಸನ್ಮಾರ್ಗದಲ್ಲಿ ಬದುಕಿ, ಅಶಕ್ತರಿಗೆ ಸಹಾಯ ಮಾಡಿದರೆ ಶ್ರೀಗಳಿಗೆ ನಿಜವಾದ ಗೌರವ ಸಲ್ಲಿಸಿದಂತ್ತಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಣ್ಣೆ ಮಠದ ಮರುಳಸಿದ್ದೇಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಹಾಲಸ್ವಾಮಿ ಮಠದ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ, ವಿವೇಕಾನಂದ ಸ್ನೇಹ ಬಳಗದ ರಾಗಿ ಕುಮಾರ್, ಕೆ.ಆರ್.ಪ್ರವೀಣ್, ಸಿದ್ದಗಂಗಾ ಮೆಡಿಕಲ್ ಯೋಗೇಶ್, ವಸಂತ್ ಕುಮಾರ್, ತುಂಬಿನಕೆರೆ ಬಸವರಾಜ್ ಸೇರಿದಂತೆ ಬಳಗದ ಸದಸ್ಯರುಗಳು ಸಾರ್ವಜನಿಕರು ಉಪಸ್ಥಿತರಿದ್ದರು.