ಹಾವೇರಿ: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆ ನಗರದ ಹುತಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಬುಧವಾರ ಸಂಜೆ ಜಿಲ್ಲಾ ಕಾಂಗ್ರೆಸ್‌ನ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಪರಸ್ಪರ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಿದರು.

ಈ ವೇಳೆ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ ಮಾತನಾಡಿ, ಕಾಂಗ್ರೆಸ್ ಕಟ್ಟಾಳು ಹಾಗೂ ಸಂಘಟನಾ ಚತುರ ಡಿ.ಕೆ. ಶಿವಕುಮಾರ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ಹೆಮ್ಮೆಪಡುವಂತಹ ವಿಷಯವಾಗಿದೆ. ಡಿ.ಕೆ. ಶಿವಕುಮಾರ ಅವರು ಎನ್‌ಎಸ್‌ಯುಐ ವಿದ್ಯಾರ್ಥಿ ಸಂಘಟನೆಯಿಂದಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ಶಾಸಕರಾಗಿ, ಸಚಿವರಾಗಿ, ಉಪ ಮುಖ್ಯಮಂತ್ರಿಯಾಗಿ ಜನಸೇವೆ ಮಾಡಿ, ಇದೀಗ ರಾಜ್ಯದ ಮುಖ್ಯಮಂತ್ರಿಯಾಗಿ ಇನ್ನೂ ಹೆಚ್ಚಿನ ಜನಸೇವೆ ಮಾಡಲು ಸಿದ್ಧರಾಗಿರುವುದು ಕಾಂಗ್ರೆಸ್‌ಗೆ ಹೆಚ್ಚಿನ ಬಲ ತಂದಿದೆ. ಶಿವಕುಮಾರ ಮಾರ್ಗದರ್ಶನದಲ್ಲಿ ಎಲ್ಲರೂ ಮುನ್ನಡೆಯೋಣ ಎಂದರು.

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ ಮಾತನಾಡಿ, ಕಾಂಗ್ರೆಸ್ ಹೈಕಮಾಂಡ್‌ ಸೂಚನೆ ಮೇರೆಗೆ ಅಹಿಂದ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಮುಖ್ಯಮಂತ್ರಿ ಹುದ್ದೆ ಬಿಟ್ಟುಕೊಟ್ಟು ತ್ಯಾಗರಾಮಯ್ಯ ಎನಿಸಿಕೊಂಡಿದ್ದಾರೆ. ಇದೀಗ ಕಾಂಗ್ರೆಸ್ ಕಟ್ಟಾಳು, ಸಂಘಟನಾಕಾರ ಡಿ.ಕೆ. ಶಿವಕುಮಾರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿರುವುದು ಸಂತಸ ತಂದಿದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ರಾಜ್ಯದ ಸೇವೆ ಮಾಡುವಂತಹ ಶಕ್ತಿಯನ್ನು ಭಗವಂತ ನೀಡಲಿ ಎಂದರು.

ಈ ವೇಳೆ ಕೆಸಿಸಿ ಬ್ಯಾಂಕಿನ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಎಂ.ಎಂ. ಮೈದೂರ, ಡಿ.ಕೆ. ಶಿವಕುಮಾರ್ ಅಭಿಮಾನಿ ಬಳಗ ಮುಖಂಡರಾದ ಅಲ್ತಾಫ್ ಚೋಪದಾರ, ವೀರಣ್ಣ ಪಾಟೀಲ, ನೂರ್‌ಅಹ್ಮದ್ ಬೋರಗಲ್, ಜಿಲ್ಲಾ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಶಂಕರ ಮೆರವಾಡೆ, ಶಹರ ಘಟಕದ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಉಮರ ಇನಾಮದಾರ, ಸುಭಾಷ್ ಚವ್ಹಾಣ, ಗದಿಗೆಪ್ಪ ನೆಲೋಗಲ್ಲ, ಮಹಾಲಿಂಗಯ್ಯ ಪಾಟೀಲ, ಜಮೀರ್ ಜಿಗರಿ, ರಾಧಾ ಸವಣೂರ, ಮಮತಾ ಜಾಬಿನ್, ಬಸವರಾಜ್ ಬಳ್ಳಾರಿ, ಪ್ರಸನ್ನ ಹಿರೇಮಠ, ಕರಬಸಪ್ಪ ಹಲಗಣ್ಣನವರ, ಬಸವರಾಜ್ ಜಾಬಿನ, ರಮೇಶ್ ಮಾಳವಾದೆ, ರಾಜು ಡೊಳ್ಳಿನ್, ಚನ್ನಬಸಪ್ಪ ಅಂಗರಗಟ್ಟಿ, ಜಾಫರ ಅತ್ತಾರ, ಶೋಯಬ್ ಬಡಿಗೇರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.