ಹಾರೋಹಳ್ಳಿ: ಭಾರತೀಯ ಸೇನೆಯಲ್ಲಿ 24 ವರ್ಷ ಸುಧೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡು ತವರೂರಿಗೆ ಆಗಮಿಸಿದ ಸೈನಿಕನನ್ನು ಗ್ರಾಮಸ್ಥರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳು ಅದ್ಧೂರಿಯಾಗಿ ಸ್ವಾಗತಿಸಿ ಬರಮಾಡಿಕೊಂಡರು.
ದೇಶದ ಗಡಿ ಭಾಗದಲ್ಲಿ ಸೈನಿಕನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ತೋಕಸಂದ್ರ ಗ್ರಾಮದ ಶಿವಕುಮಾರ್ ಗ್ರಾಮಕ್ಕೆ ಆಗಮಿಸುತ್ತಿದ್ದಂತೆ ಗ್ರಾಪಂ ಅಧಿಕಾರಿಗಳು, ಮಾಜಿ ಅಧ್ಯಕ್ಷರು, ಸದಸ್ಯರು, ಮುಖಂಡರು, ಹಿತೈಷಿಗಳು ಗ್ರಾಮದ ದ್ವಾರಬಾಗಿಲಿನಿಂದ ತೆರೆದ ವಾಹನದಲ್ಲಿ ಬೃಹತ್ ಮೆರವಣಿಗೆ ಮೂಲಕ ಹೂವಿನ ಮಳೆ ಸುರಿಸಿ ಬರಮಾಡಿಕೊಂಡರು.ನಂತರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಜರುಗಿದ ವೇದಿಕೆ ಕಾರ್ಯಕ್ರಮದಲ್ಲಿ ಟಿ.ಎನ್.ಶಿವಕುಮಾರ್ ಮತ್ತು ಅವರ ಪತ್ನಿ ಹಾಗೂ ಕುಟುಂಬ ಸದಸ್ಯರನ್ನು ಸನ್ಮಾನಿಸಲಾಯಿತು. ಈ ವೇಳೆ ಶಾಲಾ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ, ನಾಟಕ ಪ್ರದರ್ಶನ ಮಾಡುವ ಮೂಲಕ ಗ್ರಾಮಸ್ಥರನ್ನ ಮನರಂಜಿಸಿದರು.
ಸನ್ಮಾನ ಸ್ವೀಕರಿಸಿ ಯೋಧ ಟಿ.ಎನ್.ಶಿವಕುಮಾರ್ ಮಾತನಾಡಿ, ನಾನು ಸೇನೆಗೆ ಸೇರುವುದು ನನ್ನ ತಂದೆ ತಾಯಿಗಳಿಗೆ ಇಷ್ಟವಿರಲಿಲ್ಲ. ಆದರೂ ಅವರ ಮನವೊಲಿಸಿ ಸೇನೆಗೆ ಸೇರಿ 24 ವರ್ಷ ದೇಶಸೇವೆ ಮಾಡಿ ಗ್ರಾಮಕ್ಕೆ ಮರಳಿದ್ದೇನೆ. ಇಂದು ನನ್ನನ್ನು ಗ್ರಾಮದಲ್ಲಿ ಅದ್ದೂರಿಯಾಗಿ ಬರಮಾಡಿಕೊಂಡಿರುವುದು ಮರೆಯಲಾಗದ ಕ್ಷಣ. ಗ್ರಾಮಸ್ಥರು ಸೈನಿಕರ ಮೇಲೆ ಇಟ್ಟಿರುವ ಗೌರವ, ಪ್ರೀತಿ, ವಿಶ್ವಾಸ ಎಂತಹದು ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಹೇಳಿದರು.ಶಾಲಾ ವಿದ್ಯಾರ್ಥಿಗಳು ತಂದೆ ತಾಯಿಯರಲ್ಲೆ ದೇವರನ್ನು ಕಾಣಬೇಕು, ನಾನು ಯೋಧನಾಗಬೇಕೆಂಬ ಮಹದಾಸೆಯಿಂದ ಅನೇಕ ಕಷ್ಟ, ಸುಖ, ಏಳು, ಬೀಳುಗಳನ್ನ ಕಂಡಿದ್ದೇನೆ. ನಾನು ಇದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕಲಿತು, ನಂತರ ರೂರಲ್ ಕಾಲೇಜಲ್ಲಿ ದ್ವಿತೀಯ ಪಿಯುಸಿ ಮುಗಿಸಿ ಸೇನೆಗೆ ಸೇರ್ಪಡೆಯಾಗಿ ಸೇವೆ ಸಲ್ಲಿಸಿರುವುದು ಸಹ ನನಗೆ ತೃಪ್ತಿ ತಂದಿದೆ ಎಂದು ತಮ್ಮ ಅವಧಿಯ ಸೇವೆ ಮತ್ತು ನೆನಪುಗಳನ್ನು ಮೆಲುಕು ಹಾಕಿದರು.
ಇದೇ ವೇಳೆ ನಿವೃತ್ತ ಯೋಧರಾದ ರುದ್ರಪ್ಪ, ಕೆ.ಎಚ್.ನಾಗರಾಜ್, ರಾಮಣ್ಣ, ಎ.ಸಿ.ಕೃಷ್ಣ, ವಾಸುದೇವ್ ಅವರನ್ನು ಸನ್ಮಾನಿಸಲಾಯಿತು.
ಗ್ರಾಮದ ಮುಖಂಡರಾದ ಶಿವರುದ್ರೇಗೌಡ, ಕುಮಾರ್, ಶಿವಮಾದೇಗೌಡ, ಪ್ರದೀಪ, ರಾಜೇಶ್, ಶಿವಣ್ಣ, ಪ್ರೀತಮ್, ನವೀನ್, ಶ್ರೀನಿವಾಸ್, ಸಿದ್ದೇಶ್, ಚೂಡೇಶ, ಚಂದನ್ ಹಾಗೂ ಯೋಧರ ತಂದೆ, ತಾಯಿ, ಪತ್ನಿ ಸೇರಿದಂತೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸೇರಿದಂತೆ ಶಾಲಾ ಮುಖ್ಯ ಶಿಕ್ಷಕಿಯರಾದ ಮಂಗಳ, ಹರಿಣಿ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಪ್ರಮೋದ್, ಗ್ರಾಮ ಲೆಕ್ಕಿಗ ಮಂಜೇಶ್, ಸೇರಿದಂತೆ ಶಾಲಾ ವಿದ್ಯಾರ್ಥಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
5ಕೆಆರ್ ಎಂಎನ್ 1.ಜೆಪಿಜಿಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡು ತವರೂರಿಗೆ ಆಗಮಿಸಿದ ಟಿ.ಎನ್.ಶಿವಕುಮಾರ್ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಬರಮಾಡಿಕೊಂಡರು.