ಕರ್ನಾಟಕದಲ್ಲಿ ಸಾವಿರಾರು ಸ್ವಾಮೀಜಿಗಳು ಬಂದು ಹೋಗಿದ್ದಾರೆ ಆದರೆ ಶಿವಕುಮಾರ ಸ್ವಾಮೀಜಿ ಆ ಎಲ್ಲರಿಗಿಂತ ಮೇರು ಶಿಖರದಂತೆ ಸಾರ್ಥಕ ಬದುಕನ್ನು ಸಾಧಿಸಿ ದೇವರಾದ ಮಹಾಪುರುಷ ಎಂದು ಕುಣಿಗಲ್ ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಸಂತ್ ಕುಮಾರ್ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕುಣಿಗಲ್ ಕರ್ನಾಟಕದಲ್ಲಿ ಸಾವಿರಾರು ಸ್ವಾಮೀಜಿಗಳು ಬಂದು ಹೋಗಿದ್ದಾರೆ ಆದರೆ ಶಿವಕುಮಾರ ಸ್ವಾಮೀಜಿ ಆ ಎಲ್ಲರಿಗಿಂತ ಮೇರು ಶಿಖರದಂತೆ ಸಾರ್ಥಕ ಬದುಕನ್ನು ಸಾಧಿಸಿ ದೇವರಾದ ಮಹಾಪುರುಷ ಎಂದು ಕುಣಿಗಲ್ ಟೌನ್ ವೀರಶೈವ ಸಮಾಜದ ಅಧ್ಯಕ್ಷ ವಸಂತ್ ಕುಮಾರ್ ತಿಳಿಸಿದ್ದಾರೆ.

ಪಟ್ಟಣದ ಅಟವೀಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಕುಣಿಗಲ್ ಟೌನ್ ವೀರಶೈವ ಸಮಾಜದ ವತಿಯಿಂದ ಏರ್ಪಡಿಸಿದ್ದ ದಾಸೋಹ ದಿನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರಸಾದ ವಿತರಿಸಿ ಮಾತನಾಡಿದರು. ಸಿದ್ದಗಂಗಾ ಮಠ ಬಸವ ತತ್ವ ಆಧಾರದ ಮೇಲೆ ರಚನೆಯಾದ ವಿಶಿಷ್ಟ ಸಾಂಪ್ರದಾಯಿಕ ಹಾಗೂ ಸೌಹಾರ್ದ ವಿಶ್ವಮಾನವ ಕೇಂದ್ರವಾಗಿದೆ. ಇಲ್ಲಿ ಎಲ್ಲಾ ಮಕ್ಕಳು ಜಾತಿ ಧರ್ಮಗಳ ಸೋಂಕಿಲ್ಲದೆ ಸೋದರತ್ವದ ಜೊತೆಗೆ ಊಟ ಮಾಡಿ ತಮ್ಮ ಶಿಕ್ಷಣದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂತಹ ಸ್ವಾಮೀಜಿಗಳನ್ನ ಕಣ್ಣಾರೆ ಕಂಡ ಮುಟ್ಟಿದ ಮಾತನಾಡಿದ ಪ್ರತಿಯೊಬ್ಬರೂ ಕೂಡ ಪುಣ್ಯವಂತರೇ ಎಂದರು.

ಪ್ರತಿ ಮನೆಯಲ್ಲಿ ಆಚರಿಸಿ: ದಾಸೋಹ ದಿನವನ್ನು ಸರ್ಕಾರ ಅಧಿಕೃತವಾಗಿ ಮಾಡಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಪ್ರತಿ ತಾಲೂಕುಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಮಾಡಲಾಗುತ್ತಿದೆ ಆದರೆ ಅದನ್ನು ಮುಂದುವರಿದ ದಾರಿಯಾಗಿ ಪ್ರತಿ ಮನೆಯಲ್ಲೂ ಕೂಡ ಶಿವಕುಮಾರ ಸ್ವಾಮೀಜಿಯ ಭಾವಚಿತ್ರ ಇಟ್ಟು, ಪೂಜಿಸಿ ಅವರ ಗುಣಗಾನ ಮಾಡುವ ಕೆಲಸ ಆಗಬೇಕಿದೆ ಎಂದರು. ಸಂಸ್ಮರಣೆಗೆ ನೆನಪಾಗುವ ವೀರಾಪುರ: ಕಳೆದ ಹಲವಾರು ವರ್ಷಗಳಿಂದ ವೀರಾಪುರದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಶಿವಕುಮಾರ ಸ್ವಾಮೀಜಿಯ 111 ಅಡಿ ಎತ್ತರದ ಪುತ್ತಳಿ ನಿರ್ಮಾಣ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಮಠದಲ್ಲಿ ಯಾವುದಾದರೂ ಕಾರ್ಯ ನಡೆದಾಗ ಸ್ವಾಮೀಜಿ ವಿಚಾರ ನೆನಪಿಗೆ ಬಂದಾಗ ಮಾತ್ರ ಕೆಲವು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸುತ್ತಾರೆ. ಅದನ್ನು ಅಭಿವೃದ್ಧಿಪಡಿಸುವ ಹಾಗೂ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಉನ್ನತೀಕರಣ ಮಾಡುವ ಗೋಜಿಗೆ ಹೋಗಿಲ್ಲ. ಶಿವಕುಮಾರ ಸ್ವಾಮೀಜಿಯ ಹೆಸರಿನಲ್ಲಿ ನಡೆಯುವ ವಿಶೇಷ ಒಂದು ಕಾಮಗಾರಿಗೆ ಕಾಳಜಿ ವಹಿಸದ ಸರ್ಕಾರದ ವಿರುದ್ಧ ಮುಂದಿನ ದಿನಗಳಲ್ಲಿ ಮಠದ ಭಕ್ತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಕರೆ ನೀಡಿದರು. ದಾಸೋಹಕ್ಕೆ ಬಂದ ಜನಸಾಗರ: ಶ್ರೀ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ನಡೆಯುತ್ತಿದ್ದ ದಾಸೋಹ ದಿನಕ್ಕೆ ಆಗಮಿಸಿದ ಸಾವಿರಾರು ಮಂದಿ ಭಕ್ತರು ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವೀರಶೈವ ಸೌಹಾರ್ದ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೇತನ್. ಟೌನ್ ವೀರಶೈವ ಸಮಾಜದ ಉಪಾಧ್ಯಕ್ಷ ಬಸವರಾಜು , ಮಾಜಿ ಅಧ್ಯಕ್ಷ ಅಂಗಡಿ ಮಹದೇವಣ್ಣ, ಹೋಟೆಲ್ ಆರಾಧ್ಯ , ವಕೀಲರಾದ ಕುಮಾರ್ , ಚಂದ್ರಶೇಖರ್, ರಾಜಣ್ಣ, ಕಾರ್ಯದರ್ಶಿ ಕಗ್ಗೆರೆ ಪ್ರಸಾದ್, ಗಂಗಾಧರ್ ಶಾಸ್ತ್ರಿ ಸಂಜಯ್ , ಸೇರಿದಂತೆ ಇತರರು ಇದ್ದರು .