ಮುಂಡರಗಿ: ತಾಲೂಕಿನ ಸಿಂಗಟಾಲೂರು ಗ್ರಾಮದ ತುಂಗಭದ್ರಾ ನದಿ ತೀರದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ದುಷ್ಕರ್ಮಿಗಳು ಶನಿವಾರ ಮಧ್ಯರಾತ್ರಿ ಶಿವಲಿಂಗ ಹಾಗೂ ನಂದಿ ಮೂರ್ತಿಗಳನ್ನು ಭಗ್ನಗೊಳಿಸಿರುವ ಘಟನೆ ಜರುಗಿದ್ದು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಾ ಶಿವರಾತ್ರಿಯ ಸಂದರ್ಭದಲ್ಲಿ ಶಿವಲಿಂಗ ಹಾಗೂ ನಂದಿ ಮೂರ್ತಿಗಳನ್ನು ದುಷ್ಕರ್ಮಿಗಳು ಒಡೆದು ಹಾಕಿರುವುದು ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ. ಅಲ್ಲದೇ ದೇವಸ್ಥಾನದ ಸಮೀಪದಲ್ಲಿರುವ ಹೊನ್ನತ್ತೆಮ್ಮನ ಮೂರ್ತಿಗೂ ದುಷ್ಕರ್ಮಿಗಳು ಹಾನಿ ಮಾಡಿದ್ದಾರೆ.ಭಾನುವಾರ ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ರಾಮಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವುದಕ್ಕಾಗಿ ಸಿಂಗಟಾಲೂರು ಗ್ರಾಮಸ್ಥರು ಶನಿವಾರ ದೇವಸ್ಥಾನಕ್ಕೆ ತೆರಳಿ ಸುಣ್ಣ, ಬಳಿದು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ಭಾನುವಾರ ಬೆಳಗ್ಗೆ ಪೂಜೆಗಾಗಿ ತೆರಳಿದಾಗ ಮೂರ್ತಿಗಳು ಭಗ್ನಗೊಂಡಿರುವುದು ಕಂಡುಬಂದಿದ್ದು ಭಕ್ತರನ್ನು ಆತಂಕಕ್ಕೀಡು ಮಾಡಿದೆ.ಮೂರ್ತಿಗಳು ಭಗ್ನಗೊಂಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಗ್ರಾಮಸ್ಥರು ತಂಡೋಪತಂಡವಾಗಿ ದೇವಸ್ಥಾನದ ಬಳಿಗೆ ಆಗಮಿಸಿ ದುಷ್ಕರ್ಮಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದರು. ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆಗೆ ಒಳಪಡಿಸಬೇಕೆಂದು ಸಿಂಗಟಾಲೂರು ಗ್ರಾಪಂ ಅಧ್ಯಕ್ಷ ಸುನೀಲರಡ್ಡಿ ನೀರಲಗಿ, ಭಕ್ತರಾದ ಕೊಟ್ರೇಶ ಬಳ್ಳೊಳ್ಳಿ, ಗುಡದೀರಯ್ಯ ಹಿರೇಮಠ, ಕಾಶಪ್ಪ ಬಾಗೇವಾಡಿ, ಬಸವರಾಜ ಬಿಳಿಮಗ್ಗದ, ಬಸವೇಶ್ವರ ಕುಮಾರ ಸದಾಶಿವಪ್ಪನವರ, ಮರಡ್ಡಿ ಮುದುಕನಗೌಡ್ರ ಸೇರಿದಂತೆ ಅನೇಕ ಭಕ್ತರು ಒತ್ತಾಯಿಸಿದ್ದಾರೆ.